ಆಂಬುಲೆನ್ಸ್ ಗೆ ದಾರಿ ಬಿಡದೇ ಸತಾಯಿಸಿದ ಕಾರು ಚಾಲಕ: ಚಾಲಕನ ವಿರುದ್ಧ ಆಕ್ರೋಶ

Update: 2018-08-31 17:27 GMT

ಚಿಕ್ಕಮಗಳೂರು, ಆ.31: ತುರ್ತು ಚಿಕಿತ್ಸೆಯ ಆವಶ್ಯಕತೆ ಇದ್ದ ರೋಗಿಯೊಬ್ಬರನ್ನು ಆಂಬುಲೆನ್ಸ್ ವಾಹನದಲ್ಲಿ ಕೊಂಡೊಯ್ಯುತ್ತಿದ್ದ ಮಾರ್ಗ ಮಧ್ಯೆ ಕಾರು ಚಾಲಕನೋರ್ವ ಆಂಬುಲೆನ್ಸ್ ಗೆ ದಾರಿ ಬಿಡದೇ ಸತಾಯಿಸಿದ ಘಟನೆಯೊಂದು ಜಿಲ್ಲಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಮಾವೀಯತೆ ಮೆರದ ಕಾರು ಚಾಲಕ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರು ನಗರದ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ವ್ಯಕ್ತಿಯೊಬ್ಬರಿಗೆ ಮಂಗಳೂರಿನಲ್ಲಿ ತುರ್ತಾಗಿ ಚಿಕಿತ್ಸೆಗೆ ದಾಖಲಿಸಬೇಕಿತ್ತು. ಈ ಹಿನ್ನೆಲೆಯಲ್ಲಿ ರೋಗಿಯ ಸಂಬಂಧಿಕರು ಗುರುವಾರ ಸಂಜೆನ ಆಂಬುಲೆನ್ಸ್ ವೊಂದರಲ್ಲಿ ಚಾರ್ಮಾಡಿ ಘಾಟ್ ಮಾರ್ಗವಾಗಿ ಮಂಗಳೂರಿಗೆ ತೆರಳುತ್ತಿದ್ದರು. ಈ ವೇಳೆ ಮಂಗಳೂರು ಸಮೀಪದ ಬಿಸಿ ರೋಡ್ ಸಮೀಪದಲ್ಲಿ ಆಂಬುಲೆನ್ಸ್ ಅನ್ನು ಓವರ್‍ಟೇಕ್ ಮಾಡಿದ ಕಾರೊಂದು ಬಳಿಕ ಸುಮಾರು 15 ಕಿಮೀ ವರೆಗೆ ಉದ್ದೇಶಪೂರ್ವಕವಾಗಿ ಆಂಬುಲೆನ್ಸ್ ಅನ್ನು ಮುಂದೆ ತೆರಳಲು ಬಿಡದೇ ಸತಾಯಿಸಿದೆ ಎಂದು ತಿಳಿದು ಬಂದಿದೆ. 

ಈ ಘಟನೆ ಸಂಬಂಧ ಆಂಬುಲೆನ್ಸ್ ನಲ್ಲಿದ್ದವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳ ಮೂಲಕ ಹರಿಯ ಬಿಟ್ಟಿದ್ದು, ವಿಡಿಯೋ ಜಿಲ್ಲಾದ್ಯಂತ ವೈರಲ್ ಆಗಿದೆ. ದೃಶ್ಯ ವೀಕ್ಷಿಸಿದ ಜಾಲತಾಣಗಳ ಬಳಕೆದಾರರು ಕಾರು ಚಾಲಕನ ಅಮಾನವೀಯ ನಡವಳಿಕೆ ವಿರುದ್ಧ ಕಾಮೆಂಟ್ ಹಾಕಿದ್ದು, ವ್ಯಕ್ತಿಯೊಬ್ಬರ ಜೀವದೊಂದಿಗೆ ಆಟವಾಡಿದ ಕಾರು ಚಾಲಕನನ್ನು ಕಾರಿನ ನಂಬರ್ ಮೂಲಕ ಪತ್ತೆ ಹಚ್ಚಿ ಕಾನೂನು ಕ್ರಮ ವಹಿಸಬೇಕೆಂದು ಪೊಲೀಸ್ ಇಲಾಖೆಗೆ ಮನವಿಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News