2 ಕೋಟಿ ರೂ. ವೆಚ್ಚದಲ್ಲಿ ಕೊಡಗಿನ ಗ್ರಾಮವೊಂದರ ಅಭಿವೃದ್ಧಿ: ಆರ್ಯವೈಶ್ಯ ಸಂಘ

Update: 2018-09-03 17:56 GMT

ಚಿಕ್ಕಮಗಳೂರು, ಸೆ.3; ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಹಾನಿಗೊಳಗಾಗಿರುವ ಕೊಡಗು ಜಿಲ್ಲೆಯ ಗ್ರಾಮವೊಂದನ್ನು ಸರಕಾರದಿಂದ ದತ್ತು ಪಡೆದು ಅಲ್ಲಿನ ನಿವಾಸಿಗಳ ಸರ್ವಾಂಗೀಣ ಅಭಿವೃದ್ದಿಗೆ ಆವಶ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಅದನ್ನು ಆದರ್ಶ ಗ್ರಾಮವನ್ನಾಗಿ ರೂಪಿಸಲು ಕರ್ನಾಟಕ ಆರ್ಯವೈಶ್ಯ ಮಹಾಸಭಾ ತೀರ್ಮಾನಿಸಿದೆ ಎಂದು ಮಹಾಸಭಾದ ಜಿಲ್ಲಾ ನಿರ್ದೇಶಕ ಸತೀಶ್ ತಿಳಿಸಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರ ಅಭಿವೃದ್ದಿಗಾಗಿ ವಹಿಸಿಕೊಡುವ ಗ್ರಾಮಕ್ಕೆ ಪರಿಣಿತ ಇಂಜಿನಿಯರ್ ಗಳಿಂದ ತುರ್ತು ಆವಶ್ಯಕತೆಗಳ ನೀಲ ನಕ್ಷೆ ಸಿದ್ಧಪಡಿಸಿ ಕಾರ್ಯಯೋಜನೆ ರೂಪಿಸಲಾಗುವುದು. ಮುಂದಿನ ಆರು ತಿಂಗಳೊಳಗೆ ಗ್ರಾಮ ನಿವಾಸಿಗಳ ನಿತ್ಯ ಜೀವನ ನಿರ್ವಹಣೆಗೆ ಅಗತ್ಯವಿರುವ ಪೂರ್ಣ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು. 

ಪ್ರಮುಖವಾಗಿ ಸಂತ್ರಸ್ಥರ ಮನೆಗಳ ದುರಸ್ತಿ, ಮನೆಗಳ ನಿರ್ಮಾಣಕ್ಕೆ ಸಹಕಾರ ನೀಡುವುದು, ವಿದ್ಯುತ್ ಇಲಾಖೆಯ ನೆರವಿನೊಂದಿಗೆ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದು, ಕೆರೆ, ನದಿ ಅಥವಾ ಆವಶ್ಯಕತೆ ಕಂಡು ಬಂದರೆ ಕೊಳವೆ ಬಾವಿಗಳನ್ನು ಕೊರೆದು ಶುದ್ಧ ಕುಡಿಯುವ ನೀರಿನ ಶಾಶ್ವತ ವ್ಯವಸ್ಥೆ ಮಾಡಲಾಗುವುದು ಎಂದ ಅವರು, ದತ್ತು ಪಡೆದ ಗ್ರಾಮ ನಿವಾಸಿಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಕೊಠಡಿಗಳ ದುರಸ್ತಿ, ಪೀಠೋಪಕರಣ ವ್ಯವಸ್ಥೆ, ಸಮವಸ್ತ್ರ, ಪಠ್ಯಪುಸ್ತಕ ವಿತರಿಸಲಾಗುವುದು. ಹಿರಿಯ ವಿದ್ಯಾರ್ಥಿಗಳಿಗೆ ಸೈಕಲ್ ಸೌಲಭ್ಯ ಹಾಗೂ ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ ಒದಗಿಸಲಾಗುವುದು ಎಂದು ತಿಳಿಸಿದರು.

ಶೌಚಾಲಯಗಳಿಗೆ ನೀರಿನ ವ್ಯವಸ್ಥೆ, ಅಡುಗೆಗೆ ಅಗತ್ಯವಿರುವ ಪಾತ್ರೆ ಸಾಮಾನುಗಳು, ಮನೆಗಳಿಗೆ ಕನಿಷ್ಠ ಪೀಠೋಪಕರಣ, ಗ್ರಾಮಸ್ಥರಿಗೆ ವಾರಕ್ಕೊಂದು ಬಾರಿ ಆರೋಗ್ಯ ತಪಾಸಣೆ, ಉಚಿತವಾಗಿ ಔಷಧಿ ವಿತರಣೆ, ಜಾನುವಾರುಗಳಿಗೂ ಆರೋಗ್ಯ ತಪಾಸಣೆ, ಮೇವಿನ ವ್ಯವಸ್ಥೆ, ವ್ಯವಸಾಯಕ್ಕೆ ಕನಿಷ್ಠ ಯಂತ್ರೋಪಕರಣ, ಪರಿಸರ ಸಂರಕ್ಷಣೆ ಹಾಗೂ ಸಸ್ಯ ಸಂಕುಲ ಅಭಿವೃದ್ದಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಂತ್ರಸ್ತ ಗ್ರಾಮಗಳ ಪುನಶ್ಚೇತನಕ್ಕಾಗಿ ಅಂದಾಜು 2 ಕೋಟಿ ರೂ. ವೆಚ್ಚವಾಗಲಿದೆ. ಆರ್ಯವೈಶ್ಯ ಪ್ರಮುಖರು, ಸಂಘ ಸಂಸ್ಥೆಗಳು ಆರ್ಥಿಕ ಸಂಗ್ರಹಕ್ಕೆ ಕೈ ಜೋಡಿಸಲಿವೆ, ಸರಕಾರದಿಂದ ಯಾವುದೇ ಆರ್ಥಿಕ ಸಹಕಾರ ನಿರೀಕ್ಷಿಸದೇ ಆರು ತಿಂಗಳೊಳಗೆ ಯೋಜನೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ಆರ್ಯವೈಶ್ಯ ಮಹಾಸಭಾದ ಜಿಲ್ಲಾ ಉಪಾಧ್ಯಕ್ಷ ದಿನೇಶ್ ಗುಪ್ತಾ, ಜಿಲ್ಲಾಧ್ಯಕ್ಷ ವೆಂಕಟೇಶ್, ಮೈಸೂರು ವಿಭಾಗೀಯ ಕಾರ್ಯದರ್ಶಿ ಗೋಪಾಲಕೃಷ್ಣ, ಜಿಲ್ಲಾ ಕಾರ್ಯದರ್ಶಿ ಸುರೇಂದ್ರನಾಥ್, ಎ.ವಿ.ಸುರೇಶ್ ಬಾಬು, ಕಡೂರು ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಉಪೇಂದ್ರ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News