ಏಶ್ಯನ್ ಗೇಮ್ಸ್‌ಗೆ ಸಂಭ್ರಮದ ತೆರೆ

Update: 2018-09-02 17:28 GMT

ಜಕಾರ್ತ: ಇಂಡೋನೇಶ್ಯದ ಜಕಾರ್ತ ಮತ್ತು ಪಾಲೆಂಬಾಗ್‌ನಲ್ಲಿ ಹದಿನೆಂಟನೇ ಆವೃತ್ತಿಯ ಏಶ್ಯನ್ ಗೇಮ್ಸ್‌ಗೆ ರವಿವಾರ ಸಂಭ್ರಮದ ತೆರೆ ಬಿತ್ತು. ಇಂದು ಸಂಜೆ ಜೆಲೋರಾ ಬಂಗ್ ಕಾರ್ನೊ ಸ್ಟೇಡಿಯಂನಲ್ಲಿ ಸಮಾರೋಪ ಸಮಾರಂಭದ ವೇಳೆ ಮಳೆ ಸುರಿಯದರೂ, ಸಮಾರಂಭ ಸಾಂಗವಾಗಿ ನೆರವೇರಿತು. ಅಂತರ್‌ರಾಷ್ಟ್ರೀಯ ಒಲಿಂಪಿಕ್ ಕಮಿಟಿ(ಐಒಸಿ) ಅಧ್ಯಕ್ಷ ಥಾಮಸ್ ಬಾಕ್ ಸಮಾರಂಭದಲ್ಲಿ ಭಾಗವಹಿಸಿದ್ದರು. ಒಲಿಂಪಿಕ್ ಕೌನ್ಸಿಲ್ ಆಫ್ ಏಶ್ಯಾ(ಒಸಿಎ) ಅಧ್ಯಕ್ಷ ಶೇಕ್ ಅಹ್ಮದ್ ಅಲ್ ಫಹಾದ್ ಅಲ್ ಅಹ್ಮದ್ ಅಲ್ ಸಬಾಹ್ ಏಶ್ಯನ್ ಗೇಮ್ಸ್‌ಗೆ ಅಂತಿಮ ತೆರೆ ಎಳೆದಿರುವುದಾಗಿ ಪ್ರಕಟಿಸಿದರು. ಮುಂದಿನ 2022ರ ಏಶ್ಯನ್ ಗೇಮ್ಸ್‌ಗೆ ಚೀನಾದ ಹಾಂಗ್‌ರೊ ನಗರ ಆತಿಥ್ಯ ವಹಿಸಿರುವ ಬಗ್ಗೆ ಘೋಷಿಸಲಾಯಿತು. ಸಮಾರೋಪ ಸಮಾರಂಭದಲ್ಲಿ ಇಂಡೋನೇಶ್ಯಾ ಪೊಲೀಸ್ ಅಕಾಡಮಿಯಿಂದ ಬ್ಯಾಂಡ್ ಮೇಳ, ಗಾಯಕಿ ಇಸ್ಯಾನ ಸರಸ್ವತಿ ಅವರಿಂದ ಮಧುರಕಂಠದ ಗಾಯನ, ಕ್ರೀಡಾಪಟಗಳಿಂದ ಪಥ ಸಂಚಲನ ನಡೆಯಿತು. ಭಾರತದ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಪಥಸಂಚಲನದಲ್ಲಿ ತ್ರಿವರ್ಣ ಧ್ವಜ ಹಿಡಿದು ಭಾರತದ ಏಶ್ಯನ್ ಗೇಮ್ಸ್ ತಂಡವನ್ನು ಮುನ್ನಡೆಸಿದರು.

ಭಾರತದ ಐತಿಹಾಸಿಕ ಸಾಧನೆ

ಭಾರತ ಈ ಕೂಟದಲ್ಲಿ 15 ಚಿನ್ನ, 24 ಬೆಳ್ಳಿ ಹಾಗೂ 30 ಕಂಚು ಸೇರಿದಂತೆ 69 ಪದಕಗಳನ್ನು ಗಳಿಸಿದ್ದು, ಪದಕ ಪಟ್ಟಿಯಲ್ಲಿ 8ನೇ ಸ್ಥಾನದೊಂದಿಗೆ ಐತಿಹಾಸಿಕ ಸಾಧನೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor