ಶೃಂಗೇರಿ: ಕೇಂದ್ರದ ಜನವಿರೋಧಿ ಆಡಳಿತ ಖಂಡಿಸಿ ಕಾಂಗ್ರೆಸ್ ಧರಣಿ

Update: 2018-09-03 17:54 GMT

ಶೃಂಗೇರಿ, ಸೆ.3: ಪ್ರಧಾನಿ ನರೇಂದ್ರ ಮೋದಿ ಅವರ ಸರ್ವಾಧಿಕಾರ ಧೋರಣೆಯಿಂದ ದೇಶ ಆಧೋಗತಿಯತ್ತ ಸಾಗುತ್ತಿದೆ. ಕೇಂದ್ರಸರಕಾರ ಜನವಿರೋಧಿ ಆಡಳಿತ ನೀಡುತ್ತಿದ್ದು, ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲಗಳ ಬೆಲೆಯನ್ನು ಏರಿಸಿ ಬಡವರನ್ನು ಸಂಕಷ್ಟಕ್ಕೆ ದೂಡಿದೆ. ರೈತ ವಿರೋಧಿಯಾಗಿರುವ ಕೇಂದ್ರ ಸರಕಾರಕ್ಕೆ ಜನತೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆಂದು ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ಟೀಕಿಸಿದರು.

ಸೋಮವಾರ ತಾ. ಬ್ಲಾಕ್ ಕಾಂಗ್ರೆಸ್ ಪಟ್ಟಣದ ಕುರುಬಕೇರಿ ಸರ್ಕಲ್‍ನಲ್ಲಿ ಆಯೋಜಿಸಿದ್ದ ಕೇಂದ್ರ ಸರಕಾರದ ವಿರುದ್ಧದ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಅತಿವೃಷ್ಟಿ ಸಂಭವಿಸಿದರೂ ಸಂಸದೆ ಶೋಭಾ ಕರಂದ್ಲಾಜೆ ಒಮ್ಮೆಯೂ ಭೇಟಿ ನೀಡಿ ಸಂತ್ರಸ್ತರನ್ನು ಭೇಟಿ ಮಾಡಿ ಸಾಂತ್ವನ ಹೇಳಿಲ್ಲ. ಅತೀವೃಷ್ಟಿಯಿಂದ ತೊಂದರೆಗೆ ಸಿಲುಕಿರುವ ರೈತರ ಪರವಾಗಿ ಮಾತನಾಡಿಲ್ಲ. ಅತೀವೃಷ್ಟಿಗೆ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲೂ ಅವರು ಸಕಾರಾತ್ಮಕವಾಗಿ ಕಾರ್ಯನಿರ್ವಹಿಸಿಲ್ಲ ಎಂದು ಆರೋಪಿಸಿದರು.

ಕೇಂದ್ರ ಸರಕಾರದಿಂದ ಪ್ರಕೃತಿವಿಕೋಪ ಪರಿಹಾರಧನ ತರಲು ಸಂಸದೆಗೆ ಆಸಕ್ತಿಯಿಲ್ಲ. ಆದರೆ ಜಿಲ್ಲಾ ಉಸ್ತುವಾರಿ ಸಚಿವರಾದ ಜಾರ್ಜ್ ಅವರು ಮಲೆನಾಡಿಗೆ ಭೇಟಿ ನೀಡಿ ರೈತರ ನೋವನ್ನು ಆಲಿಸಿದ್ದಾರೆ. ಸಂಸದೆ ಚುನಾವಣಾ ಸಮಯದಲ್ಲಿ ಮಾತ್ರ ಕ್ಷೇತ್ರಕ್ಕೆ ಬರುತ್ತಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕಾಲದಲ್ಲಿ ಪೆಟ್ರೋಲ್ ಬೆಲೆ ಏರಿದಾಗ ಪ್ರತಿಭಟಿಸಿದ್ದ ಬಿಜೆಪಿ ನಾಯಕರು ಪ್ರಸಕ್ತ ಬೆಲೆ ಏರಿಕೆಯಿಂದ ಜನತೆ ಕಂಗಾಲಾಗಿದ್ದರೂ ಮೌನಕ್ಕೆ ಶರಣಾಗಿದ್ದಾರೆ ಎಂದು ಆರೋಪಿಸದರು.

ತಾ.ಪಂ ಸದಸ್ಯ ಕೆ.ಆರ್.ವೆಂಕಟೇಶ್ ಮಾತನಾಡಿ, ಸಂಸದೆ ಶೋಭಾ ಕರಂದ್ಲಾಜೆ ಕ್ಷೇತ್ರದಿಂದ ನಾಪತ್ತೆಯಾಗಿದ್ದಾರೆ. ಒಂದುವೇಳೆ ಅವರು ಕ್ಷೇತ್ರಕ್ಕೆ ಬಂದಲ್ಲಿ ಕಪ್ಪುಬಾವುಟ ಪ್ರದರ್ಶನ ಮಾಡಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. 

ಧರಣಿಯಲ್ಲಿ ತಾ.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾರಣಕೂಡಿಗೆ ನಟರಾಜ್, ಎ.ಪಿ.ಎಂ.ಸಿ ಅಧ್ಯಕ್ಷ ರಮೇಶ್ ಭಟ್, ಜಿಲ್ಲಾ ಡಿಸಿಸಿಬ್ಯಾಂಕ್ ಉಪಾಧ್ಯಕ್ಷ ದಿನೇಶ್ ಹೆಗಡೆ, ತಾ.ಪಂ ಉಪಾಧ್ಯಕ್ಷೆ ಚಂದ್ರಮತಿ ತಿಮ್ಮಪ್ಪ, ಸದಸ್ಯೆ ಕಲ್ಪನಾ ಸುಂದರೇಶ್, ತಾ.ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಕೀಲಾ ಗುಂಡಪ್ಪ, ವಿದ್ಯಾರಣ್ಯಪುರ ಗ್ರಾ.ಪಂ ಸದಸ್ಯೆ ಸೌಭಾಗ್ಯ ಗೋಪಾಲನ್ ಹಾಗೂ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News