ಚಾಮರಾಜನಗರ ಜಿಲ್ಲೆ: ಎರಡೂ ನಗರಸಭೆ ಅತಂತ್ರ

Update: 2018-09-03 15:17 GMT

ಚಾಮರಾಜನಗರ,ಸೆ.3: ಗಡಿ ಚಾಮರಾಜನಗರ ಜಿಲ್ಲೆಯ ಎರಡು ನಗರ ಸಭೆಯಲ್ಲಿ ಕಾಂಗ್ರೆಸ್ ಸೋಲುಂಡರೂ, ಅಧಿಕಾರದ ಗದ್ದುಗೆ ಹಿಡಿಯಲು ಅನ್ಯಮಾರ್ಗವನ್ನು ಅನುಸರಿಸುವಂತಾಗಿದೆ.

ಚಾಮರಾಜನಗರ ನಗರಸಭೆಯ 31 ವಾರ್ಡ್‍ಗಳಲ್ಲಿ ಕಾಂಗ್ರೆಸ್ 8 ಸ್ಥಾನ ಪಡೆದರೆ, ಬಿಜೆಪಿ 15 ಸ್ಥಾನ ಪಡೆಯುವ ಮೂಲಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಎಸ್ಡಿಪಿಐ 6 ಸ್ಥಾನ ಪಡೆದಿದೆ. ಜೊತೆಗೆ ಬಿಎಸ್‍ಪಿ ಮತ್ತು ಪಕ್ಷೇತರರು ತಲಾ ಒಂದೊಂದು ಸ್ಥಾನ ಪಡೆದಿದ್ದಾರೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ನಗರಸಭೆಯ 31 ವಾರ್ಡ್‍ಗಳಲ್ಲಿ 29 ವಾರ್ಡ್‍ಗಳಿಗೆ ಚುನಾವಣೆ ನಡೆದಿದ್ದು, ಅದರಲ್ಲಿ ಬಹುಜನ ಸಮಾಜ ಪಕ್ಷದ 8 ಸದಸ್ಯರು, ಕಾಂಗ್ರೆಸ್ 11, ಬಿಜೆಪಿ 6, ಪಕ್ಷೇತರರು 4 ಸ್ಥಾನ ಹೊಂದಿದ್ದಾರೆ. ಈಗಾಗಲೇ ಬಹುಜನ ಸಮಾಜ ಪಕ್ಷದಿಂದ ಒಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದು ಸೇರಿಸಿದರೆ ಬಿಎಸ್‍ಪಿ 9 ಸ್ಥಾನ ಗೆಲುವು ಕಂಡಂತಿದೆ. ಒಂದು ಸ್ಥಾನಕ್ಕೆ ಚುನಾವಣೆ ನಡೆಯಬೇಕಾಗಿದೆ.

ಚಾಮರಾಜನಗರ ನಗರಸಭೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲು ಕಂಡಿದೆ. ಆದರೆ ಕೊಳ್ಳೇಗಾಲ ನಗರಸಭೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷ ಣ ಸಚಿವ ಎನ್. ಮಹೇಶ್‍ರವರ ತವರು ಕ್ಷೇತ್ರದಲ್ಲಿ ಬಿ.ಎಸ್.ಪಿ 9 ಸ್ಥಾನ ಪಡೆಯುವ ಮೂಲಕ ನಗರಸಭೆಯ ಗದ್ದುಗೆಗೆ ನಿರ್ಣಾಯಕ ಪಾತ್ರ ವಹಿಸಲಿದೆ.

ಕೊಳ್ಳೇಗಾಲದಲ್ಲಿ ಸಹ ಮೈತ್ರಿ ಆಡಳಿತ ನಡೆಸಲು ನಿರ್ಧಾರ ಕೈಗೊಂಡಿರುವುದಾಗಿ ಸಚಿವ ಎನ್. ಮಹೇಶ್ ಹೇಳಿಕೆ ನೀಡಿದ್ದರಿಂದ ಕೊಳ್ಳೇಗಾಲ ನಗರ ಸಭೆ ಆಡಳಿತ ಬಹುತೇಕ ಮೈತ್ರಿಯಾಗಲಿದೆ. ಒಟ್ಟಿನಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿರುವ ಚಾಮರಾಜನಗರ ಜಿಲ್ಲೆಯ ನಗರಸಭೆ ಆಡಳಿತವು ಕಾಂಗ್ರೆಸ್ ಪಕ್ಷದ ವಶವಾಗದೆ ಮೈತ್ರಿಯಲ್ಲೇ ತೃಪ್ತಿ ಪಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News