ಚಿಕ್ಕಮಗಳೂರು: ಸೆ.3 ರಿಂದ ಪ್ಲಾಸ್ಟಿಕ್ ಮಾರಾಟ ನಿಷೇಧ ಕಡ್ಡಾಯ; ನಗರಸಭಾಧ್ಯಕ್ಷೆ ಶಿಲ್ಪಾ ರಾಜಶೇಖರ್

Update: 2018-09-01 14:45 GMT

ಚಿಕ್ಕಮಗಳೂರು, ಸೆ.1: ನಗರಸಭೆಯ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಮಾರಾಟವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ಈ ನಿಯಮ ಮೀರಿದರೆ ಸಂಬಂಧಿತ ಅಂಗಡಿ ಮಾಲೀಕರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭಾಧ್ಯಕ್ಷೆ ಶಿಲ್ಪಾ ರಾಜಶೇಖರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಡ್ಡಾಯ ಪ್ಲಾಸ್ಟಿಕ್ ನಿಷೇದ ಸೆ.3 ರಿಂದ ಜಾರಿಗೆ ಬರಲಿದ್ದು, ಅಂದಿನಿಂದ ಸೆ.10ರವರೆಗೆ ನಗರಸಭಾ ನೌಕರರು ಹಾಗೂ ಅ„ಕಾರಿಗಳು ನಗರದಲ್ಲಿ ಕಾರ್ಯಾಚರಣೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.

ಪ್ಲಾಸ್ಟಿಕ್ ಮಾರಾಟ ತಕ್ಷಣಕ್ಕೆ ನಿಷೇಧ ಮಾಡುವುದರಿಂದ ವ್ಯಾಪಾರಕ್ಕೆ ತುಂಬಾ ತೊಂದರೆಯಾಗಲಿದೆ ಎಂದು ವರ್ತಕರ ಸಂಘದ ಪದಾಧಿಕಾರಿಗಳು ಹಾಗೂ ವರ್ತಕರು ತಿಳಿಸಿದ್ದರು. ಈ ಹಿನ್ನಲೆಯಲ್ಲಿ ವರ್ತಕರೊಂದಿಗೆ ಸಭೆಯನ್ನು ನಡೆಸಿದ್ದ ಸಂದರ್ಭದಲ್ಲಿ 6 ತಿಂಗಳ ಕಾಲಾವಕಾಶ ಕೇಳಿದ್ದರು. ಈ ಕಾಲಾವಕಾಶ ಮುಕ್ತಾಯಗೊಂಡಿದ್ದು, ಈಗಾಗಲೇ 7 ತಿಂಗಳಾಗಿವೆ. ಆದರೆ, ವರ್ತಕರು ಪ್ಲಾಸ್ಟಿಕ್ ಮಾರಾಟ ಮಾಡುವುದನ್ನು ನಿಲ್ಲಿಸಿಲ್ಲ. ನಗರದಲ್ಲೆಡೆ ಪ್ಲಾಸ್ಟಿಕ್ ಕಂಡು ಬರುತ್ತಿದ್ದು, ಇದರಿಂದ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ವರ್ತಕರು, ಸೆ. 3 ರಿಂದ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಮಾರಾಟ ಮಾಡಬಾರದು. ಕಡಿಮೆ ಸಾಮರ್ಥ್ಯದ, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಪ್ಲಾಸ್ಟಿಕ್ ಮಾರಾಟ ಮಾಡುವುದು ಕಂಡು ಬಂದರೆ ಅವುಗಳನ್ನು ವಶಕ್ಕೆ ತೆಗೆದುಕೊಂಡು 10 ಸಾವಿರ ರುಪಾಯಿಗೂ ಮೇಲ್ಪಟ್ಟು ದಂಡ ವಿಧಿಸಿ ಕಾನೂನು ಕ್ರಮ ಜರುಗಿಸಲಾಗುವುದು. ಇದರ ಜತೆಗೆ ಅಂಗಡಿಯನ್ನು ಮುಚ್ಚಿಸಲಾಗುವುದು ಎಂದು ಹೇಳಿದ್ದಾರೆ.

ಆ ಸಂದರ್ಭದಲ್ಲಿ ಆಗುವ ಅನಾನುಕೂಲಗಳಿಗೆ ವರ್ತಕರು ಅವಕಾಶ ನೀಡಬಾರದು. ಗ್ರಾಹಕರಿಗೆ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಕವರ್ ಗಳನ್ನು ನೀಡಬಾರದು. ಇದಕ್ಕೆ ಪರ್ಯಾಯವಾಗಿ ಬೇರೆ ವಸ್ತುಗಳಿಂದ ತಯಾರು ಮಾಡಿರುವ ಬ್ಯಾಗ್‍ಗಳನ್ನು ನೀಡಬೇಕು. ಈ ಸಂಬಂಧ ಗ್ರಾಹಕರಲ್ಲೂ ಅರಿವು ಮೂಡಿಸುವ ಕೆಲಸವನ್ನು ಅಂಗಡಿಯವರು ಮಾಡಬೇಕು ಎಂದು ತಿಳಿಸಿದ್ದಾರೆ.

ಪರಿಸರ ಸ್ನೇಹಿ ಗಣಪ: ಗಣೇಶ ಚತುರ್ಥಿ ಸಂದರ್ಭದಲ್ಲಿ ಮಾರಾಟ ಮಾಡಲು ಸಿದ್ಧಪಡಿಸುವ ಗಣೇಶ ಮೂರ್ತಿಗಳಿಗೆ ಕೃತಕ ಬಣ್ಣವನ್ನು ಹಚ್ಚಬಾರದು. ಇಂತಹ ಮೂರ್ತಿಗಳಿಂದ ನೀರು ಮತ್ತು ಜಲಚರ ಪ್ರಾಣಿಗಳಿಗೆ ತುಂಬಾ ತೊಂದರೆಯಾಗಲಿದೆ ಎಂದು ನಗರಸಭಾಧ್ಯಕ್ಷೆ ಶಿಲ್ಪಾ ರಾಜಶೇಖರ್ ತಿಳಿಸಿದ್ದಾರೆ.

ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಕೃತಕ ಬಣ್ಣವನ್ನು ಗಣೇಶ ಮೂರ್ತಿಗಳಿಗೆ ಹಚ್ಚಿರುವುದು ಕಂಡು ಬಂದರೆ ಮೂರ್ತಿ ತಯಾರಕರಿಗೆ 10 ಸಾವಿರ ರುಪಾಯಿ ದಂಡ ವಿಧಿಸಲಾಗುವುದು. ಕೃತಕ ಬಣ್ಣ ಹಚ್ಚಿರುವ ಗಣಪತಿಗಳು ತಪಾಸಣೆಯ ವೇಳೆಯಲ್ಲಿ ಕಂಡು ಬಂದರೆ ಅಂತಹ ಮೂರ್ತಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗುವುದು. ಗಣೇಶ ಹಬ್ಬದಂದು ನಗರಸಭೆಯ ಅಧಿಕಾರಿಗಳು ಮಾರಾಟ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದ ಅವರು, ಕೃತಕ ಬಣ್ಣ ಹಚ್ಚಿರುವ ಗಣೇಶ ಮೂರ್ತಿಗಳು ಕಂಡು ಬಂದರೆ ಸಾರ್ವಜನಿಕರು ಅವುಗಳನ್ನು ಖರೀದಿ ಮಾಡದೆ ನಗರಸಭೆಯ ಗಮನಕ್ಕೆ ತರಬೇಕು. ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಖರೀದಿಸಿ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News