ವೀರಶೈವ ಲಿಂಗಾಯತ ಸಮಾಜ ಒಗ್ಗಟ್ಟು ಪ್ರದರ್ಶಿಸುವ ಅಗತ್ಯವಿದೆ: ಮಾಜಿ ಸಿಎಂ ಜಗದೀಶ್ ಶೆಟ್ಟರ್

Update: 2018-09-02 17:46 GMT

ದಾವಣಗೆರೆ,ಸೆ.2: ಪ್ರಸ್ತುತ ದಿನಗಳಲ್ಲಿ ವೀರಶೈವ ಲಿಂಗಾಯತ ಸಮಾಜ ಒಗ್ಗಟ್ಟು ಪ್ರದರ್ಶಿಸುವ ಅಗತ್ಯ ಇದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ನಗರದ ಅಭಿನವ ರೇಣುಕಾ ಮಂದಿರದಲ್ಲಿ ಭಾನುವಾರ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ನಡೆದ ಜಿಲ್ಲಾ ಸಮಾವೇಶ, ಪ್ರತಿಭಾ ಪುರಸ್ಕಾರ, ವಿಶ್ವಸ್ಥ ಮಂಡಳಿ ಸದಸ್ಯರಿಗೆ ಸನ್ಮಾನ ಹಾಗೂ ಬಣಜಿಗರ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಣಜಿಗ, ಪಂಚಮಶಾಲಿ, ಸಾದರ, ಗಾಣಿಗ ಸೇರಿದಂತೆ ಮೊದಲಾದವು ವೀರಶೈವ ಲಿಂಗಾಯತ ಸಮಾಜದ ಅಂಗಗಳು ಆಗಿವೆ. ನಮ್ಮೆಲ್ಲರ ಗುರಿ ವೀರಶೈವ ಲಿಂಗಾಯತ ಸಮಾಜ ಒಗ್ಗಟ್ಟಾಗಿ ಕೆಲಸ ಮಾಡುವುದಾಗಿದೆ ಎಂದರು.

ರಾಜಕಾರಣ ಮಾಡುವ ಹಿನ್ನಲೆಯಲ್ಲಿ ವೀರಶೈವ ಲಿಂಗಾಯತ ಸಮಾಜ ಹೊಡೆಯುವ ಹುನ್ನಾರ ನಡೆದಿದೆ. ಇದರ ಬಗ್ಗೆ ಎಲ್ಲರೂ ಅರಿತುಕೊಳ್ಳಬೇಕಾಗಿದೆ. ಸಮಾಜ ಒಡೆಯುವ ಹುನ್ನಾರ ರಾಜ್ಯದಲ್ಲಿ ನಡೆದರೂ ಅದಕ್ಕೆ ಶಾಮನೂರು ಶಂಕರಪ್ಪನವರು ಅವಕಾಶ ನೀಡದೆ, ವೀರಶೈವ ಲಿಂಗಾಯತ ಒಂದೇ ಎಂಬ ನಿಲುವಿಗೆ ಅಂಟಿಕೊಂಡು ಗಟ್ಟಿತನದ ನಿಲುವು ತೆಗೆದುಕೊಂಡಿದ್ದರು ಎಂದು ಹೇಳಿದರು.

ವೀರಶೈವ ಲಿಂಗಾಯತ ಸಮಾಜದವರಿಗೆ ನ್ಯಾಯಯುತವಾಗಿ ದೊರೆಯಬೇಕಾದ ಹಕ್ಕುಗಳು ಸಿಗಬೇಕು. ನಮ್ಮ ಸಮಾಜಕ್ಕೆ ಸರ್ಕಾರದಿಂದ ಯಾವುದೇ ಸೌಲಭ್ಯಗಳು ದೊರೆತಿಲ್ಲ. ಇದಕ್ಕಾಗಿ ಕಾನೂನಾತ್ಮಕವಾಗಿ ಹೋರಾಟ ನಡೆಸಿ ನಮ್ಮ ಶಕ್ತಿ ಪ್ರದರ್ಶನದೊಂದಿಗೆ ಹಕ್ಕು ಪಡೆಯಬೇಕೇ ವಿನಃ, ಸಮಾಜ ಒಡೆದು ಹಕ್ಕು ಪಡೆಯುವ ರಾಜಕಾರಣ ಮಾಡುವುದು ಸರಿಯಲ್ಲ. ಹಿಂದೆ ಈ ರೀತಿ ರಾಜಕಾರಣ ಮಾಡುವ ಪ್ರಯತ್ನ ನಡೆದಿದ್ದಕ್ಕೆ ಬೇಸರ ವ್ಯಕ್ತಪಡಿಸಿದರು.

ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ, ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಮಾತನಾಡಿ, ಒಂದು ಕಡೆ ಲಿಂಗಾಯತ, ಮತ್ತೊಂದು ಕಡೆ ವೀರಶೈವ ಎಂದು ನಾವುಗಳೇ ಜಗಳವಾಡುತ್ತಿದ್ದೇವೆ. ಇದನ್ನು ಬಿಟ್ಟು ನಾವೆಲ್ಲರೂ ಒಂದು ಎಂದು ಒಗ್ಗಟ್ಟಿನಿಂದ ಇರಬೇಕು. ಇಲ್ಲದಿದ್ದರೆ ನಾವಾಗಲಿ, ನಮ್ಮ ಸಮಾಜವಾಗಲಿ ಉದ್ದಾರವಾಗುವುದಿಲ್ಲ ಎಂದರು.

ನಮ್ಮಲ್ಲಿ ಒಗ್ಗಟ್ಟು ಇಲ್ಲದ ಪರಿಣಾಮ ವೀರಶೈವ ಲಿಂಗಾಯತರು ಇಂದು ಅಲ್ಪ ಸಂಖ್ಯಾತರಾಗುತ್ತಿದ್ದೆವೆ. ರಾಜ್ಯದಲ್ಲಿ ನಮ್ಮ ಜನಸಂಖ್ಯೆ 1.5 ಕೋಟಿ ಇದೆ. ಆದರೆ ಉಪ ಪಂಗಡ, ವೀರಶೈವ ಲಿಂಗಾಯತ ಎಂದು ವಿಭಾಗಿಸುತ್ತಿರುವುದರಿಂದ 70-80 ಲಕ್ಷಕ್ಕೆ ಇಳಿಸುವ ಕೆಲಸ ನಡೆಯುತ್ತಿದೆ ಎಂಬ ಎಚ್ಚರಿಕೆ ನೀಡಿ, ಎಲ್ಲರೂ ಹೊಂದಿಕೊಂಡು ಹೋಗುವ ಭಾವನೆ ಬೆಳೆಸಿಕೊಳ್ಳಬೇಕು ಎಂದರು.

ಬಣಜಿಗ ಸಮಾಜದ ರಾಜ್ಯಾಧ್ಯಕ್ಷ ಡಾ.ಶಿವಬಸಪ್ಪ ಹೆಸರೂರು ಮಾತನಾಡಿದರು. ದಾವಣಗೆರೆ ವಿಶ್ವವಿದ್ಯಾಲಯ ಪ್ರೊ. ಬಿ.ಪಿ. ವೀರಭದ್ರಪ್ಪ ಪ್ರಾಸ್ತಾವಿಕ ಮಾತನಾಡಿದರು. ಶಾಸಕ ಎಸ್.ಎ. ರವೀಂದ್ರನಾಥ್, ಅಥಣಿ ವೀರಣ್ಣ, ಸರಳಾ ಹರಿಕೆರೆ, ಬಿ. ಚಿದಾನಂದಪ್ಪ, ಎಂ.ವಿ. ಗೋಂಗಡಿ ಶೆಟ್ರು, ಹೊಸಕೆರೆ ರುದ್ರಣ್ಣ, ಡಿ.ವಿ. ಶರಣಪ್ಪ, ಹಾಸಬಾವಿ ಕರಿಬಸಪ್ಪ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News