ಹನೂರು: ನೂತನ ಹಾಲು ಉತ್ಪಾದಕರ ಸಂಘ ಉದ್ಘಾಟನೆ
ಹನೂರು,ಸೆ.01: ಹೈನುಗಾರಿಕೆ ಉಳಿಯಬೇಕಾದರೆ ಉತ್ಪಾದಕರು ಗುಣಮಟ್ಟದ ಹಾಲನ್ನು ಪೂರೈಕೆ ಮಾಡಬೇಕು ಎಂದು ಶಾಸಕ ಆರ್ ನರೇಂದ್ರರಾಜುಗೌಡ ತಿಳಿಸಿದರು.
ಹನೂರು ಪಟ್ಟಣದ ಸಮೀಪದ ಮಂಗಲ ಗ್ರಾಮದಲ್ಲಿ ಶನಿವಾರ ನೂತನ ಹಾಲು ಉತ್ಪಾದಕರ ಸಂಘ (ಡೈರಿ) ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಹೈನುಗಾರಿಕೆಯೂ ಒಂದು ಲಾಭದಾಯಕ ಉದ್ಯಮವಾಗಿ ಮಾರ್ಪಟ್ಟಿದ್ದು, ರೈತರು ಹೈನುಗಾರಿಕೆಯಲ್ಲಿ ತೊಡಗಿ ಸಂಘದ ಸದಸ್ಯತ್ವ ಪಡೆದು ಒಕ್ಕೂಟಕ್ಕೆ ಗುಣಮಟ್ಟದ ಹಾಲನ್ನು ಪೂರೈಕೆ ಮಾಡುವ ಮುಖಾಂತರ ಸರ್ಕಾರದ ಹೆಚ್ಚುವರಿ ಪ್ರೋತ್ಸಾಹ ಧನ, ಇನ್ನಿತರ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಹಾಗೆಯೇ ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆಗೆ ಉತ್ತೇಜನ ನೀಡುವ ದೃಷ್ಟಿಯಿಂದ ಹಾಗೂ ಜಾನುವಾರುಗಳ ಆರೋಗ್ಯ ದೃಷ್ಟಿಯಿಂದ ಪಾಲಕರ ಅನುಕೂಲಕ್ಕಾಗಿ ಪಶು ವೈದ್ಯಕೀಯ ಆಸ್ಪತ್ರೆಯನ್ನು ಹೆಚ್ಚಿನ ರೀತಿಯಲ್ಲಿ ನಿರ್ಮಾಣ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಚಾಮುಲ್ ಅಧ್ಯಕ್ಷ ಸಿ.ಎನ್ ಗುರುಮಲ್ಲಪ್ಪ ಮಾತನಾಡಿ, ಗ್ರಾಮ ಪಂಚಾಯತ್ ಕೇಂದ್ರವಾಗಿರುವುದರಿಂದ ಮಂಗಲ ಗ್ರಾಮದಲ್ಲಿ ಬಹು ದಿನಗಳ ಬೇಡಿಕೆ ನಂತರ ನೂತನ ಹಾಲು ಉತ್ಪಾದಕರ ಸಂಘ ಸ್ಥಾಪನೆಯಾಗುತ್ತಿದ್ದು, ಇಲ್ಲಿನ ರೈತರು ಸಾಂಪ್ರದಾಯಿಕ ಕೃಷಿಯ ಜೊತೆಗೆ ರೈತರು ಹೈನುಗಾರಿಕೆಯಲ್ಲಿ ತೊಡಗಿಸಿಕೂಂಡು ಆರ್ಥಿಕವಾಗಿ ಬೆಳೆಯಲು ಮುಂದಾಗಬೇಕು. ಸದಸ್ಯರು ಸಣ್ಣ ಪುಟ್ಟ ವಿಚಾರದಲ್ಲಿ ವ್ಯತ್ಯಾಸ ಬಂದಾಗ ಅವರೊಂದಿಗೆ ಸೌಜನ್ಯದಿಂದ ವರ್ತಿಸಿ ಸಂಘದ ಬೆಳವಣಿಗೆಗೆ ಶ್ರಮಿಸಿ ಎಂದ ಅವರು, ನಿಮ್ಮ ಸಂಘ ಮುಂದಿನ ದಿನಗಳಲ್ಲಿ ಮಾದರಿ ಹಾಲು ಉತ್ಪಾದಕರ ಸಂಘವಾಗಲಿ ಎಂದು ಶುಭ ಹಾರೈಸಿದರು.
ಸಮಾರಂಭದಲ್ಲಿ ಚಾಮುಲ್ ಅದ್ಯಕ್ಷ ಸಿ.ಎನ್ ಗುರುಮಲ್ಲಪ್ಪ, ತಾಪಂ ಅಧ್ಯಕ್ಷ ರಾಜು, ಸದಸ್ಯೆ ಮಾಣ್ಯಿಕಮ್, ಚಾಮುಲ್ ನಿರ್ದೇಶಕ ನಂಜುಂಡಸ್ವಾಮಿ ಚಾಮುಲ್ ಉಪವ್ಯವಸ್ಥಾಪಕ ಶರತ್‍ಕುಮಾರ್, ವಿಸ್ತರಣಾಧಿಕಾರಿಗಳಾದ ಮಂಜುಳಾ, ಸೋಮಶೇಖರ್, ಶರತ್, ನೂತನ ಸಂಘದ ಅಧ್ಯಕ್ಷ ಪುಟ್ಟರಾಜು, ಕಾರ್ಯದರ್ಶಿ ಪ್ರಭುಸ್ವಾಮಿ, ಮಾಜಿ ಗ್ರಾಪಂ ಸದಸ್ಯ ಚಿಕ್ಕಸ್ವಾಮಿ ಸೇರಿದಂತೆ ಇನ್ನಿತರರು ಹಾಜರಿದ್ದರು.