ಜೀವಕ್ಕೆ ಕುತ್ತು ತಂದ 'ಹೇರ್ ಸ್ಟ್ರೈಟ್ನಿಂಗ್': ಕೂದಲು ಉದುರುವಿಕೆಗೆ ಮನನೊಂದ ಯುವತಿ ಆತ್ಮಹತ್ಯೆ

Update: 2018-09-02 14:30 GMT

ಮಡಿಕೇರಿ, ಸೆ.2: ‘ಹೇರ್ ಸ್ಟ್ರೈಟ್ನಿಂಗ್’ ಮಾಡಿಸಿಕೊಂಡ ಬಳಿಕ ಕೂದಲು ಉದುರಿತೆಂದು ಮನನೊಂದ ಯುವತಿಯೊಬ್ಬಳು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಕೊಡಗಿನ ನಿಟ್ಟೂರು ಗ್ರಾಮದಲ್ಲಿ ನಡೆದಿದೆ.

ನಿಟ್ಟೂರು ಗ್ರಾಮದ ಗಾಂಡಂಗಡ ಪ್ರಭಾ ಹಾಗೂ ಶೈಲಾ ದಂಪತಿಯ ಪುತ್ರಿ ನೇಹಾ ಗಂಗಮ್ಮ(19) ಎಂಬಾಕೆಯೇ ಆತ್ಮಹತ್ಯೆ ಮಾಡಿಕೊಂಡ ಯುವತಿ.

ಮೈಸೂರು ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಬಿಬಿಎ ಪದವಿ ವ್ಯಾಸಂಗ ಮಾಡುತ್ತಿದ್ದ ನೇಹಾ ಗಂಗಮ್ಮ ಅಲ್ಲಿನ ಗೋಕುಲಂನಲ್ಲಿರುವ ಪಿ.ಜಿಯೊಂದರಲ್ಲಿದ್ದರು. ಇತ್ತೀಚೆಗೆ ಮೈಸೂರಿನ ಬ್ಯೂಟಿ ಪಾರ್ಲರ್ ಒಂದರಲ್ಲಿ ‘ಹೇರ್ ಸ್ಟ್ರೈಟ್ನಿಂಗ್’ ಮಾಡಿಸಿಕೊಂಡಿದ್ದ ಆಕೆಯ ಕೂದಲು ಉದುರಲು ಆರಂಭಿಸಿತ್ತೆನ್ನಲಾಗಿದ್ದು, ಕಾಲೇಜಿನಲ್ಲಿ ಸ್ನೇಹಿತೆಯರು ಕೇಳುತ್ತಿದ್ದ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಮನನೊಂದಿದ್ದಳೆಂದು ಹೇಳಲಾಗಿದೆ. ಅಲ್ಲದೆ ತಾನು ಇನ್ನು ಕಾಲೇಜಿಗೆ ಹೋಗುವುದಿಲ್ಲ ಎಂದು ಪೋಷಕರಿಗೂ ತಿಳಿಸಿದ್ದಳೆನ್ನಲಾಗಿದೆ. ಆದರೆ ಈಗಾಗಲೇ ಕಾಲೇಜು ಶುಲ್ಕ ಪಾವತಿಸಲಾಗಿರುವುದರಿಂದ ಆಕೆಯನ್ನು ಸಮಾಧಾನಪಡಿಸಿ ಕಾಲೇಜಿಗೆ ಕಳುಹಿಸಿದ್ದರು ಎಂದು ಹೇಳಲಾಗಿದೆ.

ಆದರೆ ಆ.28ರಂದು ಗೋಕುಲಂನಲ್ಲಿರುವ ಪಿಜಿಯಿಂದ ಕಾಲೇಜಿಗೆ ತೆರಳುವುದಾಗಿ ಹೇಳಿ ಹೋಗಿದ್ದ ನೇಹಾ ಗಂಗಮ್ಮ ಬಳಿಕ ನಾಪತ್ತೆಯಾಗಿದ್ದಳು. ಈ ಸಂಬಂಧ ಪೋಷಕರಿಗೆ ಮಾಹಿತಿ ನೀಡಿದ ಪಿ.ಜಿ. ಮಾಲಕ ಕಾರ್ಯಪ್ಪ ಅವರು ಮೈಸೂರಿನ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಗೂ ದೂರು ನೀಡಿದ್ದರು.
ಆದರೆ ಶನಿವಾರ ನಿಟ್ಟೂರು ಗ್ರಾಮದ ಆದೇಂಗಡ ಕುಟುಂಬಸ್ಥರು ತಮ್ಮ ಜಮೀನಿನಲ್ಲಿ ನಾಟಿ ಕಾರ್ಯ ಮಾಡಿಸುತ್ತಿದ್ದ ಸಂದರ್ಭ ಕೆಲವರು ಗಾಳ ಹಾಕಲೆಂದು ಲಕ್ಷ್ಮಣತೀರ್ಥ ನದಿಗೆ ತೆರಳಿದ್ದು, ಈ ಸಂದರ್ಭ ನದಿಯಲ್ಲಿ ಮೃತದೇಹವೊಂದು ಪತ್ತೆಯಾಗಿದೆ.

ಈ ವಿಷಯವನ್ನು ಅವರು ಆದೇಂಗಡ ಕುಟುಂಬಸ್ಥರಿಗೆ ತಿಳಿಸಿದ್ದು, ಗ್ರಾಮಸ್ಥರು ಸ್ಥಳಕ್ಕೆ ತೆರಳಿ ಮೃತದೇಹವನ್ನು ಹೊರತೆಗೆದು ನೋಡಿದಾಗ ಅದು ಸಂಪೂರ್ಣವಾಗಿ ಊದಿಕೊಂಡು ಗುರುತು ಸಿಗಲಾರದ ಸ್ಥಿತಿಯಲ್ಲಿತ್ತು. ಆದರೆ ಮೃತದೇಹದಬೆರಳಿನಲ್ಲಿದ್ದ ಉಂಗುರ ಹಾಗೂ ಧರಿಸಿದ್ದ ಬಟ್ಟೆಯ ಆಧಾರದಲ್ಲಿ ಆ ಮೃತದೇಹ ನೇಹಾ ಗಂಗಮ್ಮಳದ್ದು ಎಂದು ಕುಟುಂಬಸ್ಥರು ದೃಢಪಡಿಸಿದರು.

ನೇಹಾ ಗಂಗಮ್ಮ ಮೈಸೂರಿನಿಂದ ಆಗಮಿಸಿ ಆ.28ರಂದೇ ನಿಟ್ಟೂರು ಸೇತುವೆಯಿಂದ ಲಕ್ಷ್ಮಣತೀರ್ಥ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದ್ದು, ಮೃತದೇಹ ಸೇತುವೆಯಿಂದ ಸುಮಾರು 5 ಕಿ.ಮೀ ದೂರದಲ್ಲಿ ಪತ್ತೆಯಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊನ್ನಂಪೇಟೆ ಪೊಲೀಸರು ತನಿಖೆ ನಡೆಸುತ್ತಿದ್ದು, ನೇಹಾ ಗಂಗಮ್ಮ ಪೋಷಕರು ಇದೀಗ ಮೈಸೂರಿನ ಬ್ಯೂಟಿ ಪಾರ್ಲರ್ ವಿರುದ್ಧವೂ ದೂರು ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News