ಮಂಡ್ಯದಲ್ಲಿ ಜೆಡಿಎಸ್ ಭರ್ಜರಿ ಗೆಲುವು: ಬೆಳ್ಳೂರು ಪಟ್ಟಣ ಪಂ. ಕಾಂಗ್ರೆಸ್‍ ತೆಕ್ಕೆಗೆ, ಬಿಜೆಪಿಗೆ ಮುಖಭಂಗ

Update: 2018-09-03 17:45 GMT

ಮಂಡ್ಯ, ಸೆ.3: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ ಏಳು ಸ್ಥಾನಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದ್ದ ಜೆಡಿಎಸ್, ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಭರ್ಜರಿ ಗೆಲುವು ಪಡೆದಿದೆ.

ಒಂದು ನಗರಸಭೆ ಸೇರಿದಂತೆ ಐದು ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ನಾಲ್ಕರಲ್ಲಿ ಗೆಲುವು ಸಾಧಿಸಿದ್ದು, ಒಂದರಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಮಂಡ್ಯ ನಗರಸಭೆ, ಮದ್ದೂರು ಪುರಸಭೆ, ಪಾಂಡವಪುರ, ನಾಗಮಂಗಲ ಪುರಸಭೆ ಚುಕ್ಕಾಣಿ ಜೆಡಿಎಸ್ ಪಾಲಾಗಿದ್ದರೆ, ನಾಗಮಂಗಲ ತಾಲೂಕು ಬೆಳ್ಳೂರು ಪಟ್ಟಣ ಪಂಚಾಯತ್ ಯಲ್ಲಿ ಕಾಂಗ್ರೆಸ್ ಗೆದ್ದಿದೆ.

ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಮಲ ಅರಳಿಸುವ ವಿಶ್ವಾಸದಿಂದ ಅಬ್ಬರದ ಪ್ರಚಾರ ನಡೆಸಿದ್ದ ಬಿಜೆಪಿ ಮುಖಭಂಗ ಅನುಭವಿಸಿದ್ದು, ಬೆರಳೆಣಿಕೆಯ ವಾರ್ಡ್‍ಗಳಲ್ಲಿಯಷ್ಟೆ ಖಾತೆ ತೆರೆದಿದೆ.

ಮಂಡ್ಯ ನಗರಸಭೆಯ 35 ಸ್ಥಾನಗಳ ಪೈಕಿ ಜೆಡಿಎಸ್ 18ರಲ್ಲಿ ಗೆಲುವು ಸಾಧಿಸಿ ಆಡಳಿತ ಚುಕ್ಕಾಣಿ ಹಿಡಿದರೆ, 10 ಸ್ಥಾನ ಪಡೆದಿರುವ ಕಾಂಗ್ರೆಸ್ ವಿಪಕ್ಷವಾಗಿ ಹಿಂಬಡ್ತಿ ಪಡೆದಿದೆ. ಜೆಡಿಎಸ್ ಟಿಕೆಟ್ ವಂಚಿತರಾಗಿ ಬಿಜೆಪಿ ಟಿಕೆಟ್ ಪಡೆದು ಸ್ಪರ್ಧಿಸಿದ್ದ ನಗರಸಭೆ ಮಾಜಿ ಅಧ್ಯಕ್ಷ ಎಂ.ಪಿ.ಅರುಣ್‍ಕುಮಾರ್ ಜತೆಗೆ ಮತ್ತೊಂದು ವಾರ್ಡ್‍ನಲ್ಲಿ ಬಿಜೆಪಿ ಗೆದ್ದಿದ್ದರೆ, 5 ಕ್ಷೇತ್ರಗಳು ಪಕ್ಷೇತರರ ಪಾಲಾಗಿವೆ.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಪ್ರತಿನಿಧಿಸುವ ಪಾಂಡವಪುರ ಪುರಸಭೆಯಲ್ಲಿ ಜೆಡಿಎಸ್ 18 ವಾರ್ಡ್‍ಗಳಲ್ಲಿ, ಕಾಂಗ್ರೆಸ್ ಕೇವಲ 3ರಲ್ಲಿ ಗೆಲುವು ಪಡೆದಿದೆ. ಒಂದರಲ್ಲಿ ಬಿಜೆಪಿ ಮತ್ತೊಂದರಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವಿನ ನಗೆಬೀರಿದ್ದಾರೆ.

ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಪ್ರತಿನಿಧಿಸುವ ಮದ್ದೂರು ಪುರಸಭೆಯಲ್ಲಿ ಜೆಡಿಎಸ್ 12, ಕಾಂಗ್ರೆಸ್ 4 ವಾರ್ಡ್‍ಗಳಲ್ಲಿ ಜಯಗಳಿಸಿದ್ದರೆ, 6 ಮಂದಿ ಪಕ್ಷೇತರರು ಮತ್ತು ಓರ್ವ ಬಿಜೆಪಿ ಅಭ್ಯರ್ಥಿ ಗೆಲುವ ಸಾಧಿಸಿದ್ದಾರೆ.

ನಾಗಮಂಗಲ ಪುರಸಭೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರಾಹಣಾಹಣಿ ನಡೆದಿದ್ದು, ಒಟ್ಟು 23 ಸ್ಥಾನಗಳ ಪೈಕಿ ಜೆಡಿಎಸ್ 12ರಲ್ಲಿ ಹಾಗೂ ಕಾಂಗ್ರೆಸ್ 11ರಲ್ಲಿ ಪಾರಮ್ಯ ಮೆರೆದಿವೆ.

ನಾಗಮಂಗಲ ತಾಲೂಕು ಬೆಳ್ಳೂರು ಪಟ್ಟಣ ಪಂಚಾಯತ್ ನ 7 ವಾರ್ಡ್‍ಗಳಲ್ಲಿ ಕಾಂಗ್ರೆಸ್ ವಿಜಯ ಪತಾಕೆ ಹಾರಿಸಿದ್ದರೆ, ಜೆಡಿಎಸ್ 4ರಲ್ಲಿ ಹಾಗೂ ಪಕ್ಷೇತರರು ಎರಡು ವಾರ್ಡ್‍ಗಳಲ್ಲಿ ಜಯಗಳಿಸಿದ್ದಾರೆ.

ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ಪಕ್ಷಗಳ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿವಿತರಿಸಿ ವಿಜಯೋತ್ಸವ ಆಚರಿಸಿದರು. ಗೆದ್ದ ಅಭ್ಯರ್ಥಿಗಳನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News