ಮಡಿಕೇರಿ: ಪರಿಹಾರ ಕೇಂದ್ರಕ್ಕೆ ಸಚಿವೆ ಜಯಮಾಲ ಭೇಟಿ; ಸಂತ್ರಸ್ತ ಮಕ್ಕಳ ಯೋಗ ಕ್ಷೇಮ ವಿಚಾರಣೆ

Update: 2018-09-03 18:19 GMT

ಮಡಿಕೇರಿ, ಸೆ.3 :ಅತಿವೃಷ್ಟಿಯಿಂದ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಶೀಘ್ರದಲ್ಲಿಯೇ ವೈಜ್ಞಾನಿಕ ಸಮೀಕ್ಷೆ ನಡೆಸಿ ಸರ್ಕಾರ ಮನೆ ನಿರ್ಮಿಸಿಕೊಡಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಡಾ.ಜಯಮಾಲ ಅವರು ತಿಳಿಸಿದರು.    

ನಗರದ ಮೈತ್ರಿ ಭವನದ ಪರಿಹಾರ ಕೇಂದ್ರಕ್ಕೆ ಸೋಮವಾರ ಭೇಟಿ ನೀಡಿದ ಸಚಿವರು ನಿರಾಶ್ರಿತರೊಂದಿಗೆ ಸಮಾಲೋಚನೆ ನಡೆಸಿ ಮಕ್ಕಳ ಯೋಗ ಕ್ಷೇಮ ವಿಚಾರಿಸಿ ಮಾತನಾಡಿದರು. ಅತಿವೃಷ್ಟಿಯಿಂದ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಮನೆ ನಿರ್ಮಿಸಿಕೊಡಲು ಬಹಳಷ್ಟು ಜನ ದಾನಿಗಳು ಮುಂದೆ ಬಂದಿದ್ದು, ಸರ್ಕಾರವು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು. 

ಪರಿಹಾರ ಕೇಂದ್ರದಲ್ಲಿರುವ ಮಕ್ಕಳಿಗೆ ಈಗಾಗಲೇ ಶಾಲೆಗಳನ್ನು ಆರಂಭಿಸಿದ್ದು, ಮಕ್ಕಳ ಶಿಕ್ಷಣಕ್ಕೆ ಯಾವುದೇ ತೊಂದರೆಯಾಗದಂತೆ ಕ್ರಮಕೈಗೊಂಡಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಅಗತ್ಯ ನೆರವು ನೀಡಿರುವುದಾಗಿ ತಿಳಿಸುತ್ತಾ ಪರಿಹಾರ ಕೇಂದ್ರದಲ್ಲಿರುವ ನಿರಾಶ್ರಿತರಿಗೆ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಂಡಿರುವುದಾಗಿ ಹೇಳಿದರು.

ಅತಿವೃಷ್ಟಿಯಿಂದ ನಿರಾಶ್ರಿತರಾಗಿರುವವರ ನೆರವಿಗೆ ಸರ್ಕಾರವು ಎಲ್ಲಾ ರೀತಿಯ ನೆರವು ನೀಡಲಿದ್ದು, ಯಾರು ಕೂಡ ಚಿಂತಿಸುವ ಅಗತ್ಯವಿಲ್ಲ ಎಂದು ಸಚಿವರು ಧೈರ್ಯ ತುಂಬಿದರು. ಬಳಿಕ ಅಂಗನವಾಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಸಚಿವರು ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಅಂಗನವಾಡಿ ಕೇಂದ್ರಗಳಿಗೆ ಕೆಲವೆಡೆ ಹಾನಿಯಾಗಿದ್ದು, ಹಾನಿಗೀಡಾದ ಅಂಗನವಾಡಿ ಕೇಂದ್ರಗಳ ಮರು ನಿರ್ಮಾಣಕ್ಕೆ ಈಗಾಗಲೇ ಇಲಾಖೆಯು ಕ್ರಮ ಕೈಗೊಂಡಿರುವುದಾಗಿ ಸಚಿವರು ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾ ಈ ಸಂದರ್ಭ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News