ತುಮಕೂರು: ದಲಿತ ಕುಟುಂಬದ ಎತ್ತಂಗಡಿಗೆ ಯತ್ನ; ಗ್ರಾ.ಪಂ.ಅಧಿಕಾರಿಗಳ ವಿರುದ್ಧ ದಲಿತರ ಪ್ರತಿಭಟನೆ

Update: 2018-09-01 16:52 GMT

ತುಮಕೂರು,ಸೆ.01: ಪಂಚಾಯತ್ ಹಾಗೂ ಸರಕಾರಿ ಜಾಗವಲ್ಲದಿದ್ದರೂ ಹತ್ತಾರು ವರ್ಷಗಳಿಂದ ವಾಸವಿರುವ ಜಾಗವನ್ನು ಖಾತೆ ಮಾಡಿಕೊಡದೆ, ಬಡ ದಲಿತ ಕುಟುಂಬವೊಂದನ್ನು ಎತ್ತಂಗಡಿ ಮಾಡಲು ಹೊರಟಿರುವ ಸಿ.ಎಸ್.ಪುರ ಗ್ರಾಮಪಂ. ಅಧಿಕಾರಿಗಳ ವಿರುದ್ದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ಸಿ.ಎಸ್.ಪುರ(ಚಂದ್ರಶೇಖರಪುರ)ದಲ್ಲಿ ಕಳೆದ 30 ವರ್ಷಗಳಿಂದ ರಂಗಸ್ವಾಮಿ ಎಂಬುವವರು ರಸ್ತೆಯ ಒಂದು ಬದಿಯಲ್ಲಿ ಗ್ರಾಮ ಪಂ. ಪರವಾನಗಿ ಪಡೆದು ಚಪ್ಪಲಿ ಹೊಲೆಯುವ ಮತ್ತು ಪೋಟೋಗೆ ಕಟ್ಟು, ಗಾಜು ಹಾಕುವ ಒಂದು ಸಣ್ಣ ಗೂಡಂಗಡಿ ಇಟ್ಟು ಜೀವನ ನಡೆಸುತ್ತಿದ್ದರು. ಆದರೆ ಕೆಲ ದಿನಗಳ ಹಿಂದೆ ಸದರಿ ಜಾಗ ತನ್ನದಲ್ಲದಿದ್ದರೂ ಗ್ರಾ.ಪಂ.ನವರು ಗೂಡಂಗಡಿಯನ್ನು ಬದಿಗೆ ಸರಿಸಿ, ಗುಡಿಸಲು ಎತ್ತಂಗಡಿಗೆ ಪ್ರಯತ್ನಿಸಿದ್ದಾರೆ. ರಂಗಸ್ವಾಮಿ ಅವರಿಗೆ ಸದರಿ ಜಾಗದಲ್ಲಿರುವ ಒಂದು ಗುಡಿಸಲು ಬಿಟ್ಟರೆ ಗ್ರಾಮದಲ್ಲಿ ಬೇರೆ ಯಾವುದೇ ಜಮೀನು, ಮನೆ ಇಲ್ಲ. ಇರುವ ಸಣ್ಣ ಜಾಗದಲ್ಲಿಯೇ ತಾಯಿ, ಹೆಂಡತಿ ಮತ್ತು ಮಗನೊಂದಿಗೆ ಜೀವನ ನಡೆಸುತ್ತಿರುವ ರಂಗಸ್ವಾಮಿ, ಹಲವು ಬಾರಿ ಸದರಿ ಜಾಗವನ್ನು ತನ್ನ ಹೆಸರಿಗೆ ಮಂಜೂರು ಮಾಡಿಕೊಡುವಂತೆ ಗ್ರಾ.ಪಂ.ಗೆ ಹಾಗೂ ತಹಶೀಲ್ದಾರರಿಗೆ ಮನವಿ ಮಾಡಿದ್ದಾರೆ. ತಾಲೂಕು ಆಡಳಿತದಿಂದ ಸದರಿ ಜಾಗವನ್ನು ಸರ್ವೆ ಮಾಡಿಸಿದ್ದು, ಆ ಜಾಗ ಪಂಚಾಯತ್ ಗಾಗಲಿ, ರಸ್ತೆಗಾಗಲಿ ಸೇರಿಲ್ಲ. ಕಾಲು ದಾರಿಯಾಗಿದೆ ಎಂದು ಸರ್ವೆ ಅಧಿಕಾರಿಗಳು ವರದಿ ಮಾಡಿದ್ದರೂ ಇದಕ್ಕೆ ಬೆಲೆ ನೀಡದ ಕೆಲ ಗ್ರಾ.ಪಂ.ಸದಸ್ಯರು ರಂಗಸ್ವಾಮಿ ಅವರ ಕುಟುಂಬವನ್ನು ಶತಾಯಗತಾಯ ಅಲ್ಲಿಂದ ಎತ್ತಂಗಡಿ ಮಾಡಿಸಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.  ಇದರ ವಿರುದ್ದ ಕುಟುಂಬ ತಿರುಗಿ ಬಿದ್ದಿದ್ದು, ತನ್ನ ಕುಟುಂಬದೊಂದಿಗೆ ರಂಗಸ್ವಾಮಿ ಪ್ರತಿಭಟನೆಗೆ ಮುಂದಾಗಿದ್ದಾರೆ. 

ಈ ಕುಟುಂಬಕ್ಕೆ  ವಾಸಿಸಲು ಗ್ರಾ.ಪಂ.ವ್ಯಾಪ್ತಿಯಲ್ಲಿ ಬೇರೆ ಸ್ಥಳ ನೀಡುವಂತೆ ಹಲವು ಬಾರಿ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಬಾಳೆ ಎಲೆ, ತೆಂಗಿನ ಸೋಗೆ ಇನ್ನಿತರ  ಕೃಷಿ ತ್ಯಾಜ್ಯಗಳಿಂದಲೇ ಸಣ್ಣ ಗುಡಿಸಲು ಕಟ್ಟಿಕೊಂಡು ವಾಸವಿರುವ ಕುಟುಂಬದ ಮನವಿಗೆ ಇದುವರೆಗೂ ಗ್ರಾ.ಪಂ. ಆಡಳಿತವಾಗಲಿ, ತಾಲೂಕು ಆಡಳಿತವಾಗಲಿ ಸ್ಪಂದಿಸಿಲ್ಲ. ಬದಲಿಗೆ ರಸ್ತೆಯಲ್ಲಿ ಹಾಕಿರುವ ಗುಡಿಸಲು ತೆರವುಗೊಳಿಸುವಂತೆ ಪದೇ ಪದೇ ಗ್ರಾ.ಪಂ.ಪಿಡಿಓ, ಕಾರ್ಯದರ್ಶಿ, ಇನ್ನಿತರ ಅಧಿಕಾರಿಗಳು ರಂಗಸ್ವಾಮಿಯವರ ಕುಟುಂಬದ ಮೇಲೆ ಒತ್ತಡ ಹೇರುತ್ತಿದ್ದು, ಗುಡಿಸಲಿನ ಪಕ್ಕದಲ್ಲಿಯೇ ಕಸ ಸುರಿದು ತೊಂದರೆ ನೀಡುತ್ತಿದ್ದಾರೆ. ಇದರಿಂದ ಬೇಸತ್ತ ಕುಟುಂಬ ಸ್ಥಳೀಯ ದಲಿತರ ಮುಖಂಡರೊಂದಿಗೆ ಸೇರಿ ಪರ್ಯಾಯ ವ್ಯವಸ್ಥೆ ಕಲ್ಪಿಸುವವರೆಗೆ ಗುಡಿಸಲು ಖಾಲಿ ಮಾಡುವುದಿಲ್ಲ. ಒಂದು ವೇಳೆ ಅಧಿಕಾರಗಳ ಒತ್ತಾಯ ಹೆಚ್ಚಾದರೆ ಜಿಲ್ಲಾಧಿಕಾರಿಗಲ ಕಚೇರಿ ಎದುರು ಕುಟುಂಬದರು ಆತ್ಮಹತ್ಯೆಗೆ ಶರಣಾಗುವುದಾಗಿ ಪ್ರತಿಭಟನೆ ನಿರತ ರಂಗಸ್ವಾಮಿ ತಿಳಿಸಿದ್ದಾರೆ.

ಬಡವರಿಗೆ, ಅಶಕ್ತರಿಗೆ, ನಿರ್ಗತಿಕರಿಗೆ ಸೂರು ಕಲ್ಪಿಸಬೇಕಾದ್ದು ಅಯಾಯ ಸ್ಥಳೀಯ ಸಂಸ್ಥೆಗಳ ಅದ್ಯ ಕರ್ತವ್ಯಗಳಲ್ಲಿ ಒಂದಾಗಿದೆ. ಚಪ್ಪಲಿ ಹೊಲೆಯುವುದು ಮತ್ತು ಪೋಟೋ ಕಟ್ಟು, ಗಾಜು ಹಾಕುವುದರಿಂದ ಬರುವ 50-100 ರೂ ಹಣದಲ್ಲಿಯೇ ಮೂರು ಜನರ ಹೊಟ್ಟೆ ತುಂಬಿಸಿಕೊಂಡು ಅರ ಹೊಟ್ಟೆಯಲ್ಲಿಯೇ ಬದುಕುತ್ತಿರುವ ಕುಟುಂಬಕ್ಕೆ ವಾಸಿಸಲು ಯಾವುದಾದರೂ ಯೋಜನೆಯ ಮೂಲಕ ವಸತಿ ಕಲ್ಪಿಸಬೇಕಾದ ಗ್ರಾ.ಪಂ.ಅಧಿಕಾರಿಗಳು, ಬೀದಿ ಬದಿಯಲ್ಲಿ ಬದುಕುತ್ತಿರುವ ಕುಟುಂಬಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಹಿರಿಯ ಅಧಿಕಾರಿಗಳು ಕೂಡಲೇ ಗಮನಹರಿಸಿ, ಬಡ ಕುಟುಂಬಕ್ಕೆ ಸದರಿ ಜಾಗವನ್ನು ಮಂಜೂರು ಮಾಡಿಕೊಡುವಂತೆ ದಲಿತ ಮುಖಂಡರುಗಳು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News