ಕೊಡಗು ಮಳೆಹಾನಿ: ಜಿಲ್ಲಾಡಳಿತದಿಂದ ಕಷ್ಟ, ನಷ್ಟದ ಸಮೀಕ್ಷೆ ಚುರುಕು

Update: 2018-09-01 17:15 GMT

ಮಡಿಕೇರಿ, ಸೆ.1: ಸ್ವಾತಂತ್ರ್ಯೋತ್ಸವದಿಂದ ಆರಂಭಗೊಂಡು ವಾರಗಟ್ಟಲೆ ಸುರಿದ ಮಹಾಮಳೆಯಿಂದ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಜಿಲ್ಲೆಯ ವಿವಿಧೆಡೆಗಳಲ್ಲಿ ಉಂಟಾಗಿರುವ ಹಾನಿಯನ್ನು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಅಧಿಕಾರಿಗಳು ಖುದ್ದು ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.

ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅತಿಕ್, ಜಿಪಂ ಸಿಇಒ ಪ್ರಶಾಂತ್ ಕುಮಾರ್ ಮಿಶ್ರ ಹಾಗೂ ಪಂಚಾಯತ್ ರಾಜ್ ಇಂಜಿನಿಯರ್ ಗಳು ಕೆ.ನಿಡುಗಣೆ ಗ್ರಾ.ಪಂ. ವ್ಯಾಪ್ತಿಯ ಹೆಬ್ಬೆಟ್ಟಗೇರಿ, ದೇವಸ್ತೂರು, ಕಾಲೂರು ಮತ್ತಿತರ  ಅತಿವೃಷ್ಟಿಯಿಂದ ತೀವ್ರ ಹಾನಿಗೆ ಒಳಗಾದ ಪ್ರದೇಶಗಳಿಗೆ ಭೇಟಿ ನೀಡಿದರು. 

ಗುಡ್ಡಕುಸಿತದಿಂದ ಸಂಪರ್ಕ ವ್ಯವಸ್ಥೆಯನ್ನೆ ಕಳೆದುಕೊಂಡಿರುವ ಹೆಬ್ಬೆಟ್ಟಗೇರಿ, ದೇವಸ್ತೂರು, ಗಾಳಿಬೀಡು ಗ್ರಾಪಂ ವ್ಯಾಪ್ತಿಯ ಕಾಲೂರು ಮತ್ತಿತರ ಗ್ರಾಮಗಳ ರಸ್ತೆ ದುರಸ್ತಿ ಕಾರ್ಯ ನಡೆಯುತ್ತಿರುವುದಲ್ಲದೆ, ವಿದ್ಯುತ್ ಸಂಪರ್ಕ ಕಲ್ಪಿಸುವ ಕೆಲಸವು ಬಿರುಸಿನಿಂದ ನಡೆಯುತ್ತಿದೆ. ಪ್ರಾಕೃತಿಕ ವಿಕೋಪದಿಂದ ಅಸ್ತವ್ಯಸ್ತವಾಗಿದ್ದ ಜನಜೀವನ ನಿಧಾನವಾಗಿ ಸಾಮಾನ್ಯ ಸ್ಥಿತಿಗೆ ಬರುತ್ತಿದೆ. ಪ್ರಸ್ತುತ ಮಳೆ ಕಡಿಮೆಯಾಗುತ್ತಿರುವುದರಿಂದ ವಾತಾವರಣ ಸಹಜ ಸ್ಥಿತಿಯತ್ತ ಬರುತ್ತಿದೆ. ಪ್ರಾಕೃತಿಕ ವಿಕೋಪದಿಂದಾಗಿ ಗಾಳಿಬೀಡು, ಮಕ್ಕಂದೂರು, ಕೆ.ನಿಡುಗಣೆ, ಮದೆ, ಗರ್ವಾಲೆ, ಮಾದಾಪುರ ಮತ್ತಿತರ ಗ್ರಾ.ಪಂ.ವ್ಯಾಪ್ತಿಯಲ್ಲಿ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಆದ್ದರಿಂದ ಬೆಳೆ ಹಾನಿ ಹಾಗೂ ಮನೆ ಹಾನಿಯಾಗಿದ್ದು, ಈ ಸಂಬಂಧ ಸಮೀಕ್ಷೆ ಕಾರ್ಯಗಳು ನಡೆಯುತ್ತಿವೆ. ಹಾಗೆಯೇ ಸದ್ಯ ತಾತ್ಕಾಲಿಕವಾಗಿ ಓಡಾಡಲು ಗ್ರಾಮೀಣ ರಸ್ತೆ ಸರಿಪಡಿಸುವ ಕಾರ್ಯವು ನಡೆಯುತ್ತಿದೆ.     

ಆಹಾರ ಕಿಟ್ ವಿತರಣೆ: ಅತಿವೃಷ್ಟಿಗೆ ತುತ್ತಾಗಿ ಸಂತ್ರಸ್ತರಾಗಿರುವ ಕುಟುಂಬಗಳಿಗೆ ಸರ್ಕಾರ ವಿಶೇಷ ಅನ್ನಭಾಗ್ಯ ಯೋಜನೆಯಡಿ ಆಹಾರ ಕಿಟ್‍ಗಳನ್ನು ವಿತರಿಸಲಾಗುತ್ತಿದೆ. ತೀವ್ರ ಅತಿವೃಷ್ಟಿ ಪ್ರದೇಶಗಳಲ್ಲಿ ಪ್ರಥಮ ಆದ್ಯತೆಯಲ್ಲಿ ಆಹಾರ ಕಿಟ್ ವಿತರಿಸಲಾಗುತ್ತಿದೆ ಎಂದು ಆಹಾರ ಇಲಾಖೆಯ ಉಪ ನಿರ್ದೇಶಕರಾದ ಸದಾಶಿವಯ್ಯ ಅವರು ಮಾಹಿತಿ ನೀಡಿದ್ದಾರೆ.  

ಕಿಟ್ ವಿತರಣೆ-ಕಳೆದ ಆಗಸ್ಟ್ 31 ರವರೆಗೆ 9,622 ಕುಟುಂಬಗಳಿಗೆ ಕಿಟ್‍ಗಳನ್ನು ವಿತರಿಸಲಾಗಿದ್ದು, ಮಡಿಕೇರಿ ತಾಲೂಕಿನಲ್ಲಿ 5,224, ಸೋಮವಾರಪೇಟೆ ತಾಲೂಕಿನಲ್ಲಿ 2,092 ಹಾಗೂ ವಿರಾಜಪೇಟೆ ತಾಲೂಕಿನಲ್ಲಿ 2306 ಕಿಟ್‍ಗಳನ್ನು ವಿತರಿಸಲಾಗಿದೆ. ಈ ಎಲ್ಲಾ ಕಿಟ್‍ಗಳನ್ನು ಗ್ರಾ.ಪಂ. ವ್ಯಾಪ್ತಿಯಲ್ಲಿ ವಿತರಣೆ ಮಾಡಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News