ಹನೂರು: ಫಲಾನುಭವಿಗಳಿಗೆ ಕಾರ್ಯಾದೇಶ ಪತ್ರ ವಿತರಣೆ, ಶಾಸಕರಿಗೆ ಸನ್ಮಾನ

Update: 2018-09-03 17:37 GMT

ಹನೂರು,ಸೆ.3: ವಸತಿ ರಹಿತ ಫಲಾನುಭವಿಗಳು ವಿವಿಧ ವಸತಿ ಯೋಜನೆಯಡಿ ಮನೆ ಪಡೆದು ಸಕಾಲದಲ್ಲಿ ಮನೆ ನಿರ್ಮಿಸಿಕೊಳ್ಳುವ ಜೊತೆಗೆ 4 ವಿಭಾಗಗಳ ಪ್ರತಿ ಹಂತದ ಭಾವ ಚಿತ್ರವನ್ನು ಜಿಪಿಎಸ್ ತಂತ್ರಜ್ಞಾನ ಅಳವಡಿಸಿದಲ್ಲಿ ಅವರ ಖಾತೆಗೆ ಹಣ ನೇರವಾಗಿ ವರ್ಗಾವಣೆಯಾಗುತ್ತದೆ ಎಂದು ಶಾಸಕ ಆರ್.ನರೇಂದ್ರ ತಿಳಿಸಿದರು.

ಪಟ್ಟಣದ ಲೊಕೋಪಯೋಗಿ ಇಲಾಖೆ ವಸತಿ ಗೃಹದ ಆವರಣದಲ್ಲಿ ಪೊನ್ನಾಚಿ ಗ್ರಾಮ ಪಂಚಾಯತ್ ವ್ಯಾಪ್ತಿಯ 34 ಫಲಾನುಭವಿಗಳಿಗೆ ಕಾರ್ಯಾದೇಶ ಪತ್ರ ವಿತರಿಸಿ ಮಾತನಾಡಿದರು. ಸರ್ಕಾರ ಮನೆ ಇಲ್ಲದ ಬಡವರಿಗೆ ಬಸವ, ವಾಜಪೇಯಿ ವಸತಿ ಯೋಜನೆಯಡಿ ಮನೆಗಳನ್ನು ನೀಡಲಾಗುತ್ತಿದ್ದು, ಕಾರ್ಯಾದೇಶ ಪತ್ರ ಪಡೆದ ಪ್ರತಿಯೊಬ್ಬ ಫಲಾನುಭವಿಯು ನಿಗದಿತ ಸಮಯದಲ್ಲಿ ನಿರ್ಮಾಣ ಮಾಡಿ ಪ್ರತಿ ಹಂತದಲ್ಲೂ ಜಿಪಿಎಸ್ ಅಳವಡಿಕೆ ಮಾಡಬೇಕು. ಫಲಾನುಭವಿಯು ಎಷ್ಟು ವೇಗವಾಗಿ ಕಾಮಗಾರಿ ಮುಗಿಸುತ್ತಾರೋ ಅಷ್ಟು ಬೇಗ ಸಹಾಯಧನ ಫಲಾನುಭವಿಯ ಕೈ ಸೇರಲಿದೆ. ಈ ಹಿಂದೆ ಮನೆ ನಿರ್ಮಾಣ ಮಾಡಿದ ಬಳಿಕ ಚೆಕ್ ಪಡೆಯಲು ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಗ್ರಾ.ಪಂ ಅಧ್ಯಕ್ಷರ ಸಹಿ ಅವಶ್ಯಕ ಇತ್ತು. ಆದರೆ ಆನಿಯಮಗಳನ್ನೆಲ್ಲಾ ರದ್ದುಗೊಳಿಸಿ ಒಮ್ಮೆ ಕಾರ್ಯಾದೇಶ ಪಡೆದ ಬಳಿಕ ಯಾರೊಬ್ಬರ ಅನುಮತಿಯೂ ಬೇಕಾಗಿಲ್ಲ ಎಂದು ತಿಳಿಸಿದರು.

ರಸ್ತೆ ನಿರ್ಮಿಸಲು ಆಗ್ರಹ: ಇದೇ ವೇಳೆ ಪೊನ್ನಾಚಿ ಗ್ರಾಮಸ್ಥರು ಮರೂರು-ದೋಣಮಡುವಿನದೊಡ್ಡಿ ರಸ್ತೆಯು ತೀರಾ ಹದಗೆಟ್ಟಿದ್ದು ರಸ್ತೆ ನಿರ್ಮಾಣ ಮಾಡಿಕೊಡುವಂತೆ ಆಗ್ರಹಿಸಿದರು. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಶಾಸಕ ನರೇಂದ್ರ ರಸ್ತೆ ನಿರ್ಮಾಣಕ್ಕೆ ಅಗತ್ಯ ಕ್ರಮವಹಿಸುವ ಭರವಸೆ ನೀಡಿದರು. ಇದೇ ವೇಳೆ ಸತತ 3ನೇ ಬಾರಿಗೆ ಜಯಗಳಿಸಿದ ಶಾಸಕ ನರೇಂದ್ರರವರನ್ನು ಪೊನ್ನಾಚಿ ಗ್ರಾಮ ಪಂಚಾಯತ್ ವತಿಯಿಂದ ಮೈಸೂರು ಪೇಟ ತೊಡಿಸಿ, ಹಾರ ತುರಾಯಿ ಹಾಕಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಮಾದೇಗೌಡ, ಕೆಪಿಟಿಎಸ್‍ಎಲ್ ನಿರ್ದೇಶಕ ಬಸಪ್ಪನದೊಡ್ಡಿ ಪ್ರಸಾದ್, ರಾಮಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್, ಗ್ರಾ.ಪಂ ಉಪಾಧ್ಯಕ್ಷೆ ಮಹಾದೇವಮ್ಮ, ಸದಸ್ಯ ರಾಮಚಂದ್ರು, ಮುಖಂಡರಾದ ಮಾದಪ್ಪ, ಅಂಕಪ್ಪ, ದಾಸಪ್ಪ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಂಜುಂಡಸ್ವಾಮಿ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News