ಚಿಕ್ಕಮಗಳೂರು: ಧರೆಗುರುಳಿದ ಬೃಹತ್ ಮರ; ವಾಹನ ಸಂಚಾರ ಸ್ಥಗಿತ

Update: 2018-08-31 17:22 GMT

ಚಿಕ್ಕಮಗಳೂರು, ಆ.31: ಜಿಲ್ಲೆಯ ಮಲೆನಾಡು ಭಾಗದಲ್ಲಿ ಬಿಸಿಲಿನೊಂದಿಗೆ ಸಾಧಾರಣ ಮಳೆ ಮುಂದುವರಿದಿದ್ದು, ಎನ್.ಆರ್.ಪುರ ತಾಲೂಕು ವ್ಯಾಪ್ತಿಯಲ್ಲಿ ಬೆಳ್ಳಂಬೆಳಗ್ಗೆ ಭಾರೀ ಗಾತ್ರದ ಮರವೊಂದು ರಾ.ಹೆದ್ದಾರಿ ಮೇಲೆ ಉರುಳಿ ಬಿದ್ದ ಪರಿಣಾಮ ಸುಮಾರು 4 ಗಂಟೆಗಳ ಕಾಲ ಹೆದ್ದಾರಿಯಲ್ಲಿ ವಾಹನಸಂಚಾರ ಬಂದ್ ಆಗಿದ್ದ ಘಟನೆ ಶುಕ್ರವಾರ ನಡೆದಿದೆ.

ಎನ್.ಆರ್.ಪುರ ತಾಲೂಕು ವ್ಯಾಪ್ತಿಯ ಕಡಬಗೆರೆ ಸಮೀಪದ ಎಲೆಕಲ್ಲು ಘಾಟಿ ಎಂಬಲ್ಲಿ ಬೆಳಗ್ಗೆ ಭಾರೀ ಗಾತ್ರದ ಮರ ಉರುಳಿ ಬಿದ್ದಿ ಪರಿಣಾಮ ಚಿಕ್ಕಮಗಳೂರು, ಬಾಳೆಹೊನ್ನೂರು, ಕಳಸ ಶೃಂಗೇರಿ ಸಂಪರ್ಕದ ಹೆದ್ದಾರಿಯಲ್ಲಿ ವಾಹನ ಸಂಚಾರ ಕೆಲ ಗಂಟೆಗಳ ವರೆಗೆ ಬಂದ್ ಆಗಿತ್ತು. ರಸ್ತೆ ಬಂದ್ ಪರಿಣಾಮ ಎರಡೂ ಬದಿಗಳಲ್ಲಿ ನೂರಾರು ವಾಹನಗಳು ಜಮಾವಣೆಗೊಂಡು ಹೆದ್ದಾರಿಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿತ್ತು. ಇದರಿಂದಾಗಿ ಪ್ರವಾಸಿಗರು ಪರದಾಡುವಂತಾಗಿತ್ತು.

ವಾಹನ ಸಂಚಾರ ಬಂದ್ ಆದ ಹಿನ್ನೆಲೆಯಲ್ಲಿ ಬಾಳೆಹೊನ್ನೂರು ಪೊಲೀಸರು ಹಾಗೂ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ನಂತರ ಸ್ಥಳೀಯರ ಹಾಗೂ ವಾಹನ ಸವಾರರ ನೆರವಿನೊಂದಿಗೆ ಹೆದ್ದಾರಿಯ ಮೇಲಿದ್ದ ಮರ ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದರು. ಮಧ್ಯಾಹ್ನದ ವೇಳೆ ಮರ ತೆರವು ಮಾಡಿದ್ದರಿಂದ ಬಂದ್ ಆಗಿದ್ದ ವಾಹನಗಳ ಸಂಚಾರ ಮತ್ತೆ ಪುನಾರಂಭಗೊಂಡಿತೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News