ಹನೂರು: ಮೂಲಭೂತ ಸೌಕರ್ಯ ವಂಚಿತ ದೊಡ್ಡಮಾಲಾಪುರ ಗ್ರಾಮದ ಕುರುಬರ ಬೀದಿ
ಹನೂರು,ಸೆ.01: ತಾಲೂಕಿನ ದೊಡ್ಡಮಾಲಾಪುರ ಗ್ರಾಮದ ಕುರುಬರ ಬೀದಿಯು ಮೂಲಭೂತ ಸೌಕರ್ಯದಿಂದ ವಂಚಿತವಾಗಿ ಅನೈರ್ಮಲ್ಯ ತಾಂಡವಾಡುತ್ತಿದ್ದು, ಈ ಸಂಬಂದ ಹಲವಾರು ಬಾರಿ ಗ್ರಾಪಂ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಇಲ್ಲಿನ ಗ್ರಾಮಸ್ಥರು ಆರೋಪಿಸಿದ್ದಾರೆ.
ಚಿಕ್ಕಮಾಲಪುರ ಗ್ರಾಪಂ ವ್ಯಾಪ್ತಿಗೆ ಸೇರುವ ಈ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಹಿಂಭಾಗದಲ್ಲಿರುವ ಕುರುಬರ ಬೀದಿಯಲ್ಲಿ ಗಿಡಗಳು ಬೆಳೆದು ನಿಂತಿದ್ದು, ತಾಜ್ಯ ನೀರು ಸರಾಗವಾಗಿ ಹರಿಯದೆ ಒಂದೇ ಕಡೆ ನಿಂತು ಗಬ್ಬುನಾತ ಬೀರುತ್ತಿದೆ. ಜೋರು ಮಳೆಯಾದರೆ ತಾಜ್ಯ ನೀರಿನ ಜೊತೆ ಸೇರಿ ಮನೆಗಳಿಗೆ ನುಗ್ಗುವುದರಿಂದ ವಾಸಿಸುವುದು ಕಷ್ಟಕರವಾಗಿದೆ ಎಂದು ಇಲ್ಲಿನ ನಿವಾಸಿಗಳು ದೂರುತ್ತಾರೆ.
ರಸ್ತೆಗಳಲ್ಲಿಯೇ ನಿಲ್ಲುವ ನೀರಿನಿಂದ ರಸ್ತೆ ಕೆಸರು ಗದ್ದೆಯಂತಾಗಿ ಮಾರ್ಪಟ್ಟು ಸಂಚರಿಸಲು ಹರಸಾಹಸ ಪಡಬೇಕಿದೆ. ಇಲ್ಲಿ ಅನೈರ್ಮಲ್ಯದಿಂದ ಸೊಳ್ಳೆಗಳು ವಿಪರೀತವಾಗಿದ್ದು, ವಾಸಿಸುವ ಜನರಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿ ನಿರ್ಮಾಣವಾಗಿದೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಹಲವಾರು ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇಷ್ಟೆಲ್ಲಾ ಸಮಸ್ಯೆ ಇದ್ದರೂ ಸಹ ಸಂಬಂಧಪಟ್ಟವರು ತಿರುಗಿಯೂ ಸಹ ನೋಡಿಲ್ಲ. ಯಾವುದೇ ಅಭಿವೃದ್ದಿ ಕಾಮಗಾರಿಗಳನ್ನೂ ನಡೆಸಿಲ್ಲ. ಅಧಿಕಾರಿಗಳು ಇನ್ನಾದರೂ ಇತ್ತ ಗಮನಹರಿಸಿ ಮೂಲ ಸೌಲಭ್ಯ ಒದಗಿಸಲು ಮುಂದಾಗಬೇಕು ಎಂದು ಗ್ರಾಮದ ಜನತೆ ಒತ್ತಾಯಿಸಿದ್ದಾರೆ.
ದೊಡ್ಡಮಾದಾಪುರ ಗ್ರಾಮದ ಕುರುಬರ ಬೀದಿಯಲ್ಲಿರುವ ಸಮಸ್ಯೆಯ ಬಗ್ಗೆ ಸ್ಥಳಕ್ಕೆ ಖುದ್ದು ಭೇಟಿ ನೀಡಿ, ಅಗತ್ಯ ಕ್ರಮಕೈಗೊಳ್ಳಲಾಗುವುದು
-ಪಿ.ಡಿ.ಒ ಮಲ್ಲೇಶ್
ಈ ಬಡವಾಣೆಯಲ್ಲಿ ನೀರು ಸರಾಗವಾಗಿ ಹರಿಯದೆ ಒಂದೆ ಕಡೆ ನಿಂತಲ್ಲಿಯೇ ನಿಂತಿರುವುದರಿಂದ ಗಬ್ಬುನಾತ ಬೀರುತ್ತಿದ್ದು, ಇಲ್ಲಿ ಒಂದೆಡೆ ಸೊಳ್ಳೆಗಾಲ ಕಾಟ, ಮತ್ತೊಂದದೆಡೆ ದುರ್ವಾಸನೆ. ಕೆಸರು ಮಯವಾದ ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಡೆಯಬೇಕಾಗಿದ್ದು, ಇವುಗಳ ನಡುವೆ ಬದುಕುವುದು ಕಷ್ಟಕರವಾಗಿದೆ. ಈ ಕುರಿತು ಗ್ರಾಪಂ ಆಡಳಿತ ಮಂಡಳಿಗೆ ಹಲವು ಬಾರಿ ದೂರು ನೀಡಿದರೂ ಸಹ ತಮ್ಮ ಅಸಹಾಯಕತೆ ತೋರುತ್ತಿದ್ದಾರೆ
-ನಾಗರಾಜು, ಸ್ಥಳೀಯ ನಿವಾಸಿ