ಕೊಳ್ಳೇಗಾಲ: ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ಗೆ ಚಾಲನೆ

Update: 2018-09-01 18:04 GMT

ಕೊಳ್ಳೇಗಾಲ,ಸೆ.01: ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಶನಿವಾರ ಇಂಡಿಯನ್ ಪೋಸ್ಟ್ ಪೆಮೆಂಟ್ ಬ್ಯಾಂಕ್ ಯೋಜನೆಯನ್ನು ಉಪವಿಭಾಗಾಧಿಕಾರಿ ಬಿ.ಫೌಜಿಯಾ ತರುನ್ನಮ್ ಅವರು ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಗ್ರಾಮೀಣ ಜನರು ಅವರ ಕೆಲಸ ಕಾರ್ಯಗಳನ್ನು ಬಿಟ್ಟು ಬ್ಯಾಂಕಿನ ಮುಂದೆ ನಿಲ್ಲಬಾರದು ಎಂಬ ಉದ್ದೇಶದಿಂದ ಭಾರತೀಯ ಅಂಚೆ ಕಚೇರಿ ಇಂತಹ ಸೇವೆಯನ್ನು ತೆರೆದಿದೆ. ರಾಜ್ಯದಲ್ಲಿರುವ 3 ಲಕ್ಷ ಪೋಸ್ಟ್ ಮಾಸ್ಟರ್ ಗಳು ಅವರ ಪೋಸ್ಟ್ ಆಫೀಸ್‍ನ ವ್ಯಾಪ್ತಿಗೆ ಬರುವ ಎಲ್ಲಾ ಮನೆಮನೆಗೆ ತೆರಳಿ ಈ ವ್ಯವಸ್ಥೆಯನ್ನು ನೀಡಲಿದ್ದಾರೆ. ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಉಪವಿಭಾಗದ ಅಂಚೆ ನಿರೀಕ್ಷಕ ಎಂ.ಅಜಯ್‍ಕುಮಾರ್ ಮಾತನಾಡಿ, ದೇಶದಲ್ಲಿ ಸುಮಾರು 650 ಶಾಖೆಗಳಲ್ಲಿ ಹಾಗೂ 3250 ಸಹಾಯಕ ಕೇಂದ್ರಗಳಲ್ಲಿ ಇಂಡಿಯನ್ ಪೊಸ್ಟಲ್ ಪೆಮೆಂಟ್ ಬ್ಯಾಂಕ್ ಸೇವೆಯನ್ನು ಆರಂಭಿಸಲಾಗಿದೆ. ಡಿಸೆಂಬರ್ ಅಂತ್ಯಕ್ಕೆ ದೇಶದಲ್ಲಿರುವ 1.55 ಲಕ್ಷದ ಪೋಸ್ಟ್ ಆಫೀಸ್‍ನಲ್ಲಿ ಆರಂಭಿಸಲಾಗುತ್ತದೆ ಎಂದು ತಿಳಿಸಿದರು.

ಇಂಡಿಯನ್ ಪೊಸ್ಟಲ್ ಪೆಮೆಂಟ್ ಬ್ಯಾಂಕ್‍ನ ಖಾತೆಯನ್ನು ಪಡೆದ ಮೊದಲ ಖಾತೆದಾರರಾದ ಹರ್ಷ, ಗೌರಿಪ್ರಕಾಶ್ ಹಾಗೂ ಜಿಇಎಸ್‍ಎಂ ಪ್ರಸಾದ್ ಅವರಿಗೆ ಎಟಿಎಂ ಕಾರ್ಡ್ ನೀಡಲಾಯಿತು. ಕಾರ್ಯಕ್ರಮದಲ್ಲಿ ಪ್ರಧಾನ ಅಂಚೆ ಪಾಲಕರಾದ ಪಿ.ಪುಟ್ಟರಾಜು ಹಾಗೂ ನಂಜನಗೂಡು ಉಪವಿಭಾಗದ ನೌಕರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News