ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಪ್ರಕಟ: ಕಾಂಗ್ರೆಸ್ ಮೇಲುಗೈ

Update: 2018-09-03 13:31 GMT

ಬೆಂಗಳೂರು, ಸೆ.3: ರಾಜ್ಯಾದ್ಯಂತ ಭಾರಿ ಕುತೂಹಲ ಮೂಡಿಸಿದ್ದ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಪಕ್ಷ ಹೆಚ್ಚು ಕ್ಷೇತ್ರಗಳಲ್ಲಿ ಗೆಲವು ಸಾಧಿಸುವ ಮೂಲಕ ಪ್ರಾಬಲ್ಯ ಮೆರೆದಿದೆ. ಆದರೆ, ಬಹುತೇಕ ಕಡೆಗಳಲ್ಲಿ ಅತಂತ್ರ ಫಲಿತಾಂಶ ಪ್ರಕಟಗೊಂಡಿದ್ದು, ಅಧಿಕಾರಕ್ಕಾಗಿ ತೀವ್ರ ಪೈಪೋಟಿ ಶುರುವಾಗಿದೆ.

ರಾಜ್ಯದ ಮೂರು ಮಹಾನಗರ ಪಾಲಿಕೆ ಸೇರಿದಂತೆ 105 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದು, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಅಧಿಕಾರಕ್ಕಾಗಿ ತೀವ್ರ ಪೈಪೋಟಿ ನಡೆದಿದೆ. ಮತದಾರರು ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ನೀಡದಿದ್ದರೂ, ನಗರಸಭೆಯಲ್ಲಿ ಬಿಜೆಪಿ ಅಲ್ಪಮಟ್ಟಿಗೆ ವೃದ್ಧಿಸಿಕೊಂಡಿದ್ದರೆ, ಕಾಂಗ್ರೆಸ್ ಪುರಸಭೆಯಲ್ಲಿ ಅಧಿಕ ಸ್ಥಾನಗಳನ್ನು ಗಳಿಸಿದೆ. ಪಟ್ಟಣ ಪಂಚಾಯತ್ ಗಳಲ್ಲಿ ಎರಡೂ ಪಕ್ಷಗಳು ಸಮಬಲ ಪಡೆದಿದ್ದು, ಜೆಡಿಎಸ್ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.

ರಾಜ್ಯದ 22 ಜಿಲ್ಲೆಗಳ 105 ನಗರ ಪಾಲಿಕೆ, ಪುರಸಭೆ, ನಗರಸಭೆಗಳು ಹಾಗೂ ಮಹಾನಗರ ಪಾಲಿಕೆಗಳ 2,632 ವಾರ್ಡ್‌ಗಳಿಗೆ ಚುನಾವಣೆ ನಡೆದಿದ್ದು, ಅದರಲ್ಲಿ 982 ವಾರ್ಡ್‌ಗಳಲ್ಲಿ ಕಾಂಗ್ರೆಸ್, 929 ವಾರ್ಡ್‌ಗಳಲ್ಲಿ ಬಿಜೆಪಿ, 375 ವಾರ್ಡ್‌ಗಳಲ್ಲಿ ಜೆಡಿಎಸ್, ಎಸ್‌ಡಿಪಿಐನ 17, ಬಿಎಸ್ಪಿಯ 13, ಕೆಪಿಜೆಪಿಯಿಂದ 10, ಎಸ್‌ಪಿಯ 4, ಕೆಆರ್‌ಆರ್‌ಎಸ್, ನ್ಯೂ ಇಂಡಿಯನ್ ಕಾಂಗ್ರೆಸ್, ಡಬ್ಲೂ.ಪಿ.ಐನ ತಲಾ ಒಬ್ಬರು ಹಾಗೂ 329 ಪಕ್ಷೇತರ ಅಭ್ಯರ್ಥಿಗಳು ಗೆಲುವು ಪಡೆದಿದ್ದಾರೆ.

ನಗರಸಭೆ: ರಾಜ್ಯದ ವಿವಿಧ 29 ನಗರಸಭೆಗಳ ಪೈಕಿ 10 ರಲ್ಲಿ ಕಾಂಗ್ರೆಸ್, 5 ರಲ್ಲಿ ಬಿಜೆಪಿ, 3 ರಲ್ಲಿ ಜೆಡಿಎಸ್‌ಗೆ ಸಂಪೂರ್ಣ ಬಹುಮತ ಸಿಕ್ಕಿದೆ. ಇನ್ನುಳಿದಂತೆ 11 ನಗರಸಭೆಗಳಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.

ಪಟ್ಟಣ ಪಂಚಾಯತ್: ರಾಜ್ಯದ 20 ಪಟ್ಟಣ ಪಂಚಾಯತ್ ಗಳಿಗೆ ನಡೆದ ಚುನಾವಣೆಯಲ್ಲಿ ತಲಾ 7 ಕಡೆ ಕಾಂಗ್ರೆಸ್ ಮತ್ತು ಬಿಜೆಪಿಗೆ ಸಂಪೂರ್ಣ ಬಹುಮತ ಸಿಕ್ಕಿದ್ದು, ಅಧಿಕಾರ ಹಿಡಿಯುವಲ್ಲಿ ಸಫಲವಾಗಿದೆ. ಇನ್ನುಳಿದಂತೆ ಎರಡರಲ್ಲಿ ಜೆಡಿಎಸ್ ಹಾಗೂ ನಾಲ್ಕರಲ್ಲಿ ಅತಂತ್ರ ಸ್ಥಿತಿ ನಿರ್ಮಾಣಗೊಂಡಿದೆ.

ಪುರಸಭೆ: ರಾಜ್ಯಾದ್ಯಂತ 53 ಪುರಸಭೆಗಳಿಗೆ ನಡೆದ ಚುನಾವಣೆಯಲ್ಲಿ 19 ರಲ್ಲಿ ಕಾಂಗ್ರೆಸ್, 12 ರಲ್ಲಿ ಬಿಜೆಪಿ ಹಾಗೂ 8 ರಲ್ಲಿ ಜೆಡಿಎಸ್‌ಗೆ ಬಹುಮತವಿದ್ದರೆ, 14 ಪುರಸಭೆಗಳಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.

ಮಹಾನಗರ ಪಾಲಿಕೆ: ಶಿವಮೊಗ್ಗ, ಮೈಸೂರು ಹಾಗೂ ತುಮಕೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಶಿವಮೊಗ್ಗದಲ್ಲಿ ಬಿಜೆಪಿಗೆ ಬಹುಮತ ಸಿಕ್ಕಿದ್ದು, ಉಳಿದ ಎರಡು ಮಹಾನಗರ ಪಾಲಿಕೆಗಳಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ರಾಜ್ಯದಲ್ಲಿ ಸಮ್ಮಿಶ್ರ ಸರಕಾರವಿದ್ದಂತೆ ಮಹಾನಗರ ಪಾಲಿಕೆಯಲ್ಲಿಯೂ ದೋಸ್ತಿ ಆಡಳಿತ ನಡೆಸುವ ಸಾಧ್ಯತೆಯಿದೆ. ಒಟ್ಟಾರೆಯಾಗಿ ಭಾರಿ ಕುತೂಹಲ ಮೂಡಿಸಿದ್ದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ 31 ಕಡೆ, ಬಿಜೆಪಿ 30 ಹಾಗೂ ಜೆಡಿಎಸ್ 13 ಕಡೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, 31 ಕಡೆಗಳಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.

ಯಾರಿಗೆ ಎಷ್ಟು ಸ್ಥಾನ: ಮಹಾನಗರ ಪಾಲಿಕೆಯ 135 ಸ್ಥಾನಗಳಲ್ಲಿ ಕಾಂಗ್ರೆಸ್ 36, ಬಿಜೆಪಿ 54, ಜೆಡಿಎಸ್ 30, ಪಕ್ಷೇತರರು 15 ವಾರ್ಡ್‌ಗಳಲ್ಲಿ ಗೆದ್ದಿದ್ದಾರೆ. ಪಟ್ಟಣ ಪಂಚಾಯತ್ ನ 355 ವಾರ್ಡ್‌ಗಳಲ್ಲಿ ಕಾಂಗ್ರೆಸ್ 138 ಸ್ಥಾನಗಳನ್ನು ಗೆಲ್ಲುವ ಮೂಲಕ ಪ್ರಾಬಲ್ಯವನ್ನು ಮೆರೆದಿದ್ದರೆ, ಬಿಜೆಪಿ 130, ಜೆಡಿಎಸ್ 29 ಹಾಗೂ ಇತರರು 58 ಸ್ಥಾನಗಳನ್ನು ಗೆಲ್ಲುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ.

ನಗರ ಸಭೆಯ 926 ವಾರ್ಡ್‌ಗಳಲ್ಲಿ ಬಿಜೆಪಿಯು 370 ಸ್ಥಾನಗಳನ್ನು ಗೆಲ್ಲುವ ಮೂಲಕ ತಮ್ಮ ಶಕ್ತಿ ಪ್ರದರ್ಶಿಸಿದ್ದು, ಕಾಂಗ್ರೆಸ್ 294 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ಇನ್ನುಳಿದಂತೆ ಜೆಡಿಎಸ್ 106 ಹಾಗೂ ಪಕ್ಷೇತರರು 156 ಕಡೆ ಗೆಲುವು ಸಾಧಿಸಿದ್ದಾರೆ.

1,247 ಪುರಸಭೆ ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 514, ಬಿಜೆಪಿ 375 ಸ್ಥಾನಗಳನ್ನು ಪಡೆದಿದ್ದರೆ, ಜೆಡಿಎಸ್ 210, ಎಸ್‌ಡಿಪಿಐ 4, ಕೆಆರ್‌ಆರ್‌ಎಸ್ 1, ಎಸ್‌ಪಿ 4, ಡಬ್ಲೂಪಿಐ 1 ಹಾಗೂ ಪಕ್ಷೇತರರು 135 ಸ್ಥಾನಗಳನ್ನು ಗೆದ್ದುಕೊಂಡಿದ್ದಾರೆ.

ಜೆಡಿಎಸ್ ಮೂಲ ಸ್ಥಾನವಾದ ಹಳೆ ಮೈಸೂರು ಭಾಗದ ಹಾಸನ, ಮಂಡ್ಯ, ಮೈಸೂರು ಹಾಗೂ ತುಮಕೂರು ಭಾಗಗಳಲ್ಲಿ ತನ್ನ ಪ್ರಾಬಲ್ಯವನ್ನು ಕಾಪಾಡಿಕೊಂಡಿದೆ. ಬಿಜೆಪಿಯು ಉತ್ತರ ಕರ್ನಾಟಕ, ಕರಾವಳಿ ಹಾಗೂ ಮಂಗಳೂರು ಭಾಗದಲ್ಲಿ ತನ್ನ ಪ್ರಭಾವ ಉಳಿಸಿಕೊಂಡಿದೆ. ಇನ್ನುಳಿದಂತೆ ಕಾಂಗ್ರೆಸ್ ರಾಜ್ಯದ ಎಲ್ಲ ಕಡೆಗಳಲ್ಲಿ ತನ್ನ ಪ್ರಭಾವವನ್ನು ಉಳಿಸಿಕೊಂಡಿದ್ದು, ಜೆಡಿಎಸ್ ಮತ್ತು ಬಿಜೆಪಿಗಿಂತ ಹೆಚ್ಚು ಸ್ಥಾನಗಳನ್ನು ಪಡೆದುಕೊಂಡಿದೆ.

ಕಾಂಗ್ರೆಸ್ ಅತಿಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ದೊಡ್ಡ ಪಕ್ಷವಾಗಿದ್ದರೂ ಹಲವು ಕಡೆಗಳಲ್ಲಿ ಮಾತ್ರ ಅಧಿಕಾರ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿದೆ. ಕೆಲವು ಕಡೆ ಗೆಲವು ಪಡೆಯುವಲ್ಲಿ ವಿಫಲವಾಗಿ ಅತಂತ್ರ ಸ್ಥಿತಿಗೆ ತಲುಪಿದೆ. ಅಲ್ಲದೆ, ಮತ್ತಷ್ಟು ಕ್ಷೇತ್ರಗಳಲ್ಲಿ ಶೂನ್ಯ ಸಾಧನೆ ಮಾಡಿದ್ದು, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಜಿಲ್ಲೆಯಾದ ತುಮಕೂರುನಲ್ಲಿ ಜೆಡಿಎಸ್ ಹೆಚ್ಚು ಸ್ಥಾನ ಗೆಲುವು ಸಾಧಿಸಿರುವುದು ಸ್ಪಷ್ಟ ಉದಾಹರಣೆಯಾಗಿದೆ. ಇನ್ನುಳಿದಂತೆ ಕರಾವಳಿ ಹಾಗೂ ಉತ್ತರ ಕರ್ನಾಟಕದಲ್ಲಿ ಬಿಜೆಪಿ ಗೆಲುವು ದಾಖಲಿಸಿದೆ. ಜೆಡಿಎಸ್ ಹಳೆ ಮೈಸೂರು ಮತ್ತು ಉತ್ತರ ಕರ್ನಾಟಕ ಕೆಲವು ಕಡೆ ಗೆಲುವು ಪಡೆದಿದೆ.

ಅವಿರೋಧವಾಗಿ ಆಯ್ಕೆ
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚುನಾವಣೆ ನಡೆಯದೇ 30 ವಾರ್ಡ್‌ಗಳ 9 ಕಾಂಗ್ರೆಸ್, 3 ಬಿಜೆಪಿ, 1 ಜೆಡಿಎಸ್, 1 ಬಿಎಸ್ಪಿ ಹಾಗೂ 16 ಪಕ್ಷೇತರ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಆಯೋಗ ಘೋಷಿಸಿದೆ.

ಯಾರಿಗೆ ಎಷ್ಟು ಸ್ಥಾನ
ಕಾಂಗ್ರೆಸ್-982 ಸ್ಥಾನ
ಬಿಜೆಪಿ-929 ಸ್ಥಾನ
ಜೆಡಿಎಸ್-375 ಸ್ಥಾನ
ಇತರೆ-376 ಸ್ಥಾನ

ಪಕ್ಷವಾರು ಬಲಾಬಲ
ಮಹಾನಗರ ಪಾಲಿಕೆ: ಒಟ್ಟುವಾರ್ಡ್-135

ಕಾಂಗ್ರೆಸ್- 36 ಬಿಜೆಪಿ-54 ಜೆಡಿಎಸ್-30 ಇತರೆ-15

ಪಟ್ಟಣ ಪಂಚಾಯತ್: ಒಟ್ಟುವಾರ್ಡ್-355

ಕಾಂಗ್ರೆಸ್-138 ಬಿಜೆಪಿ-130 ಜೆಡಿಎಸ್-29 ಇತರೆ- 58

ನಗರಸಭೆ: ಒಟ್ಟು ವಾರ್ಡ್-926
ಕಾಂಗ್ರೆಸ್-294 ಬಿಜೆಪಿ-370 ಜೆಡಿಎಸ್-106 ಇತರೆ-156

ಪುರಸಭೆ: ಒಟ್ಟು ವಾರ್ಡ್-1246
ಕಾಂಗ್ರೆಸ್-514 ಬಿಜೆಪಿ-375 ಜೆಡಿಎಸ್-210 ಇತರೆ-147

ದಿಕ್ಸೂಚಿಯಲ್ಲ
ಇಂದು ಪ್ರಕಟವಾಗಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ದಿಕ್ಸೂಚಿಯಲ್ಲ. ಇದು ಲೋಕಸಭೆ ಚುನಾವಣೆಯ ವೆುೀಲೆ ಯಾವುದೇ ಪರಿಣಾಮ ಬೀರುವುದಿಲ್ಲ.
-ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News