ಶಿವಮೊಗ್ಗ: ಸಮ ಮತ ಪಡೆದ ಅಭ್ಯರ್ಥಿಗಳು; ಚೀಟಿ ಎತ್ತುವ ಮೂಲಕ ಜೆಡಿಎಸ್‍ ಅಭ್ಯರ್ಥಿಗೆ ಒಲಿದ ಅದೃಷ್ಟ

Update: 2018-09-03 16:37 GMT

ಶಿವಮೊಗ್ಗ, ಸೆ. 3: ಕೆಲವೊಮ್ಮೆ ಒಂದೊಂದು ಮತವೂ ಎಷ್ಟು ಮಹತ್ವದ್ದಾಗಿರುತ್ತದೆ ಎಂಬುವುದಕ್ಕೆ ಹರಿಗೆ ವಾರ್ಡ್‍ನ ಚುನಾವಣಾ ಫಲಿತಾಂಶ ಸಾಕ್ಷಿಯಾಗಿದೆ. ಈ ವಾರ್ಡ್‍ನ ಫಲಿತಾಂಶ ಎಲ್ಲರನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿತ್ತು. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಸಮ ಮತ ಪಡೆಯುವ ಮೂಲಕ ಸಾಕಷ್ಟು ರೋಚಕತೆ ಸೃಷ್ಟಿಸಿತ್ತು. 

ಅಂತಿಮವಾಗಿ ನಿಯಮಾನುಸಾರ ಚೀಟಿ ಎತ್ತುವ ಮೂಲಕ ಚುನಾವಣಾಧಿಕಾರಿಗಳು ಅಭ್ಯರ್ಥಿಯ ಆಯ್ಕೆ ನಡೆಸಿದರು. ಅದೃಷ್ಟ ಜೆಡಿಎಸ್ ಪರವಾಗಿತ್ತು. ಕಾಂಗ್ರೆಸ್‍ಗೆ ಕೈ ಬಂದ ತುತ್ತು ಬಾಯಿಗೆ ಬರದಂತಾಗಿತ್ತು. 

ಸಮಬಲ: ಈ ವಾರ್ಡ್‍ನಲ್ಲಿ ಕಾಂಗ್ರೆಸ್‍ನಿಂದ ಹಾಲಿ ಕಾರ್ಪೋರೇಟರ್ ರಾಜಶೇಖರ್, ಜೆಡಿಎಸ್‍ನಿಂದ ಪತ್ರಕರ್ತ ಆರ್.ಎಸ್.ಸತ್ಯನಾರಾಯಣರಾಜ್ ಹಾಗೂ ಬಿಜೆಪಿಯಿಂದ ಜಿ. ಸುದರ್ಶನ್ ಕಣದಲ್ಲಿದ್ದರು. ಇತರೆ ಪಕ್ಷ ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳ್ಯಾರು ಕಣದಲ್ಲಿರಲಿಲ್ಲ. ಮೂರು ಪಕ್ಷಗಳ ನಡುವೆ ಜಿದ್ದಾಜಿದ್ದಿನ ಅಖಾಡ ಏರ್ಪಟ್ಟಿತ್ತು. 

ಈ ವಾರ್ಡ್‍ನಲ್ಲಿ ಒಟ್ಟಾರೆ ಆರು ಮತಗಟ್ಟೆಗಳಿದ್ದವು. 4557 ಜನರು ಮತದಾನ ಮಾಡಿದ್ದರು. ಇದರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್.ರಾಜಶೇಖರ್‍ರವರಿಗೆ 1708, ಜೆಡಿಎಸ್ ಅಭ್ಯರ್ಥಿ ಆರ್.ಎಸ್.ಸತ್ಯನಾರಾಯಣರವರಿಗೆ 1708 ಹಾಗೂ ಬಿಜೆಪಿ ಅಭ್ಯರ್ಥಿ ಜಿ. ಸುದರ್ಶನ್‍ರವರಿಗೆ 1119 ಮತಗಳು ಹಾಗೂ ಚುನಾವಣಾ ಆಯೋಗದ ನೋಟಾ ಗುರುತಿಗೆ 22 ಮತಗಳು ಸಂದಾಯವಾಗಿದ್ದವು. 

ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳು ತಲಾ 1708 ಮತ ಪಡೆದಿದ್ದರಿಂದ, ಮತ್ತೊಮ್ಮೆ ಮರು ಮತ ಎಣಿಕೆ ನಡೆಸಲಾಯಿತು. ಈ ವೇಳೆ ಕೂಡ ಈ ಇಬ್ಬರು ಅಭ್ಯರ್ಥಿಗಳ ಮತಗಳಿಕೆಯಲ್ಲಿ ಯಾವುದೇ ವ್ಯತ್ಯಾಸ ಕಂಡುಬರಲಿಲ್ಲ. ಈ ಕಾರಣದಿಂದ ನಿಯಮಾನುಸಾರ ಚುನಾವಣಾಧಿಕಾರಿಗಳು ಚೀಟಿ ಎತ್ತುವ ಮೂಲಕ ಆಯ್ಕೆ ನಡೆಸಲು ಮುಂದಾದರು. ಚೀಟಿ ಆಯ್ಕೆಯಲ್ಲಿ ಜೆಡಿಎಸ್‍ನ ಆರ್.ಎಸ್.ಸತ್ಯನಾರಾಯಣರಾಜ್‍ರವರ ಹೆಸರು ಬಂದಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News