ಮ್ಯಾನ್ಮಾರ್ ನಲ್ಲಿ ‘ರಾಯಿಟರ್ಸ್’ನ ಇಬ್ಬರು ಪತ್ರಕರ್ತರಿಗೆ 7 ವರ್ಷ ಜೈಲು

Update: 2018-09-03 16:30 GMT

ಯಾಂಗೂನ್, ಸೆ.3: ಮ್ಯಾನ್ಮಾರ್‌ನ ರಾಷ್ಟ್ರೀಯ ಗೌಪ್ಯತೆಗಳ ಕಾನೂನುಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಬಂಧಿತರಾಗಿದ್ದ ಅಮೆರಿಕದ ಪ್ರತಿಷ್ಠಿತ ಸುದ್ದಿಸಂಸ್ಥೆ ರಾಯ್ಟರ್ಸ್‌ನ ಇಬ್ಬರು ಪತ್ರಕರ್ತರಿಗೆ ಸೋಮವಾರ ಏಳು ವರ್ಷಗಳ ಜೈಲು ಶಿಕ್ಷೆಯನ್ನು ಮ್ಯಾನ್ಮಾರ್‌ನ ನ್ಯಾಯಾಲಯವೊಂದು ವಿಧಿಸಿದೆ. ವಾ ಲೊನ್(32) ಹಾಗೂ ಕ್ಯಾವ್ ಸೊ ವೂ (28) ಜೈಲು ಶಿಕ್ಷೆಗೊಳಗಾದ ಪತ್ರಕರ್ತರಾಗಿದ್ದಾರೆ. ಕಳೆದ ಡಿಸೆಂಬರ್‌ನಿಂದೀಚೆಗೆ ಅವರನ್ನು ಯಾಂಗೊನ್‌ನ ಇನ್‌ಸೆಯಿನ್ ಜೈಲಿನಲ್ಲಿರಿಸಲಾಗಿತ್ತು. ರೊಹಿಂಗ್ಯಗಳ ಮೇಲೆ ಮ್ಯಾನ್ಮಾರ್ ಸೇನೆ ನಡೆಸಿದ ದೌರ್ಜನ್ಯಗಳನ್ನು ವರದಿ ಮಾಡಿದ ಸಂದರ್ಭದಲ್ಲಿ ಅವರನ್ನು ಬಂಧಿಸಲಾಗಿತ್ತು.

 ರಾಯ್ಟರ್ಸ್‌ನ ಪತ್ರಕರ್ತರಿಗೆ ಜೈಲು ಶಿಕ್ಷೆ ವಿಧಿಸಿರುವುದಕ್ಕೆ ವಿಶ್ವದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಇದೊಂದು ಮಾಧ್ಯಮಗಳ ಮೇಲಿನ ಆಕ್ರಮಣವೆಂದು ಮಾನವಹಕ್ಕು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಂಧಿತ ಪತ್ರಕರ್ತರನ್ನು ಕೂಡಲೇ ಬಿಡುಗಡೆಗೊಳಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

  ಮ್ಯಾನ್ಮಾರ್ ಸೇನೆ ರಖೈನ್ ಪ್ರಾಂತದಲ್ಲಿ ನಡೆಸಿದ ಜನಾಂಗೀಯ ನರಮೇಧ, ಅತ್ಯಾಚಾರ, ಕೊಲೆ, ಹಿಂಸಾಚಾರಕ್ಕೆ ಬೆದರಿ 7 ಲಕ್ಷಕ್ಕೂ ಅಧಿಕ ರೊಹಿಂಗ್ಯಗಳು ಬಾಂಗ್ಲಾಗೆ ಪಲಾಯನಗೈದಿದ್ದರು. ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ರಖೈನ್ ಗ್ರಾಮದ ಇನ್ ದಿನ್ ಎಂಬಲ್ಲಿ ಮ್ಯಾನ್ಮಾರ್ ಸೇನೆ ನಡೆಸಿದ 10 ಮಂದಿ ರೊಹಿಂಗ್ಯಗಳ ಕಾನೂನುಬಾಹಿರ ಹತ್ಯೆಗಳನ್ನು ಬಯಲಿಗೆಳೆದುದಕ್ಕಾಗಿಯೇ ತಮ್ಮನ್ನು ಬಂಧಿಸಲಾಗಿದೆಯೆಂದು ವಾಲ್ ಲೋನ್ ಹಾಗೂ ಕ್ಯಾವ್ ಸೂ ವೂ ಆರೋಪಿಸಿದ್ದಾರೆ.

ಯಾಂಗೂನ್‌ನಲ್ಲಿ ಪೊಲೀಸರು ತಮ್ಮನ್ನು ಭೋಜನಕೂಟಕ್ಕೆ ಆಹ್ವಾನಿಸಿದ್ದರು. ಅಲ್ಲಿ ಪೊಲೀಸರು ತಮಗೆ ದಾಖಲೆಗಳನ್ನು ಹಸ್ತಾಂತರಿಸಿದ್ದರು. ತಾವು ರೆಸ್ಟಾರೆಂಟ್‌ನಿಂದ ಹೊರತೆರಳುತ್ತಿದ್ದಂತೆಯೇ ತಮ್ಮನ್ನು ಪೊಲೀಸರು, ಗುಪ್ತ ದಾಖಲೆಗಳನ್ನು ಹೊಂದಿದ ಆರೋಪದಲ್ಲಿ ಬಂಧಿಸಿದರೆಂದು ಬಂಧಿತ ಪತ್ರಕರ್ತರು, ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದಾರೆ. ಆದರೆ ಅವರ ವಾದವನ್ನು ಒಪ್ಪಿಕೊಳ್ಳಲು ನಿರಾಕರಿಸಿದ ನ್ಯಾಯಾಧೀಶ ಯೆ ಲಿವಿನ್ ಇಬ್ಬರಿಗೂ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದಾರೆ. ಬಂಧಿತ ಪತ್ರಕರ್ತರ ಪರ ವಾದಿಸಿದ ನ್ಯಾಯವಾದಿ ಖಿನ್ ವೌಂಗ್ ಝಾನವ್ ಅವರು ತೀರ್ಪಿನ ವಿರುದ್ಧ ಶೀಘ್ರದಲ್ಲೇ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಈ ಮಧ್ಯೆ ರಾಯ್ಟರ್ಸ್‌ ಸುದ್ದಿ ಸಂಸ್ಥೆ ಕೂಡಾ ತೀರ್ಪಿಗೆ ವಿರೋಧ ವ್ಯಕ್ತಪಡಿಸಿದ್ದು, ತನ್ನ ಪತ್ರಕರ್ತರ ವಿರುದ್ಧ ಹುಸಿ ಆರೋಪಗಳನ್ನು ಹೊರಿಸಲಾಗಿದೆ ಎಂದು ಅದು ದೂರಿದೆ.

ಮ್ಯಾನ್ಮಾರ್ ಹಾಗೂ ವಿಶ್ವದೆಲ್ಲೆಡೆಯ ಮಾಧ್ಯಮಗಳಿಗೆ ಇಂದು ದುಃಖದ ದಿನವಾಗಿದೆ.

ಈ ತೀರ್ಪು ವರದಿಗಾರರನ್ನು ವೌನವಾಗಿಸಲು ಹಾಗೂ ಮಾಧ್ಯಮಗಳಿಗೆ ಬೆದರಿಕೆಯೊಡ್ಡುವ ದುರುದ್ದೇಶದಿಂದ ಕೂಡಿದೆ.

ರಾಯ್ಟರ್ಸ್‌ ಮುಖ್ಯ ಸಂಪಾದಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News