ಬೆಂಬಲ ಬೆಲೆ ಯೋಜನೆಯಡಿ ಕೃಷಿ ಉತ್ಪನ್ನಗಳ ಖರೀದಿಗೆ ಸಿದ್ಧತೆ ಮಾಡಿಕೊಳ್ಳಿ: ದಾವಣಗೆರೆ ಡಿಸಿ ಸೂಚನೆ
ದಾವಣಗೆರೆ,ಸೆ.01: ಈ ಬಾರಿ ಕೇಂದ್ರ ಸರ್ಕಾರ ಬೆಂಬಲಬೆಲೆ ಘೋಷಿಸಿರುವ ಬೆಳೆಗಳ ಇಳುವರಿ ಹೆಚ್ಚಿದ್ದು, ದವಸ-ಧಾನ್ಯ ಸಂಗ್ರಹಿಸಲು ಉಗ್ರಾಣ, ಎಫ್‍ಎಕ್ಯೂ ಬಗ್ಗೆ ಪ್ರಚುರಪಡಿಸುವುದು, ಖರೀದಿ ಏಜೆನ್ಸಿ ಸೇರಿದಂತೆ ಬೆಂಬಲ ಬೆಲೆ ಯೋಜನೆಯಡಿ ಕೃಷಿ ಉತ್ಪನ್ನಗಳ ಖರೀದಿಗೆ ಎಲ್ಲ ಸಿದ್ಧತೆ ಮಾಡಿಟ್ಟುಕೊಳ್ಳಿ ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ 2018-19ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೇಂದ್ರ ಸರ್ಕಾರವು ಘೋಷಿಸಿರುವ ಕನಿಷ್ಟ ಬೆಂಬಲ ಬೆಲೆ ಯೋಜನೆ ಅನುಷ್ಟಾನಗೊಳಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಬಾರಿ ಉತ್ತಮ ಮಳೆಯಾಗಿ ಸಂಪೂರ್ಣ ಭಿತ್ತನೆ ಕಾರ್ಯ ನಡೆದಿರುವುದರಿಂದ ಕಳೆದೆಲ್ಲ ವರ್ಷಗಳಿಗಿಂತ ಹೆಚ್ಚಿನ ಇಳುವರಿ ಬರುವ ನಿರೀಕ್ಷೆ ಇದೆ. ಅಲ್ಲದೆ, ಸ್ಥಳೀಯವಾಗಿರುವ ಬೆಲೆಗಿಂತ ಬೆಂಬಲ ಬೆಲೆ ಹೆಚ್ಚಾಗಿರುವುದರಿಂದ ಹೆಚ್ಚಿನ ರೈತರು ಖರೀದಿ ಕೇಂದ್ರಕ್ಕೆ ದವಸ, ಧಾನ್ಯ ತರುವ ಸಾಧ್ಯತೆ ಇದೆ. ಅಲ್ಲದೆ, ಜೋಳ ಮುಂದಿನ ತಿಂಗಳು, ನಂತರದಲ್ಲಿ ಭತ್ತ ಕಟಾವಿಗೆ ಬರಲಿದೆ. ಈ ನಿಟ್ಟಿನಲ್ಲಿ ಕಾರಣ ಖರೀದಿಗೆ ಸೂಕ್ತ ಸಿದ್ಧತೆ, ಖರೀದಿಸಿದ ನಂತರ ಇಡಲು ಸೂಕ್ತ ಗೊಡೌನ್ ಮೊದಲೆ ಸಿದ್ಧಪಡಿಸಿಕೊಳ್ಳಬೇಕೆಂದ ಅವರು, ಇಳುವರಿ ಹೆಚ್ಚಿರುವ ಭತ್ತ, ಜೋಳ, ರಾಗಿ, ಮು.ಜೋಳ, ತೊಗರಿ ಮತ್ತು ಶೇಂಗಾವನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಗೆ ಖರೀದಿ ಕೇಂದ್ರ ತೆರೆಯಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ಆಹಾರ ಇಲಾಖೆ ಡಿಡಿ ಮಂಜುನಾಥ್ ಮಾತನಾಡಿ, ಈಗಾಗಲೇ ರಾಜ್ಯದಲ್ಲಿ ಒಟ್ಟು ಮೂರು ಅಧಿಕೃತ ಖರೀದಿ ಏಜೆನ್ಸಿಗಳಿದ್ದು ಸರ್ಕಾರವೇ ಏಜೆನ್ಸಿ ನಿಗದಿ ಮಾಡಲಿದೆ ಎಂದರು.
ಎಪಿಎಂಸಿ ಸಹಾಯಕ ನಿರ್ದೇಶಕಿ ಮಂಜುಳಾದೇವಿ ಮಾತನಾಡಿ, ದಾವಣಗೆರೆ, ಮಾಯಕೊಂಡ, ಜಗಳೂರು, ಹರಿಹರ, ಹರಪನಹಳ್ಳಿ, ಹೊನ್ನಾಳಿ ಮತ್ತು ಚನ್ನಗಿರಿಗಳಲ್ಲಿರುವ ಗೋಡೌನ್‍ಗಳಲ್ಲಿ 25 ಸಾವಿರ ಮೆಟ್ರಿಕ್ ಟನ್ ಉತ್ಪನ್ನ ಸಂಗ್ರಹಿಸುವ ಸಾಮರ್ಥ್ಯವಿದೆ. ಕ.ರಾ.ಉಗ್ರಾಣ ನಿಗಮದ ಪ್ರಾದೇಶಿಕ ವ್ಯವಸ್ಥಾಪಕ ಎಂ.ತಿಮ್ಮಣ್ಣ, ಕರಾಉನಿ ದಾವಣಗೆರೆ ಇಲ್ಲಿ 25526.860 ಮೆ.ಟನ್ ಸಂಗ್ರಹ ಸಾಮರ್ಥ್ಯವಿದೆ ಎಂದರು.
ಬೆಂಬಲ ಬೆಲೆ ಯೋಜನೆಯಡಿ ದವಸ-ಧಾನ್ಯ ಸ್ಥಳೀಯವಾಗಿ ಸಂಗ್ರಹಿಸಬಹುದಾಗಿದ್ದು, ಹೀಗೆ ಸಂಗ್ರಹಿಸಲು ಮುಂದೆ ಬರುವ ಫಾರ್ಮರ್ ಪ್ರೊಡ್ಯೂಸಿಂಗ್ ಆರ್ಗನೈಷನ್(ಎಫ್‍ಪಿಓ) ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಸರ್ಕಾರ ನಿಗದಿಪಡಿಸಿದ ಬೆಲೆಗೆ ದವಸ-ಧಾನ್ಯ ಖರೀದಿಸಬೇಕು. ಎಫ್‍ಎಕ್ಯೂ ಗುಣಮಟ್ಟ ನಿರ್ವಹಿಸಬೇಕು. ತಮ್ಮಲ್ಲಿ ಲಭ್ಯವಿರುವ ಗೋಡಾನ್ ಸೇರಿದಂತೆ ಸಂಪೂರ್ಣ ಮಾಹಿತಿ ಎಪಿಎಂಸಿಗೆ ಒದಗಿಸಬೇಕೆಂದರು.
ದೇವನಗರಿ ಹಾರ್ಟಿಕಲ್ಚರ್ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿ. ಅಧ್ಯಕ್ಷ ಮುರುಗೇಶಪ್ಪ ಮಾತನಾಡಿ, ಜಿಲ್ಲೆಯಲ್ಲಿ 8 ಎಫ್‍ಪಿಓಗಳಿದ್ದು, ಸ್ಥಳೀಯವಾಗಿ ಗೋಡೌನ್ ಹೊಂದಲಾಗಿದೆ. ಬೆಂಬಲ ಬೆಲೆ ಯೋಜನೆಯಡಿ ಖರೀದಿಸುವ ಸಂಬಂಧ ಎಪಿಎಂಸಿಗೆ ತಾವು ಮಾಹಿತಿ ನೀಡುವುದಾಗಿ ತಿಳಿಸಿದರು. ಜಿಲ್ಲಾಧಿಕಾರಿಗಳು, ಸೋಮವಾರದೊಳಗೆ ಪ್ರಾಥಮಿಕ ಪತ್ತಿನ ಸ.ಸಂಘಗಳು ಮತ್ತು ಎಫ್‍ಪಿಓ ತಮ್ಮ ಸಂಗ್ರಹ ಸಾಮರ್ಥ್ಯ ಇತರೆ ಲಭ್ಯತೆ ಬಗ್ಗೆ ಮಾಹಿತಿ ನೀಡಬೇಕೆಂದು ಸೂಚಿಸಿದರು.
ರೈತಮುಖಂಡ ಬಲ್ಲೂರು ರವಿಕುಮಾರ್ ಮಾತನಾಡಿ, ಪ್ರತಿಬಾರಿಯೂ ರೈತರಿಂದ ಖರೀದಿಸುವಾಗ ದರ ಕಡಿಮೆ ಇರುತ್ತದೆ. ಮಾಲಿಕರು ಖರೀದಿಸಿ ಗೊಡೌನ್ ಸೇರಿಸಿದ ನಂತರ ದರ ಹೆಚ್ಚಾಗುತ್ತದೆ. ಇದನ್ನು ತಪ್ಪಿಸಿ ರೈತರಿಗೆ ನೈಜ ಬೆಲೆ ದೊರೆಯುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ಎಪಿಎಂಸಿ ಸಹಾಯಕ ನಿರ್ದೇಶಕಿ ಮಂಜುಳಾದೇವಿ, ಕೃಷಿ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪ ನಿರ್ದೇಶಕ ಮಂಜುನಾಥ್, ಎಪಿಎಂಸಿ ಕಾರ್ಯದರ್ಶಿ ಆನಂದ್, ರಾಜ್ಯ ಉಗ್ರಾಣ ನಿಗಮದ ದಾವಣಗೆರೆ ವಿಭಾಗದ ಪ್ರಾದೇಶಿಕ ವ್ಯವಸ್ಥಾಪಕ ಎಂ ತಿಮ್ಮಣ್ಣ ಹಾಗೂ ಇತರೆ ಇಲಾಖೆ ಅಧಿಕಾರಿಗಳಿದ್ದರು.