ಮೈಸೂರು ಮಹಾನಗರ ಪಾಲಿಕೆ ಚುನಾವಣೆ: ಶೇ.50 ರಷ್ಟು ಮತದಾನ

Update: 2018-08-31 16:55 GMT

ಮೈಸೂರು,ಆ.31: ಮೈಸೂರು ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯಲ್ಲಿ ಮತದಾರರು ನೀರಸ ಪ್ರತಿಕ್ರಿಯೆ ತೋರಿಸಿದ್ದು, ಒಟ್ಟಾರೆ ಶಾಂತಿಯುತ ಶೇ.50.01 ರಷ್ಟು ಮತದಾನ ನಡೆದಿದೆ.

ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾದ ಮತದಾನ ಮಂದಗತಿಯಲ್ಲೇ ಪ್ರಾರಂಭವಾಯಿತು. ಮತದಾರರು ಅಷ್ಟೊಂದು ಕೂತುಹಲದಿಂದ ಮತಚಲಾವಣೆ ಮಾಡಿದ್ದು ಕಂಡುಬರಲಿಲ್ಲ, ವಾರ್ಡ್‍ಗಳ ಮರುವಿಂಗಡಣೆಯಲ್ಲಿ ಗೊಂದಲ ಸೃಷ್ಷಿಯಾಗಿ ಯಾವ ಮತಗಟ್ಟೆಯಲ್ಲಿ ಹಕ್ಕು ಚಲಾಯಿಲಬೇಕು ಎಂದು ಗೊಂದಲವುಂಟಾಗಿ ಕೆಲವರು ಮತದಾನಕ್ಕೆ ಬರಲಿಲ್ಲ. ಮತದಾನದ ಯಂತ್ರಗಳು ಇವಿಎಂ ಮಷಿನ್‍ಗಳು ಎಲ್ಲಿಯೂ ಕೈಕೊಟ್ಟ ಮಾಹಿತಿ ಲಭ್ಯವಾಗಿಲ್ಲ. ಎಲ್ಲಾ ಕಡೆ ಇವಿಎಂ ಮಷಿನ್‍ಗಳು ಉತ್ತಮ ರೀತಿಯಲ್ಲಿ ಕೆಲಸ ಮಾಡಿದೆ ಎಂದು ಹೇಳಲಾಗಿದೆ.

ಜೆಡಿಎಸ್ ಅಭ್ಯರ್ಥಿಯಿಂದ ಹಣ ಹಂಚಿಕೆ: ಕಾರ್ಯಕರ್ತರಿಗೆ ಜೆಡಿಎಸ್ ಅಭ್ಯರ್ಥಿ ಕಡೆಯಿಂದ ಹಣ ಹಂಚಿಕೆಯಾಗಿದೆ ಎನ್ನಲಾಗಿದ್ದು, ಹಂಚಿಕೆ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಸುಜುಕಿ ಆಕ್ಸಸ್ ಬೈಕ್ ನಲ್ಲಿ ಹಂಚುತ್ತಿದ್ದ 3 ಲಕ್ಷದ 14ಸಾವಿರ ರೂ. ನಗದು, 3  ಜೊತೆ ಬೆಳ್ಳಿ ದೀಪವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಾಲಿಕೆ ವಾರ್ಡ್ 6 ರ ಜೆಡಿಎಸ್ ಅಭ್ಯರ್ಥಿ ಎಸ್.ಬಿ.ಎಂ. ಮಂಜು ಅವರಿಗೆ ಹಣ ಮತ್ತು ಬೆಳ್ಳಿ ವಸ್ತುಗಳು ಸೇರಿವೆ ಎನ್ನಲಾಗಿದೆ. ಗೋಕುಲಂ ಕಾಂಟೂರ್ ರಸ್ತೆಯಲ್ಲಿ ಹಣ ಹಂಚಿಕೆ ಆರೋಪ ಕೇಳಿ ಬಂದಿದ್ದು, ಹಣ, ಬೆಳ್ಳಿ ವಸ್ತುಗಳು, ಸ್ಕೂಟರ್ ಗಳನ್ನು ವಿವಿಪುರಂ ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ: ಇದೇ ವೇಳೆ ಜೆಡಿಎಸ್ ಕಾರ್ಯಕರ್ತರು ರಾಜಾರೋಷವಾಗಿ ಹಣ ಹಂಚುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿ ಒಬ್ಬರಿಗೊಬ್ಬರು ಮಾತಿನ ಚಕಮಕಿ ನಡೆಸಿ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋದರು. ಇದರಿಂದ ಎಚ್ಚೆತ್ತ ಪೊಲೀಸರು ತಕ್ಷಣ ಎರಡೂ ಗುಂಪುಗಳನ್ನು ಚದುರಿಸಲು ಲಘು ಲಾಠಿ ಚಾರ್ಚ್ ನಡೆಸಿದರು. ಒಂದು ಹಂತದಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಯಿತು. ತಕ್ಷಣ ಹೆಚ್ಚಿನ ಪೊಲೀಸರನ್ನು ಸ್ಥಳಕ್ಕೆ ನಿಯೋಜಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ: ವಾರ್ಡ್ ನಂ 35 ರಲ್ಲಿ ಬಿಜೆಪಿ ಮುಖಂಡ ಸಂದೇಶ್ ಸ್ವಾಮಿ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಯುವ ಬ್ರಿಗೇಡ್ ಕಾರ್ಯಕರ್ತರು ತ್ರಿವೇಣಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಸಂದೇಶ್ ಸ್ವಾಮಿ ಅವರ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳನ್ನು ಕೂಡಲೇ ಬಂಧಿಸಬೇಕು, ಇದರ ಹಿಂದೆ ಇರುವ ವ್ಯಕ್ತಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

ಬಿಗಿ ಬಂದೋಬಸ್ತ್: ಮೈಸೂರು ನಗರ ಪೊಲೀಸ್ ಆಯುಕ್ತ ಸುಬ್ರಮಣ್ಯೇಶ್ವರ ರಾವ್ ಅವರ ಮಾರ್ಗದರ್ಶನದಲ್ಲಿ ಡಿಸಿಪಿ ವಿಷ್ಣುವರ್ಧನ್ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆಯಾಗಿ ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು.

ಅಶ್ವಾರೋಹಿ ಪೊಲೀಸರ ಪಥಸಂಚಲನ: ಕೆಲವು ಸೂಕ್ಷ್ಮ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಹಾಗೂ ಹೆಚ್ಚು ಗುಂಪುಗಳು ಸೇರಿದ ಕಡೆಗಳಲ್ಲಿ ಅಶ್ವಾರೋಹಿ ಪೊಲೀಸರು ಪಥ ಸಂಚಲನ ನಡೆಸಿ ಎಚ್ಚರಿಕೆ ನೀಡಿ ಗುಂಪುಗಳನ್ನು ಚದುರಿಸಿದರು.

ಹಕ್ಕು ಚಲಾಯಿಸಿದ ಅನಾಥಾಶ್ರಮದ ವೃದ್ಧರು: ಮೈಸೂರಿನ ಗಾಂಧಿ ನಗರದಲ್ಲಿರುವ ಅನಾಥರ ವೃದ್ಧಾಶ್ರಮದಲ್ಲಿರುವ ವೃದ್ಧರೂ ಕೂಡ ಮತದಾನದಲ್ಲಿ ಪಾಲ್ಗೊಂಡು ತಮ್ಮ ಹಕ್ಕನ್ನು ಚಲಾವಣೆ ಮಾಡಿದರು. 

ಸೆ.3 ರಂದು ಮತ ಎಣಿಕೆ: ಮೈಸೂರು ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯ ಮತ ಪೆಟ್ಟಿಗೆಗಳು ಪಡುವಾರಹಳ್ಳಿಯ ಮಹರಾಣಿ ಕಾಲೇಜಿನ ಸ್ಟ್ರಾಂಗ್ ರೂಂ ಸೇರಿವೆ. ಸೆ.3 ರಂದು ಮತ ಎಣಿಕೆ ನಡೆಯಲಿದ್ದು, ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. 

ಶಾಸಕದ್ವಯರ ಮತದಾನ: ಮೈಸೂರು ನಗರ ವ್ಯಾಪ್ತಿಯ ಮೂವರು ಶಾಸಕರು ತಮ್ಮ ಹಕ್ಕನ್ನು ಚಲಾಯಿಸಿದರು. ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಕೆ.ಜಿ.ಕೊಪ್ಪಲಿನ ವಾರ್ಡ್‍ನಲ್ಲಿ ಪತ್ನಿ ಸಮೇತ ಆಗಮಿಸಿ ಮತಚಲಾಯಿಸಿದರು. ಕೆ.ಆರ್.ಕ್ಷೇತ್ರದ ಶಾಸಕ ರಾಮದಾಸ್ ವಾರ್ಡ್ ಸಂಖ್ಯೆ 55 ರಲ್ಲಿ ಮತದಾನ ಮಾಡಿದರು.

ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ತಮ್ಮ ಪತ್ನಿ ಮಗ ಮತ್ತು ತಾಯಿ ಜೊತೆಯಲ್ಲಿ ಬನುಮಯ್ಯ ಕಾಲೇಜಿನ ಮತಗಟ್ಟೆಗೆ ಆಗಮಿಸಿ ಮತಚಲಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News