ಸೆ.5 ರಂದು ಅರಮನೆ ಪ್ರವೇಶಿಸಲಿರುವ ದಸರಾ ಗಜಪಡೆ: ಭವ್ಯ ಸ್ವಾಗತಕ್ಕೆ ಜಿಲ್ಲಾಡಳಿತ ಸಜ್ಜು

Update: 2018-09-04 17:05 GMT
ಸಾಂದರ್ಭಿಕ ಚಿತ್ರ

ಮೈಸೂರು,ಸೆ.4: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಗಜಪಡೆ ಸೆ.5 ರ ಬುಧವಾರ ಅರಮನೆ ಪ್ರವೇಶಿಸಲಿದ್ದು, ಗಜಪಡೆ ಸ್ವಾಗತಕ್ಕೆ ಜಿಲ್ಲಾಡಳಿತ ಮತ್ತು ಅರಮನೆ ಮಂಡಳಿ ಸಕಲ ಸಿದ್ಧತೆ ಮಾಡಿಕೊಂಡಿದೆ.

ಸಂಜೆ 4:30 ಗಂಟೆಗೆ ಅರಮನೆ ಜಯಮಾರ್ತಾಂಡ ದ್ವಾರದಲ್ಲಿ ನಾಡಹಬ್ಬ 2018ರ ದಸರಾ ಗಜ ಪಡೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಭವ್ಯ ಸ್ವಾಗತ ನೀಡಲಾಗುವುದು. ಸೆ.2 ರಂದು ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಲ್ಲಿ ಅರ್ಜುನ ನೇತೃತ್ವದ ಗಜಪಡೆಗೆ ಚಾಲನೆ ನೀಡಲಾಗಿತ್ತು. ಅಂದು ಸಂಜೆಯೇ ಮೈಸೂರು ತಲುಪಿದ ಆನೆಗಳು ಅಶೋಕಪುರಂನ ಅರಣ್ಯಭವನದಲ್ಲಿ ತಂಗಿದ್ದವು.

ಅಂಬಾರಿ ಹೊರುವ ಅರ್ಜುನ, ವಿಕ್ರಮ, ಧನಂಜಯ, ವರಲಕ್ಷ್ಮೀ, ಚೈತ್ರ, ಗೋಪಿ ಆನೆಗಳಿಗೆ ಅರಣ್ಯ ಭವನದಲ್ಲಿ ಸ್ನಾನ ಮಾಡಿಸಿ ವಿಶೇಷ ಆಹಾರ ನೀಡಲಾಯಿತು.

ಅರಮನೆಯಲ್ಲಿ ಸಿದ್ದತೆ: ಸಾಂಸ್ಕೃತಿಕ ರಾಯಬಾರಿಗಳಾದ ಗಜಪಡೆಗೆ ಭವ್ಯ ಸ್ವಾಗತ ನೀಡಲು ಅರಮನೆ ಮಂಡಳಿ ಸಿದ್ಧತೆ ಮಾಡಿಕೊಂಡಿದೆ. ಜಯಮಾರ್ತಾಂಡ ದ್ವಾರದ ಮೂಲಕ ಅರಮನೆ ಪ್ರವೇಶಿಸುವ ಆನೆಗಳಿಗೆ ಪುಷ್ಪಾಲಂಕಾರ ಮಾಡಿ ಆರತಿ ಎತ್ತಿ ಭರಮಾಡಿಕೊಳ್ಳುವುದು. ನಂತರ ಕಬ್ಬು, ಬೆಲ್ಲ, ಎಳ್ಳುಂಡೆ, ಬಾಳೆಹಣ್ಣುಗಳುಳ್ಳ ವಿಶೇಷ ಆಹಾರ ನೀಡಿ ಅವುಗಳನ್ನು ಸತ್ಕರಿಸಲಾಗುವುದು. ಗಜಪಡೆಗಳ ಸ್ವಾಗತಕ್ಕೆ ಅರಮನೆಯನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿದೆ. ಆನೆಗಳ ಸ್ನಾನಕ್ಕೆ ಅರಮನೆ ಒಳಗೆ ನೀರಿನ ಕೊಳ ಮಾಡಲಾಗಿದೆ. ಇನ್ನು ಮಾವುತರು ಮತ್ತು ಅವರ ಕುಟುಂಬದವರ ವಾಸ್ತವ್ಯಕ್ಕೆ ತಾತ್ಕಾಲಿಕ ಶೆಡ್‍ಗಳನ್ನು ನಿರ್ಮಾಣ ಮಾಡಲಾಗಿದೆ.

ಉನ್ನತ ಶಿಕ್ಷಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಜಿ.ಟಿ. ದೇವೇಗೌಡ ಗಜಪಡೆಗೆ ಪುಷ್ಪಾಲಂಕಾರ ಮಾಡಿ ಬರಮಾಡಿಕೊಳ್ಳುವರು. ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅಧ್ಯಕ್ಷತೆ ವಹಿಸುವರು.

ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವರಾದ ಸಾ.ರಾ. ಮಹೇಶ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ನಯಿಮಾಸುಲ್ತಾನ ನಝೀರ್ ಅಹಮದ್, ಸಂಸದ ಪ್ರತಾಪ್ ಸಿಂಹ, ಆರ್. ಧ್ರುವನಾರಾಯಣ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರುಗಳು, ವಿಧಾನಪರಿಷತ್ ಸದಸ್ಯರು, ಜಿ.ಪಂ.ಸದಸ್ಯರು, ಮಹಾನಗರ ಪಾಲಿಕೆ ಸದಸ್ಯರು ಹಾಗೂ ಎಲ್ಲಾ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News