ರಾಶಿ ರಾಶಿ ಸಾಮಾಗ್ರಿ ಬಂದರೂ ಸಂತ್ರಸ್ತರಿಗೆ ತಲುಪುತ್ತಿಲ್ಲ: ಪರಿಹಾರ ಕೇಂದ್ರದ ಅಸಹಾಯಕರಿಂದ ದೂರು

Update: 2018-09-04 17:58 GMT

ಮಡಿಕೇರಿ, ಸೆ.4: ಪ್ರಾಕೃತಿಕ ವಿಕೋಪದಿಂದ ಆಸ್ತಿಪಾಸ್ತಿ, ಮನೆ ಮಠಗಳನ್ನು ಕಳೆದುಕೊಂಡು ಸಂತ್ರಸ್ತರಾಗಿ ಪರಿಹಾರ ಕೇಂದ್ರದಲ್ಲಿರುವ ಬಡಮಂದಿಗೆ ಸಮರ್ಪಕ ರೀತಿಯಲ್ಲಿ ಅಗತ್ಯ ಸೌಲಭ್ಯಗಳು ದೊರಕುತ್ತಿಲ್ಲ ಎನ್ನುವ ದೂರುಗಳು ಮತ್ತೆ ಮತ್ತೆ ಕೇಳಿ ಬರುತ್ತಲೇ ಇದೆ. ಜಿಲ್ಲಾ ಪಂಚಾಯತ್ ಕಚೇರಿ ಸಂಕೀರ್ಣದ ನೂತನ ಕಟ್ಟದಲ್ಲಿರುವ ಪರಿಹಾರ ಕೇಂದ್ರದಲ್ಲಿ ನೆಲೆ ಕಂಡುಕೊಂಡಿರುವ 2ನೇ ಮೊಣ್ಣಂಗೇರಿ ನಿವಾಸಿ ಸಂತ್ರಸ್ತ ವಾಮನ ನಾಯ್ಕ ತಮ್ಮ ನೋವನ್ನು ಪತ್ರಕರ್ತರ ಮುಂದೆ ತೋಡಿಕೊಂಡಿದ್ದಾರೆ.

2ನೇ ಮೊಣ್ಣಂಗೇರಿಯಲ್ಲಿ ಸಂಭವಿಸಿದ ಭೂ ಕುಸಿತದಿಂದ ತಮ್ಮ ನೆಲೆಯನ್ನು ಕಳೆದುಕೊಂಡು ಪುನರ್ವಸತಿ ಕೇಂದ್ರಕ್ಕೆ ಬಂದಿರುವ ಅವರು, ಇಲ್ಲಿಯವರೆಗೆ ನನಗೆ ಮಲಗಲು ಒಂದು ಚಾಪೆಯೂ ದೊರಕಿಲ್ಲ. ನನ್ನೊಂದಿಗೆ ಇದ್ದ ಮತ್ತೋರ್ವ ನಿರಾಶ್ರಿತ ನೀಡಿದ ಚಾಪೆಯಲ್ಲಿ ನಾನಿಂದು ಮಲಗುತ್ತಿದ್ದೇನೆ. ತೊಡಲು ಒಂದಷ್ಟು ಬಟ್ಟೆ ನೀಡಲು ಕೇಳಿದರೂ, ಅದನ್ನು ತನಗೆ ಒದಗಿಸಿಲ್ಲ. ಹೊದೆಯುವ ಕಂಬಳಿಯೂ ತನಗೆ ದೊರಕಿಲ್ಲವೆಂದು ಅತೀವ ಬೇಸರ ವ್ಯಕ್ತಪಡಿಸಿದರು. ಅಧಿಕಾರಿಗಳ ಬಳಿ ಕೇಳಿದರೆ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ, ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲಾಧಿಕಾರಿಗಳು ಮಾಡಿದ ಆದೇಶಕ್ಕೇ ಬೆಲೆ ಇಲ್ಲವೆಂದು ವಾಮನ ನಾಯ್ಕ ಬೇಸರ ವ್ಯಕ್ತಪಡಿಸಿದರು. 

ಜಿಲ್ಲಾಧಿಕಾರಿಗಳು ಪುನರ್ವಸತಿ ಕೇಂದ್ರಕ್ಕೆ ಭೇಟಿ ನೀಡಿ ಹಿಂತೆರಳುತ್ತಿರುವಂತೆಯೆ ಕೇಂದ್ರದಲ್ಲಿರುವ ಅಧಿಕಾರಿಗಳು, ಸಿಬ್ಬಂದಿಗಳು ಸಂತ್ರಸ್ತರ ಬಗ್ಗೆ ನಿರ್ಲಕ್ಷ್ಯ ಧೋರಣೆ ಪ್ರದರ್ಶಿಸುತ್ತಲೇ ಇದ್ದಾರೆ. ಊಟ, ಉಪಹಾರವೂ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಗ್ರಾಮಗಳ ಪರಿಶೀಲನೆ ಅಗತ್ಯ

ಪ್ರಾಕೃತಿಕ ವಿಕೋಪದಿಂದ 2ನೇ ಮೊಣ್ಣಂಗೇರಿಯಲ್ಲಿ ಬೆಟ್ಟಗಳು ಕುಸಿದು ಗ್ರಾಮಕ್ಕೆ ತೆರಳುವ ಹಾದಿ ಇಲ್ಲದಂತಾಗಿದೆ. ಗ್ರಾಮದ ಶಾಲೆಯ ಬಳಿಯ ರಸ್ತೆ  1 ಕಿ.ಮೀ. ನಷ್ಟು ಉದ್ದಕ್ಕೆ ನೂರೈವತ್ತು ಅಡಿಗಳಷ್ಟು ಆಳಕ್ಕೆ ಕುಸಿದು ಹೋಗಿದ್ದು, ಮತ್ತೆಂದಿಗೂ ರಸ್ತೆ ಮಾಡಲು ಸಾಧ್ಯವಾಗದ ಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಪ್ರತಿ ಗ್ರಾಮ ಗ್ರಾಮಗಳಿಗೆ ತೆರಳಿ ಪ್ರತಿ ಮನೆಯನ್ನು ಪರಿಶೀಲಿಸಿ ಅಗತ್ಯ ನೆರವನ್ನು ಒದಗಿಸುವ ಅಗತ್ಯವಿದೆ. ತಪ್ಪಿದಲ್ಲಿ ಕೆಳಹಂತದ ಅಧಿಕಾರಿಗಳು ಹಿರಿಯ ಆಧಿಕಾರಿಗಳ ಹಾದಿ ತಪ್ಪಿಸುವ ಸಾಧ್ಯತೆ ಇದೆ ಎಂದು ವಾಮನ ನಾಯ್ಕ ಅಭಿಪ್ರಾಯಪಟ್ಟರು.

ಅನಾಹುತಕ್ಕೆ ನಿರಂತರ ಮಳೆಯೇ ಕಾರಣ: ಗ್ರಾಮ, ಗ್ರಾಮಗಳಲ್ಲಿ ಗುಡ್ಡ ಕುಸಿದು ಇಷ್ಟೊಂದು ಅನಾಹುತಗಳು ಸಂಭವಿಸಲು ಬಿಡುವಿಲ್ಲದೆ ನಿರಂತರವಾಗಿ ಸುರಿದ ಧಾರಾಕಾರ ಮಳೆಯೇ ಕಾರಣ ಹೊರತು ಹೋಂ ಸ್ಟೇ, ರೆಸಾರ್ಟ್‍ಗಳ ನಿರ್ಮಾಣ ಅಲ್ಲವೆಂದು ಹೇಳಿದರು. 1963 ನೇ ಇಸವಿಯಿಂದ ನಾನು ಎರಡನೇ ಮೊಣ್ಣಂಗೇರಿ ಗ್ರಾಮದಲ್ಲಿ ವಾಸಿಸುತ್ತಿದ್ದು, ಇಷ್ಟೊಂದು ಪ್ರಮಾಣದ ಮಳೆ ಎಂದಿಗೂ ಸುರಿದಿರಲಿಲ್ಲ ಎಂದು ವಾಮನ ನಾಯ್ಕ ಅನುಭವ ಹಂಚಿಕೊಂಡರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News