ನಿರಾಶ್ರಿತರಿಗೆ ಕಳೆದುಕೊಂಡಷ್ಟೇ ಭೂಮಿ ನೀಡಿ: ಸಿಪಿಐಎಂ ಕೊಡಗು ಜಿಲ್ಲಾ ಘಟಕ ಒತ್ತಾಯ

Update: 2018-09-01 17:07 GMT

ಮಡಿಕೇರಿ, ಸೆ.1: ಪ್ರಕೃತಿ ವಿಕೋಪದಿಂದ ತಮ್ಮ ಅಸ್ತಿತ್ವವನ್ನೆ ಕಳೆದುಕೊಂಡ ಕುಟುಂಬಗಳಿಗೆ ಕಳೆದುಕೊಂಡಷ್ಟೇ ಭೂಮಿ ನೀಡುವುದರೊಂದಿಗೆ ಕೃಷಿ ಫಸಲು ಬಂದು ಜೀವನ ನಡೆಸಲು ಸಾಧ್ಯವಾಗುವವರೆಗೆ ಸರ್ಕಾರ ಅಗತ್ಯ ಸಹಾಯಧನ ನೀಡಬೇಕು ಮತ್ತು ಬಡ್ಡಿ ರಹಿತ ಸಾಲ ಒದಗಿಸಬೇಕು ಎಂದು ಸಿಪಿಐಎಂ ಜಿಲ್ಲಾ ಘಟಕ ಒತ್ತಾಯಿಸಿದೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಜಿಲ್ಲಾ ಕಾರ್ಯದರ್ಶಿ ಡಾ.ಇ.ರ. ದುರ್ಗಾಪ್ರಸಾದ್ ಅವರು, ಇತ್ತೀಚಿನ ವರ್ಷಗಳಲ್ಲಿ ಕಂಡರಿಯದ ಮಳೆ ಈ ಬಾರಿ ಕೊಡಗಿನಲ್ಲಿ ಸುರಿದಿದ್ದು, ಪರಿಣಾಮವಾಗಿ ಸಾಕಷ್ಟು ನಷ್ಟ ಸಂಭವಿಸಿದೆ. ನೀರಿನ ಒತ್ತಡದಿಂದ ಬೆಟ್ಟಗಳೆ ನದಿಯಂತೆ ಹರಿದು ಬಂದು ನೂರಾರು ಹೆಕ್ಟೇರ್ ಗದ್ದೆ ತೋಟಗಳನ್ನು ಮುಚ್ಚಿ ಹಾಕಿವೆ. ಇದರಿಂದಾಗಿ ಕೃಷಿಯನ್ನೆ ಅವಲಂಬಿಸಿ ಬದುಕುತ್ತಿರುವ ಸಣ್ಣ ಮಧ್ಯಮ ರೈತರ ಭವಿಷ್ಯ ಕತ್ತಲೆಯಲ್ಲಿ ಮುಳುಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಕೆಲವು ಶ್ರೀಮಂತ ಖಾಸಗಿ ಸಂಸ್ಥೆಗಳು ಕಾಫಿ ತೋಟಕ್ಕಾಗಿ ಭೂಮಿಯನ್ನು ಖರೀದಿಸುವುದರೊಂದಿಗೆ ಸರ್ಕಾರಿ ಭೂಮಿಯನ್ನು ಕಬಳಿಸಿದ್ದಾರೆ. ಆದ್ದರಿಂದ ಅಕ್ರಮ ಒತ್ತುವರಿ ಭೂಮಿಯನ್ನು ಸರ್ವೇ ಮಾಡಿ ತೋಟ, ಗದ್ದೆ, ಮನೆಗಳನ್ನು ಕಳೆದುಕೊಂಡವರಿಗೆ ಹಂಚಬೇಕು ಎಂದು ಒತ್ತಾಯಿಸಿದರು.

ಅತಿವೃಷ್ಟಿಯಿಂದಾಗಿ ಕಾಫಿ, ಕರಿಮೆಣಸು ಮತ್ತು ಭತ್ತದ ಇಳುವರಿ ಕಡಿಮೆಯಾಗುವ ಅಥವಾ ಇಲ್ಲದಾಗುವ ಸಾಧ್ಯತೆ ಹೆಚ್ಚಿದ್ದು, ರೈತರ ಜೀವನ ಚೇತರಿಸಿಕೊಳ್ಳುವವರೆಗೆ ನಿತ್ಯ ಜೀವನದ ನಿರ್ವಹಣೆಗಾಗಿ ಸಣ್ಣ, ಮಧ್ಯಮ ಬೆಳೆಗಾರರಿಗೆ ದೀರ್ಘಾವಧಿ ಕಂತುಗಳಲ್ಲಿ ಬಡ್ಡಿ ರಹಿತ ಸಾಲ ಒದಗಿಸಬೇಕು, ತೋಟ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಕೃಷಿ ಕಾರ್ಮಿಕರು, ಬುಡಕಟ್ಟು ಜನರು, ಉದ್ಯೋಗವಿಲ್ಲದೆ ಸಂಕಷ್ಟದಲ್ಲಿ ಸಿಲುಕಿದ್ದು ಇವರುಗಳಿಗೆ ಒಬ್ಬ ವ್ಯಕ್ತಿಗೆ ತಿಂಗಳಿಗೆ ತಲಾ 20 ಕೆ.ಜಿ. ಅಕ್ಕಿ ಹಾಗೂ ಇತರ ನಿತ್ಯೋಪಯೋಗಿ ವಸ್ತುಗಳನ್ನು ನೀಡಬೇಕು ಎಂದರು.

ಸಿದ್ದಾಪುರ, ಕೊಂಡಂಗೇರಿ ಮೊದಲಾದೆಡೆ ಹೊಳೆ ದಂಡೆಯಲ್ಲಿ ನಿರ್ಮಿಸಿರುವ ಮನೆಗಳಿಗೆ ಪ್ರವಾಹದಿಂದ ಹಾನಿಯುಂಟಾಗಿದ್ದು, ಅಂತಹ ಕುಟುಂಬಗಳನ್ನು ಗುರುತಿಸಿ ಸೂಕ್ತ ಸ್ಥಳಗಳಲ್ಲಿ ಅಗತ್ಯ ಸೌಕರ್ಯಗಳಿರುವ ಮನೆಗಳಿಗೆ ಸ್ಥಳಾಂತರಿಸಬೇಕು ಮತ್ತು ಹೊಳೆ ದಂಡೆಯಲ್ಲಿ ಮನೆ ನಿರ್ಮಿಸುವುದನ್ನು ನಿಷೇಧಿಸಬೇಕು ಎಂದು ಡಾ.ದುರ್ಗಾಪ್ರಸಾದ್ ಒತ್ತಾಯಿಸಿದರು.

ಸಿದ್ದಾಪುರದಂತಹ ಸ್ಥಳಗಳಲ್ಲಿ ಹೊಳೆ ಬದಿಗಳಲ್ಲಿ ವಾಸಿಸುತ್ತಿರುವವರಿಗೆ ಅದೇ ಪಂಚಾಯತ್ ವ್ಯಾಪ್ತಿಯಲ್ಲಿ ಸೂಕ್ತ ಸ್ಥಳ ನೀಡಬೇಕು. ಮನೆಗಳನ್ನು ಕಟ್ಟಿಕೊಡಬೇಕು ಅಥವಾ ಕಟ್ಟಿಕೊಳ್ಳಲು ಬೇಕಾದ ಎಲ್ಲಾ ಸಹಾಯ ಒದಗಿಸಬೇಕೆಂದರು.

ಕೊಡಗಿನ ಆರ್ಥಿಕ ಪರಿಸ್ಥಿತಿ ಏರು ಪೇರಾಗಿದ್ದು, ಸಣ್ಣ ಮಧ್ಯಮ ವ್ಯಾಪಾರಿಗಳು ವ್ಯಾಪಾರವಿಲ್ಲದೆ ತೊಂದರೆಗೆ ಸಿಲುಕಿದ್ದಾರೆ. ಅನೇಕರು ವ್ಯಾಪಾರಕ್ಕಾಗಿ ಸಾಲ ತೆಗೆದುಕೊಂಡವರಿದ್ದು, ಅಂತಹವರಿಗೆ ವ್ಯಾಪಾರ ಮುಂದುವರಿಸಲು ಮತ್ತು ಜೀವನ ನಿರ್ವಹಣೆಗೆಂದು ಬಡ್ಡಿ ರಹಿತ ಸಾಲ ಒದಗಿಸಬೇಕು ಎಂದು ದುರ್ಗಾಪ್ರಸಾದ್ ಆಗ್ರಹಿಸಿದರು.

ಮಳೆ ಹಾನಿಯಿಂದ ತಮ್ಮ ವಾಸ ಸ್ಥಳಗಳಲ್ಲಿ ವಾಸಿಸಲು ಸಾಧ್ಯವಾಗದೆ ಪರಿಹಾರ ಕೇಂದ್ರಗಳಲ್ಲಿ ಇರುವವರನ್ನು ತಾತ್ಕಾಲಿಕ ಶೆಡ್‍ಗಳಿಗೆ ವರ್ಗಾಯಿಸುವುದು ಸರಿಯಲ್ಲ. ಮುಂದೆ ಅವರು ಈ ಶೆಡ್‍ಗಳಲ್ಲೆ ಅತಂತ್ರ ಜೀವನ ನಡೆಸುವ ಪರಿಸ್ಥಿತಿ ಉಂಟಾಗಲಿದ್ದು, ಈ ಹಿನ್ನೆಲೆಯಲ್ಲಿ ಅವರೆಲ್ಲರಿಗು ಶಾಶ್ವತ ನೆಲೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಿಪಿಐಎಂ ಜಿಲ್ಲಾ ಸಂಘಟನಾ ಸಮಿತಿ ಸದಸ್ಯರಾದ ಎನ್.ಡಿ. ಕುಟ್ಟಪ್ಪನ್, ಎಂ.ಕೆ. ಜೋಸ್ ಹಾಗೂ ಹೆಚ್.ಆರ್. ಶಿವಪ್ಪ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News