ಮೆಡಿಕಲ್ ಸೀಟು ಹಂಚಿಕೆಯಲ್ಲಿ ಅವ್ಯವಹಾರ ನಡೆದಿಲ್ಲ: ಡಾ.ಜಿ ಪರಮೇಶ್ವರ್

Update: 2018-09-01 16:32 GMT

ತುಮಕೂರು,ಸೆ.01: ಮೆಡಿಕಲ್ ಸೀಟು ಹಂಚಿಕೆಯಲ್ಲಿ ಸಿದ್ದಾರ್ಥ ಮೆಡಿಕಲ್ ಕಾಲೇಜಿನಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಸಹ ಕಾರ್ಯದರ್ಶಿ ಹಾಗು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

ತುಮಕೂರಿನ ಸಿದ್ಧಾರ್ಥ ಮೆಡಿಕಲ್ ಕಾಲೇಜ್‍ನ 2018-19 ಸಾಲಿನ ಎಂಬಿಬಿಎಸ್ ಹಾಗೂ ಎಂಜಿನಿಯರಿಂಗ್ ನೂತನ ವಿದ್ಯಾರ್ಥಿಗಳ ಫ್ರೆಷರ್ಸ್‍ ಡೇ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ, ಮೆರಿಟ್ ಇಲ್ಲದವರಿಗೂ ಹೆಚ್ಚಿನ ಹಣ ಪಡೆದು ಮೆಡಿಕಲ್ ಸೀಟು ಹಂಚಿಕೆ ಮಾಡಲಾಗಿದೆ ಎಂದು ವಿದ್ಯಾರ್ಥಿಗಳು, ಪೋಷಕರು ಪ್ರತಿಭಟನೆ ನಡೆಸುತ್ತಿರುವ ವಿಚಾರವಾಗಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮೆಡಿಕಲ್ ಸೀಟು ಹಂಚಿಕೆ ಪ್ರಕ್ರಿಯೆ ಪಾರದರ್ಶಕವಾಗಿದೆ. ದೆಹಲಿಯಿಂದಲೇ ಸೀಟು ಹಂಚಿಕೆಯಾಗಿದೆ. ಇಲ್ಲಿ ಯಾವುದೇ ಹಗರಣಕ್ಕೆ ಆಸ್ಪದವಿಲ್ಲ, ಹಗರಣವೂ ನಡೆದಿಲ್ಲ. ಯಾವುದೇ ಗೊಂದಲವಿಲ್ಲ ಎಂದಿದ್ದಾರೆ.

ಮೆಡಿಕಲ್ ಸೀಟು ಪಡೆಯಲು ಅದರದ್ದೇ ಆದ ವಿಧಾನಗಳಿವೆ. ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆದೇ ಸೀಟು ಪಡೆಯುವ ಪದ್ಧತಿ ಇದೆ. ಸೀಟು ದೆಹಲಿಯಲ್ಲಿಯೇ ಹಂಚಿಕೆಯಾಗುವುದರಿಂದ ಇದರಲ್ಲಿ ಯಾವುದೇ ಶಾರ್ಟ್ ಕಟ್ ಇಲ್ಲ. ಹಣ ಪಡೆದು ಸೀಟು ಹಂಚಿಕೆ ಮಾಡುವುದು ಅಸಾಧ್ಯ. ಪೋಷಕರ ಬಳಿ ಹಣ ಪಡೆದು ವಂಚಿಸಿದ್ದರೆ ದೂರು ನೀಡಿ, ಅವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News