ಕುಮಾರಸ್ವಾಮಿ ಅವಧಿ ಪೂರ್ಣಗೊಳಿಸಲಿದ್ದಾರೆ: ಸತೀಶ್ ಜಾರಕಿಹೊಳಿ

Update: 2018-09-01 13:18 GMT

ಬೆಳಗಾವಿ, ಸೆ. 1: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರೆ ಐದು ವರ್ಷ ತಮ್ಮ ಅಧಿಕಾರ ಅವಧಿ ಪೂರ್ಣಗೊಳಿಸಲಿದ್ದಾರೆ. ಹೊಸ ಮುಖ್ಯಮಂತ್ರಿಯ ವಿಚಾರ ಇದೀಗ ಮುಗಿದ ಅಧ್ಯಾಯ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇದೇ ತಿಂಗಳಲ್ಲಿ ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿ ಅಧ್ಯಕ್ಷರ ನೇಮಕ ನಡೆಯಲಿದ್ದು, ಜಿಲ್ಲೆಗೆ ನ್ಯಾಯ ಸಿಗುವ ನಿರೀಕ್ಷೆಯಿದೆ ಎಂದು ಇದೇ ಸಂದರ್ಭದಲ್ಲಿ ಭರವಸೆ ವ್ಯಕ್ತಪಡಿಸಿದರು.

ಮೈತ್ರಿ ಸರಕಾರ ನಡೆಸುವ ಸಂದರ್ಭದಲ್ಲಿ ಸಮಸ್ಯೆಗಳು ಸಹಜ, ಯಾವಾಗ ಬೇಕಾದರೂ ಸಮನ್ವಯ ಸಮಿತಿ ಕರೆಯಲು ಅವಕಾಶವಿದೆ. ಸರಕಾರದ ಆಗು-ಹೋಗುಗಳನ್ನು ಚರ್ಚಿಸಲಿದೆ. ಎಷ್ಟೇ ಪ್ರಬಲ ಮುಖಂಡರಿದ್ದರೂ ಕೊನೆಗೆ ಪಕ್ಷವೇ ಮುಖ್ಯ. ಎಲ್ಲರೂ ಹೈಕಮಾಂಡ್ ಮಾತು ಕೇಳಬೇಕಾಗುತ್ತದೆ ಎಂದು ಹೇಳಿದರು.

ಲೋಕಸಭಾ ಚುನಾವಣೆ ಹಿನ್ನೆಲೆ ಇಂದು ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ನೇತೃತ್ವದಲ್ಲಿ ಸಭೆ ಕರೆಯಲಾಗಿದೆ. ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ದೂರನ್ನು ಆಧರಿಸಿ ಸಭೆ ಕರೆದಿಲ್ಲ. ಚುನಾವಣೆ ಸಿದ್ಧತೆ, ಅಭ್ಯರ್ಥಿಗಳ ಆಯ್ಕೆ ಕುರಿತು ಸಭೆ ನಡೆಯಲಿದೆ. ನಮ್ಮ ಗೊಂದಲವನ್ನು ಪರಸ್ಪರ ಮಾತುಕತೆ ಮೂಲಕ ಇತ್ಯರ್ಥ ಪಡಿಸಿಕೊಳ್ಳುತ್ತವೆ ಎಂದರು. ಪಕ್ಷದ ವರಿಷ್ಠರಿಗೆ ಯಾರ ಶಕ್ತಿ ಏನು ಎಂಬುದು ಗೊತ್ತಿದೆ. ಎಲ್ಲ ನಿರ್ಧಾರವನ್ನ ಹೈಕಮಾಂಡ್ ತೆಗೆದುಕೊಳ್ಳುತ್ತದೆ. ವೇಣುಗೋಪಾಲ್ ಕರೆದ ಇಂದಿನ ಸಭೆಗೆ ನಾನು ಹೋಗುತ್ತಿಲ್ಲ. ಇನ್ನು ಪಿಎಲ್ಡಿ ಬ್ಯಾಂಕ್‌ಗೆ ಸಂಬಂಧಪಟ್ಟಂತೆ ಚುನಾವಣೆ ಕಾನೂನು ಬದ್ಧವಾಗಿ ನಡೆಯುತ್ತಿದೆ ಎಂದು ಸ್ಪಷ್ಟಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News