ಸಮ್ಮಿಶ್ರ ಸರ್ಕಾರದ ಬಗ್ಗೆ ಜನರಿಗೆ ಎಳ್ಳಷ್ಟೂ ವಿಶ್ವಾಸವಿಲ್ಲ: ಜಗದೀಶ್ ಶೆಟ್ಟರ್

Update: 2018-09-02 17:56 GMT

ದಾವಣಗೆರೆ,ಸೆ.2: ಯಾವ ಗಳಿಗೆಯಲ್ಲಾದರೂ ಮುರಿದುಬೀಳುವ ಸಮ್ಮಿಶ್ರ ಸರ್ಕಾರದಲ್ಲಿ ಇದ್ದಷ್ಟು ದಿನ ಅಧಿಕಾರ ನಡೆಸಿ, ಲೂಟಿ ಮಾಡುವುದಷ್ಟೇ ಗುರಿಯಾಗಿದ್ದು, ಸರ್ಕಾರದ 100 ದಿನಗಳ ಸಂಭ್ರಮಾಚರಣೆ ದಿನ ಸಿಎಂ ಕುಮಾರಸ್ವಾಮಿ ರಾಹುಲ್ ಗಾಂಧಿ ಕಾಣಲು ದೆಹಲಿಗೆ ತೆರಳಿದ್ದೇ ಇದಕ್ಕೆ ಸಾಕ್ಷಿ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಟೀಕಿಸಿದರು. 

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಬ್ ಇನ್ಸಪೆಕ್ಟರ್, ತಹಶೀಲ್ದಾರ್, ಕಂದಾಯ ನಿರೀಕ್ಷಕ ಸೇರಿದಂತೆ ವಿವಿಧ ಹುದ್ದೆಗಳಿಗೆ ದರ ನಿಗದಿಪಡಿಸಿದ್ದು, ಕೋಟ್ಯಾಂತರ ರೂ.ಗಳ ದಂಧೆ ಸಮ್ಮಿಶ್ರ ಸರ್ಕಾರ ಮಾಡುತ್ತಿದೆ. ಅಭಿವೃದ್ಧಿ ಮರೀಚಿಕೆಯಾಗಿದ್ದು, ಸಮ್ಮಿಶ್ರ ಸರ್ಕಾರದ ಬಗ್ಗೆ ಜನರಿಗೆ ಎಳ್ಳಷ್ಟೂ ವಿಶ್ವಾಸವೇ ಇಲ್ಲದಂತಾಗಿದೆ ಎಂದ ಅವರು, ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ ಪರಸ್ಪರ ಮುಖ ನೋಡುವುದಿಲ್ಲ, ಒಬ್ಬರು ಇದ್ದ ಸಭೆ, ಸಮಾರಂಭಕ್ಕೆ ಮತ್ತೊಬ್ಬರು ಭಾಗವಹಿಸುವುದಿಲ್ಲ. ಸಮ್ಮಿಶ್ರ ಸರ್ಕಾರದ 100 ದಿನಗಳ ಸಂಭ್ರಮಕ್ಕೆ ಸರ್ಕಾರದಿಂದ ಜಾಹೀರಾತು ನೀಡದೇ, ಜೆಡಿಎಸ್ ಪಕ್ಷದಿಂದ ಜಾಹೀರಾತು ನೀಡುತ್ತಿರುವುದೇ ಇದನ್ನು ಪುಷ್ಟೀಕರಿಸುತ್ತದೆ ಎಂದರು. 

ಸಮ್ಮಿಶ್ರ ಸರ್ಕಾರದ 100 ದಿನದ ಸಂಭ್ರಮದಂದು ಸಿಎಂ ಕುಮಾರಸ್ವಾಮಿ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಾಣಲು ತೆರಳುತ್ತಾರೆ. ಡಿಸಿಎಂ ಡಾ.ಜಿ.ಪರಮೇಶ್ವರ, ಮಾಜಿ ಸಿಎಂ ಸಿದ್ದರಾಮಯ್ಯ ಇಲ್ಲೇ ಇದ್ದರು. ಜೆಡಿಎಸ್ ಪಕ್ಷವಂತೂ 100 ದಿನದ ಸಾಧನೆಯನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕುಮಾರಸ್ವಾಮಿ ಸಾಧನೆಯೆಂಬಂತೆ ಬಿಂಬಿಸಿದ್ದು, ಕಾಂಗ್ರೆಸ್ಸಿನ ಪಾಲು ಇಲ್ಲವೇ ಎಂಬ ಪ್ರಶ್ನೆಗೂ ಕಾರಣವಾಗಿದೆ ಎಂದರು. 

100 ದಿನಗಳ ಆಳ್ವಿಕೆಯಲ್ಲಿ ಕುಮಾರಸ್ವಾಮಿ 50 ದಿನಗಳ ಕಾಲ ಮಠ, ಮಂದಿರ, ಮಸೀದಿ, ದರ್ಗಾಗೆ ಹೋಗುವುರಲ್ಲೇ ಕಾಲಹರಣ ಮಾಡಿದ್ದಾರೆ. ತಾನು ಜನರ ಆಶೀರ್ವಾದದಿಂದ ಅಲ್ಲ, ದೇವರ ದಯೆಯಿಂದ ಮುಖ್ಯಮಂತ್ರಿಯಾಗಿದ್ದೇನೆಂದು ಸ್ವತಃ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡುತ್ತಾರೆ ಎಂದ ಅವರು, ಕಾಂಗ್ರೆಸ್-ಜೆಡಿಎಸ್‍ನಲ್ಲೇ ತೀವ್ರ ಅಸಮಾಧಾನ ಭುಗಿಲೇಳುತ್ತಿದೆ. ಸಚಿವ ಸಂಪುಟ ವಿಸ್ತರಣೆ ನಂತರ ಇದು ತೀವ್ರಗೊಳ್ಳಲಿದ್ದು, ಆಗ ಉಭಯ ಪಕ್ಷಗಳಲ್ಲಿನ ಅಸಮಾಧಾನವೂ ಸ್ಪೋಟಗೊಳ್ಳಲಿದೆ. ರಾಜ್ಯದಲ್ಲಿ ಮತ್ತೊಮ್ಮೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದರಲ್ಲಿ ಯಾವುದೇ ಅನುಮಾನವೂ ಇಲ್ಲ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News