ದಾವಣಗೆರೆ: ಮರಗಳ ಮಾರಣ ಹೋಮ ಖಂಡಿಸಿ ಪ್ರತಿಭಟನೆ

Update: 2018-08-31 18:03 GMT

ದಾವಣಗೆರೆ,ಆ.31: ನಗರದ ಪ್ರಗತಿಯ ನೆಪದಲ್ಲಿ ರಸ್ತೆಗಳಲ್ಲಿ, ಬಡಾವಣೆಗಳಲ್ಲಿ ಮರಗಳ ಮಾರಣ ಹೋಮ ನಡೆಸುತ್ತಿರುವುದನ್ನು ವಿರೋಧಿಸಿ ಎಸ್‍ಯುಸಿಐ ಮತ್ತು ಫುಟ್‍ಪಾತ್ ಚಿಲ್ಲರೆ ತರಕಾರಿ ವ್ಯಾಪಾರಸ್ಥರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು.

ನಗರದ ಶಾಮನೂರು ರಸ್ತೆಯ ಸ್ಮಾರ್ಟ್ ಸಿಟಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಮುಖಂಡರು ಮಾತನಾಡಿ, ಅಭಿವೃದ್ದಿಯ ಹೆಸರಿನಲ್ಲಿ ರಸ್ತೆ ಅಗಲೀಕರಣ, ಉನ್ನತೀಕರಣ, ಬೀದಿ ದೀಪಗಳ ಅಳವಡಿಕೆ ಮಾಡಲಾಗುತ್ತಿರುವುದು ಸ್ವಾಗತಾರ್ಹ. ಆದರೆ, ಅಭಿವೃದ್ದಿಯ ಹೆಸರಿನಲ್ಲಿ ಬೃಹತ್ ಮರಗಳನ್ನು ಕಡಿಯುತ್ತಿರುವುದು ವಿಷಾಧಕರ ಸಂಗತಿ. ಇದರಿಂದಾಗಿ ಜಿಲ್ಲೆಯ ಉಷ್ಟಾಂಶ ಗಣನೀಯವಾಗಿ ಏರಿಕೆಯಾಗುತ್ತಿದೆ. ಧೂಳು ಸಮಸ್ಯೆಯಲ್ಲಿ ರಾಜ್ಯದಲ್ಲೇ ದಾವಣಗೆರೆ ಮೂರನೇ ಸ್ಥಾನದಲ್ಲಿದೆ. ಅಸ್ತಮಾದಂತಹ ರೋಗಗಳು ಹೆಚ್ಚಾಗುತ್ತಿವೆ ಎಂದರು.

ಸ್ಮಾರ್ಟ್ ಸಿಟಿ ನಿಗಮವು ನಗರದ ಮಾರುಕಟ್ಟೆಯ ಪ್ರಮುಖ ಭಾಗಗಳಾದ ಚೌಕಿಪೇಟೆ, ಎಂಜಿ ರಸ್ತೆ, ದೊಡ್ಡಪೇಟೆ ಮತ್ತಿತರ ಭಾಗದಲ್ಲಿ ಕಳೆದ 8 ತಿಂಗಳಿನಿಂದಲೂ ಕಾಮಗಾರಿ ನಡೆಸುತ್ತಿದ್ದಾರೆ. ಆದರೆ, ಇದುವರೆಗೂ ಪೂರ್ಣಗೊಳಿಸಿಲ್ಲ. ಅಪೂರ್ಣ ಕಾಮಗಾರಿಯಿಂದಾಗಿ ವ್ಯಾಪಾರಸ್ಥರು, ವಾಹನ ಸವಾರರು ಹಾಗೂ ಪಾದಾಚಾರಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಚಿಲ್ಲರೆ ತರಕಾರಿ ವ್ಯಾಪಾರಸ್ಥರು ಕುಟುಂಬ ನಿರ್ವಹಣೆ ಮಾಡುವುದು ಕಷ್ಟಕರವಾಗುತ್ತಿದೆ. ಆದ್ದರಿಂದ ಬೀದಿಬದಿಯ ವ್ಯಾಪಾರಸ್ಥರಿಗೆ ಮಳಿಗೆಗಳನ್ನು ನಿರ್ಮಿಸಿ ಉಚಿತವಾಗಿ ವಿತರಿಸಬೇಕು. ಅಧಿಕೃತವಾಗಿ ಪರವಾನಗಿ ಹಾಗೂ ಗುರುತಿನ ಚೀಟಿ ನೀಡಬೇಕು. ಚಾಮರಾಜೇಂದ್ರ ವೃತ್ತದಿಂದ ಮಾರ್ಕೆಟ್ ರಿಂಗ್ ರಸ್ತೆ ಮರ ಕಡಿಯುವುದನ್ನು ನಿಲ್ಲಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯ ನೇತೃತ್ವವನ್ನು ಮಂಜುನಾಥ್ ಕೈದಾಳೆ ವಹಿಸಿದ್ದರು. ತಿಪ್ಪೇಸ್ವಾಮಿ, ಮಂಜುನಾಥ ರೆಡ್ಡಿ, ಭಾರತಿ, ಪೂಜಾ, ಸೌಮ್ಯ, ನಾಗಜ್ಯೋತಿ, ನಾಗಸ್ಮಿತಾ ಮತ್ತು ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾದ ರಮೇಶ್, ಖಜಾಂಚಿ ವೀರೇಶ್, ಗೌರವಾಧ್ಯಕ್ಷ ರಾಮಣ್ಣ, ಕಾರ್ಯದರ್ಶಿ ಇಸ್ಮಾಯಿಲ್ ಹಾಗೂ ನೂರಾರು ವ್ಯಾಪಾರಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News