ಚಿಕ್ಕಮಗಳೂರು: ವಸತಿ ಗೃಹಗಳ ಮಾಲಕರಿಂದ ಕುಡಿಯುವ ನೀರಿಗೆ ತೊಂದರೆ: ಕ್ರಮಕ್ಕೆ ಒತ್ತಾಯಿಸಿ ಡಿಸಿಗೆ ಮನವಿ

Update: 2018-09-01 14:56 GMT

ಚಿಕ್ಕಮಗಳೂರು, ಸೆ.1: ವಸತಿಗೃಹಗಳ ಮಾಲಕರು ನೈಸರ್ಗಿಕವಾಗಿ ಹರಿಯುವ ನೀರಿನ ಮೂಲಗಳನ್ನು ಅತಿಕ್ರಮಿಸಿರುವುದರಿಂದ ಹೊರನಾಡು ಗ್ರಾಮದ ಸುತ್ತಮುತ್ತಲಿನ ಗಿರಿಜನ ಕಾಲನಿಗಳ ನಿವಾಸಿಗಳು ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುವಂತಾಗಿದೆ. ಜಿಲ್ಲಾಡಳಿತ ಈ ಬಗ್ಗೆ ಪರಿಶೀಲಿಸಿ ವಸತಿಗೃಹಗಳ ಮಾಲಕರ ವಿರುದ್ಧ ಕಾನೂನು ಕ್ರಮಗೈಗೊಳ್ಳಬೇಕು. ಜತೆಗೆ ಗಿರಿಜನರಿಗೆ ನೀರು ಪೂರೈಕೆಗೆ ಅಗತ್ಯ ಕ್ರಮವಹಿಸಬೇಕೆಂದು ಒತ್ತಾಯಿಸಿ ಶನಿವಾರ ಗಿರಿಜನ ನಿವಾಸಿಗಳು ಜಿಲ್ಲಾಧಿಕಾರಿ ಶ್ರೀರಂಗಯ್ಯ ಅವರಿಗೆ ಮನವಿ ಸಲ್ಲಿಸಿದರು.

ಮೂಡಿಗೆರೆ ತಾಲೂಕಿನ ಕಳಸ ಹೋಬಳಿ ವ್ಯಾಪ್ತಿಯ ಹೊರನಾಡು ದೇವಾಲಯದ ಸುತ್ತಮುತ್ತಲಿನ ವಸತಿಗೃಹಗಳ ಮಾಲಕರು ಹೊರನಾಡು ಗ್ರಾಮ ಪಂಚಾಯತ್‍ನ ಕಟ್ಟಿನ ಮನೆ, ಸಂಪಿಗೆ ಕಟ್ಟೆ, ಕುರುದುಗೋಳಿ, ಕನ್ನಾರ್ ಗುಂಡಿಯ ಗ್ರಾಮಸ್ಥರ ಕುಡಿಯುವ ನೀರಿನ ಮೂಲಗಳನ್ನು ಅತಿಕ್ರಮಿಸಿದ್ದು, ಇದರಿಂದಾಗಿ ಸ್ಥಳೀಯ ಆದಿವಾಸಿ ಗಿರಿಜನರಿಗೆ ಕುಡಿಯಲು ನೀರಿಲ್ಲದಂತಾಗಿದೆ ಎಂದು ಮನವಿಯಲ್ಲಿ ಗಿರಿಜನ ನಿವಾಸಿಗಳು ಆರೋಪಿಸಿದ್ದಾರೆ. 

ಈ ವೇಳೆ ಮೂಡಿಗೆರೆ ಲ್ಯಾಂಪ್ ಸೋಸೈಟಿ ಅಧ್ಯಕ್ಷ ಕೃಷ್ಣೇಗೌಡ ಮಾತನಾಡಿ, ಹೊರನಾಡಿನಲ್ಲಿ ನೂರಾರು ವಸತಿ ಗೃಹಗಳು ನಡೆಯುತ್ತಿವೆ. ಇವುಗಳ ಮಾಲಕರು ಇಲ್ಲಿ ಹರಿಯುವ ಪ್ರಮುಖ ಹಳ್ಳವೊಂದರ ನೀರನ್ನು ಉಪಯೋಗಿಸುತ್ತಿರುವುದರಿಂದ ಹಳ್ಳದಲ್ಲಿ ನೀರಿಲ್ಲದೇ ಗಿರಿಜನರ ಕೃಷಿ ಜಮೀನಿಗೆ ಮತ್ತು ಕುಡಿಯುವ ನೀರಿಗೆ ತೊಂದರೆಯಾಗಿದೆ. ಈ ಬಗ್ಗೆ ಪ್ರಶ್ನೆ ಮಾಡಿದರೆ ವಿನಾಕಾರಣ ತೊಂದರೆ ಕೊಡುತ್ತಿದ್ದಾರೆ. ಸ್ಥಳೀಯ ಪೊಲೀಸರಿಗೆ ದೂರು ನೀಡಿದರೆ ಮುಗ್ಧ ಗಿರಿಜನರ ಮನೆಗಳಿಗೆ ಬಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ಈ ಸಂಬಂಧ ಜಿಲ್ಲಾಧಿಕಾರಿಗೆ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಮನವಿ ನೀಡಿದ್ದು, ಕೂಡಲೇ ಅವರು ಸ್ಥಳ ಪರಿಶೀಲಿಸಿ, ವಾಣಿಜ್ಯ ವಸತಿ ನಿಲಯಗಳ ಮೇಲೆ ಕಾನೂನು ರೀತಿಯ ಕ್ರಮ ಕೈಗೊಂಡು ನಮ್ಮ ಜಮೀನಿಗೆ ಮತ್ತು ಕುಡಿಯುವ ನೀರಿಗೆ ಅವಕಾಶ ಮಾಡಿಕೊಡುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಪಿ.ರಾಜೇಶ್, ಅಂಭಾ ಭವಾನಿ ಗಿರಿಜನ ಸಮಾಜದ ಕಾರ್ಯದರ್ಶಿ ಸುರೇಶ್‍ಭಟ್, ಗ್ರಾಮಸ್ಥರಾದ ರಾಘವೇಂದ್ರ, ರವಿ, ಅನಿಲ್‍ಕುಮಾರ್, ಶ್ಯಾಮಲಾ, ವಿಮಲಾ, ವಿಜಯಾ, ರಮ್ಯಾ, ಲಲಿತಾ, ಮಮತಾ, ಅನ್ನಪೂರ್ಣ, ರಾಮಚಂದ್ರ, ರಾಜು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News