ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆ: ಮತ ಎಣಿಕೆಗೆ ಸಕಲ ಸಜ್ಜು; ಜಿಲ್ಲಾಧಿಕಾರಿ ದಯಾನಂದ್

Update: 2018-09-02 17:18 GMT

ಶಿವಮೊಗ್ಗ, ಸೆ. 2: ಶಿವಮೊಗ್ಗ ಮಹಾನಗರ ಪಾಲಿಕೆಯ 35 ವಾರ್ಡ್‍ಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಸೆ. 3 ರಂದು ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜ್‍ನಲ್ಲಿ ನಡೆಯಲಿದ್ದು, ಮತ ಎಣಿಕೆಗೆ ಜಿಲ್ಲಾಡಳಿತ ಸಕಲ ಪೂರ್ವಭಾವಿ ಸಿದ್ದತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ. ಎ. ದಯಾನಂದ್ ತಿಳಿಸಿದ್ದಾರೆ. 

ಭಾನುವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಆರಂಭವಾಗಲಿದೆ. ಚುನಾವಣಾ ಆಯೋಗದ ಪಾಸ್ ಹೊಂದಿದವರಿಗೆ ಮಾತ್ರ ಮತ ಎಣಿಕೆ ಕೇಂದ್ರದೊಳಗೆ ಪ್ರವೇಶ ಕಲ್ಪಿಸಲಾಗುವುದು. ಕೇಂದ್ರದೊಳಗೆ ಮೊಬೈಲ್ ಪೋನ್ ಬಳಕೆ ಸಂಪೂರ್ಣ ನಿಷೇಧಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. 

ಮತ ಎಣಿಕೆ ಕೇಂದ್ರದ ಸುತ್ತಮುತ್ತಲು ಬಿಗಿ ಪೊಲೀಸ್ ಪಹರೆಯ ವ್ಯವಸ್ಥೆ ಮಾಡಲಾಗುವುದು. ಎಣಿಕೆ ಕೇಂದ್ರದ ನಿರ್ದಿಷ್ಟ ಪ್ರದೇಶದ ಸುತ್ತಮುತ್ತಲು ಸಾರ್ವಜನಿಕರ ಪ್ರವೇಶದ ಮೇಲೆ ನಿರ್ಬಂಧ ವಿಧಿಸಲಾಗಿದೆ. ಪ್ರತಿ ವಾರ್ಡ್‍ನ ಮತ ಎಣಿಕೆ ಪೂರ್ಣಗೊಂಡ ನಂತರ, ಮತ ಎಣಿಕೆ ಕೇಂದ್ರದ ಬಳಿ ಧ್ವನಿವರ್ಧಕದ ಮೂಲಕ ಫಲಿತಾಂಶ ಪ್ರಕಟಣೆಯ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. 

ಮತ ಎಣಿಕೆ ಸಿಬ್ಬಂದಿಗಳಿಗೆ ಮತ ಎಣಿಕೆ ವೇಳೆ ಅನುಸರಿಸಬೇಕಾದ ವಿಧಿ-ವಿಧಾನಗಳ ಕುರಿತಂತೆ ಈಗಾಗಲೇ ಸೂಕ್ತ ತರಬೇತಿ, ಅಗತ್ಯ ಮಾಹಿತಿ ನೀಡಲಾಗಿದೆ. ಯಾವುದೇ ಗೊಂದಲ-ಗಡಿಬಿಡಿಗೆ ಆಸ್ಪದವಾಗದಂತೆ ಎಚ್ಚರ ವಹಿಸುವಂತೆ ಸೂಚಿಸಲಾಗಿದೆ. ಮತ ಎಣಿಕೆ ಕೊಠಡಿಯಲ್ಲಿ ಸಿ.ಸಿ. ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಮತ ಎಣಿಕೆ ಆರಂಭವಾದ ನಂತರ ಕೊಠಡಿಯೊಳಗೆ ವೀಡಿಯೋ ಚಿತ್ರೀಕರಣ ನಿರ್ಬಂಧಿಸಲಾಗಿದೆ ಎಂದು ಹೇಳಿದ್ದಾರೆ. 

ಮತ ಎಣಿಕೆ ಕೇಂದ್ರಕ್ಕೆ ಅಭ್ಯರ್ಥಿಗಳು ಹಾಗೂ ಅವರು ನಿಯೋಜಿಸಿದ ಏಜೆಂಟರುಗಳಿಗೆ ಮಾತ್ರ ಪ್ರವೇಶ ಕಲ್ಪಿಸಲಾಗುವುದು. 2 ಭದ್ರತಾ ಕೊಠಡಿಗಳು, 7 ಮತ ಎಣಿಕೆ ಹಾಲ್, 49 ಮತ ಎಣಿಕೆ ಟೇಬಲ್ ಹಾಗೂ 147 ಮತ ಎಣಿಕೆ ಮೇಲ್ವಿಚಾರಕರು ಹಾಗೂ ಸಿಬ್ಬಂದಿ ನೇಮಕ ಮಾಡಲಾಗಿದೆ. ಪ್ರತಿ ವಾರ್ಡ್‍ಗೆ ಒಂದರಂತೆ ಟೇಬಲ್ ಹಾಕಲಾಗಿದೆ. ಸುಮಾರು 10 ಗಂಟೆಯ ವೇಳೆ ಪೂರ್ಣ ಫಲಿತಾಂಶ ಲಭ್ಯವಾಗುವ ಸಾಧ್ಯತೆಗಳಿವೆ ಎಂದು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದ್ದಾರೆ. 

ಅಭ್ಯರ್ಥಿಗಳ ಎದೆಯಲ್ಲಿ ಢವಢವ
ಮತ ಎಣಿಕೆಗೆ ಕೌಂಟ್‍ಡೌನ್ ಆರಂಭವಾಗುತ್ತಿದ್ದಂತೆ, ಅಭ್ಯರ್ಥಿಗಳ ಎದೆಯಲ್ಲಿ ಢವಢವ ಶುರುವಾಗಿದೆ. ಬಹುತೇಕ ಅಭ್ಯರ್ಥಿಗಳು ಫಲಿತಾಂಶ ಏನಾಗುವುದೋ ಎಂಬ ತಳಮಳದಲ್ಲಿದ್ದಾರೆ. ಕೆಲ ಅಭ್ಯರ್ಥಿಗಳು ದೇವಾಲಯ ಸುತ್ತು ಹಾಕುವಲ್ಲಿ ತಲ್ಲೀನವಾಗಿದ್ದಾರೆ. ವಿಶೇಷ ಪೂಜೆ ನೆರವೇರಿಸಿದ ಮಾಹಿತಿಗಳು ಲಭ್ಯವಾಗಿವೆ. ಮತ್ತೆ ಕೆಲ ಅಭ್ಯರ್ಥಿಗಳು ಮಾತ್ರ ಯಾವುದೇ ಗೊಂದಲ - ಗಡಿಬಿಡಿಯಿಲ್ಲದೆ ನಿರಾತಂಕವಾಗಿದ್ದಾರೆ. ಫಲಿತಾಂಶ ಏನೇ ಆಗಿರಲಿ. ಅದನ್ನು ಸಮಚಿತ್ತದಿಂದ ಸ್ವೀಕರಿಸುವ ವಿಶ್ವಾಸ ವ್ಯಕ್ತಪಡಿಸುತ್ತಾರೆ. 

ಜಿದ್ದಾಜಿದ್ದಿನ ಅಖಾಡ
ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ, ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್-ಬಿಜೆಪಿ-ಜೆಡಿಎಸ್‍ಗೆ ಪಾಲಿಕೆ ಚುನಾವಣೆಯು ಅತ್ಯಂತ ಮಹತ್ವದ್ದಾಗಿದೆ. ಈ ಕಾರಣದಿಂದ ಚುನಾವಣೆಯಲ್ಲಿ ಮೇಲುಗೈ ಸಾಧಿಸಲು ಇನ್ನಿಲ್ಲದ ಕಸರತ್ತು ನಡೆಸಿವೆ. ವಿಶೇಷವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ನಡುವೆ ಭಾರೀ ಹಣಾಹಣಿ ಏರ್ಪಟ್ಟಿದೆ. ಆ ಎರಡು ಪಕ್ಷಗಳ ಪ್ರಮುಖ ನಾಯಕರು ಅಭ್ಯರ್ಥಿಗಳ ಪರವಾಗಿ ಬಿರುಸಿನ ಪ್ರಚಾರ ನಡೆಸಿದ್ದರು. ಮತದಾರರ ಮನವೊಲಿಕೆಗೆ ನಾನಾ ತಂತ್ರ-ಪ್ರತಿತಂತ್ರ ರೂಪಿಸಿದ್ದವು. ಯಾವ ಪಕ್ಷ ಪಾಲಿಕೆ ಅಧಿಕಾರದ ಗದ್ದುಗೆಯೇರಲಿದೆ ಎಂಬುವುದು ಸೋಮವಾರ ಸ್ಪಷ್ಟವಾಗಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News