ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆ: ಪ್ರಾಬಲ್ಯ ಮೆರೆದ ಬಿಜೆಪಿ

Update: 2018-09-03 15:25 GMT

ಶಿವಮೊಗ್ಗ, ಸೆ. 3: ಭಾರೀ ಕುತೂಹಲ ಕೆರಳಿಸಿದ್ದ, ಜಿದ್ದಾಜಿದ್ದಿನ ಅಖಾಡಕ್ಕೆ ಸಾಕ್ಷಿಯಾಗಿದ್ದ ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಪ್ರಾಬಲ್ಯ ಮೆರೆದಿದೆ. ನಗರಸಭೆ ಪಾಲಿಕೆಯಾಗಿ ಮೇಲ್ದರ್ಜೆಗೇರಿದ ನಂತರ ನಡೆದ ಮೊದಲ ಚುನಾವಣೆಯಲ್ಲಿ, ಬಿಜೆಪಿ ಪಕ್ಷವು ಒಟ್ಟಾರೆ 35 ವಾರ್ಡ್‍ಗಳಲ್ಲಿ 20 ವಾರ್ಡ್‍ಗಳಲ್ಲಿ ಜಯ ಸಾಧಿಸಿದೆ. ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಸಫಲವಾಗಿದೆ. 

ಉಳಿದಂತೆ ನಿರೀಕ್ಷೆ ಮೂಡಿಸಿದ್ದ ಕಾಂಗ್ರೆಸ್ ಪಕ್ಷ ತೀವ್ರ ಮುಖಭಂಗ ಅನುಭವಿಸಿದ್ದು, ಕೇವಲ 7 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಜೆಡಿಎಸ್ ಪಕ್ಷ ಧೂಳೀಪಟವಾಗಿದ್ದು, ಆ ಪಕ್ಷದ ಇಬ್ಬರು ಅಭ್ಯರ್ಥಿಗಳು ಜಯ ಸಂಪಾದಿಸಿದ್ದಾರೆ. ಎಸ್‍ಡಿಪಿಐ ಪಕ್ಷ ಒಂದು ಸ್ಥಾನದಲ್ಲಿ ಜಯ ಸಾಧಿಸುವ ಮೂಲಕ ಗಮನ ಸೆಳೆದಿದೆ. ಉಳಿದಂತೆ ಐವರು ಪಕ್ಷೇತರ ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಇದು ಎಲ್ಲರ ಹುಬ್ಬೇರುವಂತೆ ಮಾಡಿದೆ. 

ಕಳೆದ ನಗರಸಭೆ ಚುನಾವಣೆಯಲ್ಲಿ ಕೆಜೆಪಿಯೊಂದಿಗಿನ ದಾಯಾದಿ ಕಲಹದಿಂದ, ಬಿಜೆಪಿ ಕಳಪೆ ಸಾಧನೆ ಮಾಡಿತ್ತು. ಕಾಂಗ್ರೆಸ್ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಮೊದಲ ಬಾರಿಗೆ ಜೆಡಿಎಸ್‍ನ 5 ಸದಸ್ಯರು ಆಯ್ಕೆಯಾಗಿದ್ದರು. ಆದರೆ ಈ ಚುನಾವಣೆಯಲ್ಲಿ ಫಲಿತಾಂಶ ಸಂಪೂರ್ಣ ಬದಲಾಗಿದೆ. ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್, ಜೆಡಿಎಸ್ ಹಿನ್ನಡೆ ಅನುಭವಿಸಿವೆ. ಕಳೆದ ಬಾರಿ 1 ವಾರ್ಡ್ ತನ್ನ ತೆಕ್ಕೆಗೆ ಹಾಕಿಕೊಂಡಿದ್ದ ಎಸ್‍ಡಿಪಿಐ, ಕಳೆದ ಬಾರಿಯಂತೆ ಈ ಬಾರಿಯೂ ಒಂದು ಕಡೆ ಜಯ ಸಂಪಾದಿಸಿದೆ. 

ಭದ್ರ ಕೋಟೆ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದ ಬಿಜೆಪಿ, ಇದೀಗ ಪಾಲಿಕೆ ಆಡಳಿತದ ಗದ್ದುಗೆಯೇರುವಲ್ಲಿಯೂ ಸಫಲವಾಗಿದೆ. ಈ ಮೂಲಕ ಶಿವಮೊಗ್ಗ ನಗರವನ್ನು ತನ್ನ ಭದ್ರಕೋಟೆಯಾಗಿ ಮಾರ್ಪಡಿಸಿಕೊಂಡಿದೆ. ಬಿಜೆಪಿಯ ಈ ಮುನ್ನಡೆ ಆ ಪಕ್ಷದ ಶಾಸಕ ಕೆ.ಎಸ್.ಈಶ್ವರಪ್ಪರ ಮೇಲುಗೈ ಎಂದೇ ಅವರ ಬೆಂಬಲಿಗರು ವಿಶ್ಲೇಷಿಸುತ್ತಿದ್ದಾರೆ. 

ವೈಮನಸ್ಸು, ಬಂಡಾಯ ಅಭ್ಯರ್ಥಿಗಳು ಕಣದಲ್ಲಿದ್ದ ಹೊರತಾಗಿಯೂ 20 ವಾರ್ಡ್‍ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯ ಸಾಧಿಸಿರುವುದು, ಶಿವಮೊಗ್ಗ ನಗರ ಬಿಜೆಪಿಯಲ್ಲಿ ಕೆ.ಎಸ್.ಈಶ್ವರಪ್ಪ ಹಿಡಿತ ಮತ್ತಷ್ಟು ಬಿಗಿಯಾಗುವಂತೆ ಮಾಡಿದೆ. ಬಿ.ಎಸ್.ವೈ. ಹಿಡಿತದಿಂದ ಕ್ಷೇತ್ರವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. 

ಹಿನ್ನಡೆ: ಕಾಂಗ್ರೆಸ್ ಪಕ್ಷ ಕನಿಷ್ಠ 11 ರಿಂದ 13 ಸ್ಥಾನಗಳಲ್ಲಿ ಜಯ ಸಾಧಿಸುವ ಇರಾದೆಯಲ್ಲಿತ್ತು. ಆದರೆ ಕೇವಲ 7 ವಾರ್ಡ್‍ಗಳಲ್ಲಿ ಆ ಪಕ್ಷದ ಅಭ್ಯರ್ಥಿಗಳು ಜಯ ಸಂಪಾದಿಸಿರುವುದು ಆ ಪಕ್ಷಕ್ಕೆ ಅಕ್ಷರಶಃ ಶಾಕ್‍ಗೊಳಗಾದ ಅನುಭವ ಉಂಟು ಮಾಡಿದೆ.  ಬಂಡಾಯ ಅಭ್ಯರ್ಥಿಗಳು ಕಣಕ್ಕಿಳಿದಿದ್ದು, ಪಕ್ಷದ ಪ್ರಮುಖ ನಾಯಕರಿಗೆ ಟಿಕೆಟ್ ನಿರಾಕರಿಸಿದ್ದು, ನಾಯಕರ ನಡುವಿನ ವೈಮನಸ್ಸು ಮತ್ತಿತರ ಕಾರಣಗಳು ಕಾಂಗ್ರೆಸ್ ಪಕ್ಷದ ಹಿನ್ನಡೆಗೆ ಮುಖ್ಯ ಕಾರಣವೆಂದೇ ವಿಶ್ಲೇಷಿಸಲಾಗುತ್ತಿದೆ. ಹಲವೆಡೆ ಜೆಡಿಎಸ್, ಎಸ್‍ಡಿಪಿಐ, ಬಂಡಾಯ, ಪಕ್ಷೇತರ ಅಭ್ಯರ್ಥಿಗಳು ಕಾಂಗ್ರೆಸ್ 'ಮತ ಬುಟ್ಟಿ'ಗೆ ಕೈ ಹಾಕಿದ್ದು ಕೂಡ ಕಾಂಗ್ರೆಸ್ ಹಿನ್ನಡೆಗೆ ಕಾರಣವಾಯಿತು ಎಂದು ಆ ಪಕ್ಷದ ಕೆಲ ನಾಯಕರು ಅಭಿಪ್ರಾಯಪಡುತ್ತಾರೆ. 

ಸಂಘಟನೆಗೆ ಸಿಕ್ಕ ಅಭೂತಪೂರ್ವ ಗೆಲುವು : ಬಿಜೆಪಿ ಮುಖಂಡ ಎಸ್.ದತ್ತಾತ್ರಿ

'ಶಿವಮೊಗ್ಗ ನಗರದಲ್ಲಿ ಬಿಜೆಪಿ ಪಕ್ಷದ ಸಂಘಟನೆ ಅತ್ಯಂತ ಬಲಿಷ್ಠವಾಗಿದ್ದು, ಪರಿಣಾಮಕಾರಿಯಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿಯೇ ಇದು ಸಾಬೀತಾಗಿತ್ತು. ನಿರೀಕ್ಷಿಸಿದಂತೆ ಪಾಲಿಕೆ ಚುನಾವಣೆಯಲ್ಲಿಯೂ ಪಕ್ಷದ ಸಂಘಟನಾ ಶಕ್ತಿಗೆ ಜಯ ಸಿಕ್ಕಿದೆ. ಇದರಿಂದ ಪಕ್ಷಕ್ಕೆ ಅಭೂತಪೂರ್ವ ಗೆಲುವು ಲಭಿಸಿದೆ. ನಗರದ ನಾಗರೀಕರು ಪಕ್ಷದ ಮೇಲಿಟ್ಟಿರುವ ನಂಬಿಕೆ ಉಳಿಸಿಕೊಳ್ಳುತ್ತೆವೆ. ಪಾಲಿಕೆಯಲ್ಲಿ ಉತ್ತಮ ಆಡಳಿತ ನೀಡುತ್ತೇವೆ. ನಗರದ ಸರ್ವಾಂಗೀಣ ಅಭಿವೃದ್ದಿಗೆ ಬಿಜೆಪಿ ಪಕ್ಷ ಶ್ರಮಿಸಲಿದೆ' ಎಂದು ಬಿಜೆಪಿ ಪಕ್ಷದ ಹಿರಿಯ ಮುಖಂಡ ಎಸ್.ದತ್ತಾತ್ರಿರವರು ಹೇಳಿದ್ದಾರೆ. 

ಬಿಜೆಪಿ ಹಣಕ್ಕೆ ಸಿಕ್ಕ ಗೆಲುವು : ಕೆಪಿಸಿಸಿ ಉಪಾಧ್ಯಕ್ಷ ಮಂಜುನಾಥ ಭಂಡಾರಿ 
'ಬಿಜೆಪಿ ಪಕ್ಷವು ಚುನಾವಣೆಯ ವೇಳೆ ಹಣದ ಹೊಳೆ ಹರಿಸಿತು. ಇದರಿಂದ ಪಕ್ಷಕ್ಕೆ ಹಲವು ವಾರ್ಡ್‍ಗಳಲ್ಲಿ ಹಿನ್ನಡೆಯಾಗುವಂತಾಯಿತು. ಕೆಲ ವಾರ್ಡ್‍ಗಳಲ್ಲಿ ಪಕ್ಷದ ಅಭ್ಯರ್ಥಿಗಳು ಕಡಿಮೆ ಅಂತರದಲ್ಲಿ ಸೋಲನುಭವಿಸಿದ್ದಾರೆ. ಹಲವೆಡೆ ಬಂಡಾಯ ಅಭ್ಯರ್ಥಿಗಳು ಪಕ್ಷದ ಅಭ್ಯರ್ಥಿಗಳ ಸೋಲಿಗೆ ಕಾರಣಕರ್ತರಾಗಿದ್ದಾರೆ. ಸೋಲಿನಿಂದ ಭ್ರಮನಿರಸನಗೊಳ್ಳುವ ಪ್ರಶ್ನೆಯೇ ಇಲ್ಲ. ಲೋಕಸಭೆ ಚುನಾವಣೆಯ ಮೇಲೆ ಈ ಫಲಿತಾಂಶ ಯಾವುದೇ ಪರಿಣಾಮ ಬೀರುವುದಿಲ್ಲ' ಎಂದು ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಮಂಜುನಾಥ ಭಂಡಾರಿಯವರು ತಿಳಿಸಿದ್ದಾರೆ. 

ಸಂಘಟನೆಯ ವೈಫಲ್ಯವೇ ಸೋಲಿಗೆ ಕಾರಣ : ಜೆಡಿಎಸ್ ಮುಖಂಡ ಎಂ.ಶ್ರೀಕಾಂತ್
'ಕಳೆದ ಸರಿಸುಮಾರು ಎರಡು ವರ್ಷಗಳ ಹಿಂದಿನಿಂದ ಪಕ್ಷದ ಸಂಘಟನೆಯಲ್ಲಿನ ವೈಫಲ್ಯ, ಪಕ್ಷದ ಈ ಹಿಂದಿನ ಜಿಲ್ಲಾಧ್ಯಕ್ಷರ ಅದಕ್ಷತೆಯಿಂದ ಪಕ್ಷಕ್ಕೆ ಹಿನ್ನಡೆಯಾಗುವಂತಾಗಿದೆ. ಆದಾಗ್ಯೂ ಜೆಡಿಎಸ್ ಪಕ್ಷದ ಶೇಕಡವಾರು ಮತಗಳಿಕೆ ಹೆಚ್ಚಿದೆ. ನಾಲ್ಕೈದು ವಾರ್ಡ್‍ಗಳಲ್ಲಿ ಕೆಲವೇ ಮತಗಳ ಅಂತರದಲ್ಲಿ ಪಕ್ಷದ ಅಭ್ಯರ್ಥಿಗಳು ಪರಾಭವಗೊಂಡಿದ್ದಾರೆ. ಈ ಸೋಲಿನಿಂದ ಪಕ್ಷ ಎದೆಗುಂದುವುದಿಲ್ಲ. ಪ್ರಸ್ತುತ ಪಕ್ಷದ ನೂತನ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಅತ್ಯಂತ ಪರಿಣಾಮಕಾರಿಯಾಗಿ ಪಕ್ಷದ ಸಂಘಟನೆ ಮಾಡಲಾಗುವುದು' ಎಂದು ಜೆಡಿಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News