ಕೊಡಗನ್ನು ರಾಷ್ಟ್ರೀಯ ವಿಪತ್ತು ಪೀಡಿತ ಪ್ರದೇಶವೆಂದು ಘೋಷಿಸಿ: ಎಸ್‍ಡಿಪಿಐ ಆಗ್ರಹ

Update: 2018-09-04 18:04 GMT

ಮಡಿಕೇರಿ ಸೆ.4 : ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಕೊಡಗು ಜಿಲ್ಲೆಯನ್ನು ‘ರಾಷ್ಟ್ರೀಯ ವಿಪತ್ತು ಪೀಡಿತ ಪ್ರದೇಶ’ ಎಂದು ಘೋಷಿಸುವುದರೊಂದಿಗೆ ಜಿಲ್ಲೆಯನ್ನು ಪುನರ್ ನಿರ್ಮಿಸಲು ಅಗತ್ಯ ನೆರವನ್ನು ನೀಡಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕೇಂದ್ರ ಸರಕಾರವನ್ನು ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಟಿ.ಎಚ್.ಅಬೂಬಕ್ಕರ್, ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಿನಲ್ಲಿ ನಡೆದ ಪ್ರಕೃತಿ ವಿಕೋಪದಿಂದ ರಾಷ್ಟ್ರೀಯ, ರಾಜ್ಯ ಹೆದ್ದಾರಿ ಸೇರಿದಂತೆ ಸಂಪರ್ಕ ರಸ್ತೆಗಳು ಕಡಿತಗೊಂಡಿದ್ದು, ಪಟ್ಟಣ ಹಾಗೂ ಗ್ರಾಮಕ್ಕೆ ಇರುವ ಸಂಪರ್ಕಗಳೂ ಕಡಿದುಹೋಗಿವೆ. ಜಲಪ್ರಳಯ ಹಾಗೂ ಭೂ ಕುಸಿತದಿಂದ ಸುಮಾರು 16 ಮಂದಿ ಬಲಿಯಾಗಿದ್ದು, ಇನ್ನೂ ಹಲವು ಮಂದಿ ಕಾಣೆಯಾಗಿದ್ದಾರೆ. ಜಿಲ್ಲಾಡಳಿತದ ಅಂದಾಜಿನಂತೆ ಸುಮಾರು 3500 ಕೋಟಿ ರೂ.ಗಳಷ್ಟು ನಷ್ಟ ಉಂಟಾಗಿರುವುದಾಗಿ ಹೇಳಲಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ ಜಿಲ್ಲೆಯನ್ನು ರಾಷ್ಟ್ರೀಯ ವಿಪತ್ತು ಪೀಡಿತ ಪ್ರದೇಶ ಎಂದು ಘೋಷಿಸುವುದರೊಂದಿಗೆ ಕೇಂದ್ರ ಸರಕಾರ ಅಗತ್ಯ ನೆರವನ್ನು ಒದಗಿಸಬೇಕು ಎಂದರು.

ಜಿಲ್ಲೆಯ ಜನತೆ ಸಾಕಷ್ಟು ತೊಂದರೆ, ಬವಣೆಗಳಿಗೆ ಒಳಗಾಗಿದ್ದರೂ ಕೇಂದ್ರ ಸರಕಾರ ಇದುವರೆಗೆ ಯಾವುದೇ ರೀತಿಯ ಪರಿಹಾರ ಕಾರ್ಯವನ್ನು ಘೋಷಿಸದಿರುವುದು ಹಾಗೂ ಈ ಸಂಬಂಧ ಕ್ಷೇತ್ರದ ಸಂಸದರು ಸರಕಾರದ ಮೇಲೆ ಯಾವುದೇ ಒತ್ತಡ ಹೇರದಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂಬಂಧವಾಗಿ ಸೆ.10 ರಂದು ಕೇಂದ್ರ ಸರಕಾರದ ಗಮನ ಸೆಳೆಯಲು ಪಕ್ಷದ ವತಿಯಿಂದ ದೆಹಲಿಯಲ್ಲಿ ಪ್ರತಿಭಟನೆ ನಡೆಸುವುದರೊಂದಿಗೆ ಕೇರಳ ಮತ್ತು ಕೊಡಗು ಜಿಲ್ಲೆಯನ್ನು ರಾಷ್ಟ್ರೀಯ ವಿಪತ್ತು ಪೀಡಿತ ಪ್ರದೇಶವೆಂದು ಘೋಷಿಸುವಂತೆ ಮತ್ತು ಪರಿಹಾರಕ್ಕೆ ಒತ್ತಾಯಿಸಲಾಗುವುದು ಎಂದು ವಿವರಿಸಿದರು.

ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದವರು ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಇರುವ ಗಡುವನ್ನು ಸೆ.30ರವರೆಗೆ ವಿಸ್ತರಿಸಬೇಕು. ಪ್ರಕೃತಿ ವಿಕೋಪದಿಂದ ಜಿಲ್ಲೆಯ ಕೂಲಿ ಕಾರ್ಮಿಕರು, ಮಧ್ಯಮ ವರ್ಗದವರು ಕೆಲಸವಿಲ್ಲದೆ, ಆದಾಯವಿಲ್ಲದೆ ದಿನನಿತ್ಯದ ಖರ್ಚಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಜಿಲ್ಲಾಡಳಿತ ಇಂತಹ ಕುಟುಂಬಗಳಿಗೆ ಕನಿಷ್ಟ ಒಂದು ತಿಂಗಳ ಅವಧಿಗೆ ಉಚಿತವಾಗಿ ಪಡಿತರ ವಿತರಿಸಬೇಕು ಎಂದು ಟಿ.ಎಚ್.ಅಬೂಬಕ್ಕರ್ ಒತ್ತಾಯಿಸಿದರು. 

ಪ್ರಕೃತಿ ವಿಕೋಪಕ್ಕೆ ಒಳಗಾಗಿ ಜಿಲ್ಲೆಯಲ್ಲಿ ಕಾಫಿ ಹಾಗೂ ಕರಿಮೆಣಸು ಫಸಲು ಸಂಪೂರ್ಣವಾಗಿ ನೆಲಕಚ್ಚಿದ್ದು, ಈ ಹಿನ್ನೆಲೆಯಲ್ಲಿ ರೈತರಿಗೆ ಪರಿಹಾರ ವಿತರಿಸುವುದರೊಂದಿಗೆ ಅವರ ಬೆಳೆ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಅಲ್ಲದೆ ಈ ಬಗ್ಗೆ ಜಿಲ್ಲೆಯ ಸಂಸದರು, ಶಾಸಕರು ತಕ್ಷಣ ಸರಕಾರದ ಗಮನಸೆಳೆಯುವುದರೊಂದಿಗೆ ಜಿಲ್ಲೆಯ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.

ಪ್ರಕೃತಿ ವಿಕೋಪಕ್ಕೆ ತುತ್ತಾದ ಸಂತ್ರಸ್ತರಿಗಾಗಿ ಪಕ್ಷದ ವತಿಯಿಂದ ಮಡಿಕೇರಿಯ ಆಜಾದ್‍ನಗರದಲ್ಲಿ ನಿರಾಶ್ರಿತರ ಕೇಂದ್ರವೊಂದನ್ನು ತೆರೆಯಲಾಗಿದ್ದು, ಸುಮಾರು 194 ಮಂದಿಗೆ ಆಶ್ರಯ ನೀಡಲಾಗಿದೆ. ಆದರೆ ಈ ಕೇಂದ್ರಕ್ಕೆ ಇದುವರೆಗೆ ಜಿಲ್ಲೆಯ ಬಿಜೆಪಿ ಹಾಗೂ ಕಾಂಗ್ರೆಸ್ ಶಾಸಕರುಗಳಾಗಲಿ, ಸಂಸದರಾಗಲಿ ಭೇಟಿ ನೀಡಿ ಸಾಂತ್ವನ ಹೇಳಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ಜಿಲ್ಲೆಯ ಜನಪ್ರತಿನಿಧಿಗಳು ಸಂಕಷ್ಟಕ್ಕೊಳಗಾದವರಿಗೆ ಸೌಲಭ್ಯ ಒದಗಿಸುವಲ್ಲೂ ತಾರತಮ್ಯ ನೀತಿ ಅನುಸರಿಸುತ್ತಿರುವುದು ದುರದೃಷ್ಟಕರ ಎಂದು ಟೀಕಿಸಿದರು. ಅಲ್ಲದೆ ಈ ಸಂತ್ರಸ್ತರ ಕೇಂದ್ರದಲ್ಲಿರುವ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಕೂಡಲೇ ತಾತ್ಕಾಲಿಕ ಮನೆಗಳನ್ನು ಒದಗಿಸಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಕ್ಕೆ ತುತ್ತಾದ ಮಡಿಕೇರಿ ನಗರ ವ್ಯಾಪ್ತಿಯ 2323, ಸೋಮವಾರಪೇಟೆ, ಕೊಳಕೇರಿ, ಕುಶಾಲನಗರಗಳಲ್ಲಿ ಸುಮಾರು 1350 ಸೇರಿಂದತೆ ಒಟ್ಟು 3700 ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ಕಿಟ್‍ಗಳು ಪಕ್ಷದ ವತಿಯಿಂದ ವಿತರಿಸಲಾಗಿದೆ ಅಲ್ಲದೆ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಹಾನಿಗೊಳಗಾದ 200 ಮನೆಗಳಿಗೆ ಟಾರ್ಪಲ್ ಹೊದಿಸಿ ತಾತ್ಕಾಲಿಕವಾಗಿ ವಾಸ ಯೋಗ್ಯ ಮಾಡಲಾಗಿದೆ 100 ಕುಟುಂಬಗಳಿಗೆ 150ರಷ್ಟು ಪ್ಲಾಸ್ಟಿಕ್ ಟಾರ್ಪಲ್ ಹೊದಿಕೆಗಳನ್ನು ನೀಡಲಾಗಿದ್ದು, ಸಂತ್ರಸ್ತರ ನೆರವು ಕಾರ್ಯದಲ್ಲಿ ಪಕ್ಷದ ಸುಮಾರು 300ಕ್ಕೂ ಅಧಿಕ ಕಾರ್ಯಕರ್ತರು ತೊಡಗಿಸಿಕೊಂಡಿದ್ದಾರೆ ಎಂದು ಟಿ.ಎಚ್.ಅಬೂಬಕ್ಕರ್ ಒತ್ತಾಯಿಸಿದರು. 

ಪಕ್ಷದ ರಾಜ್ಯ ಸಮಿತಿ ಸದಸ್ಯ ಅಮೀನ್ ಮೊಹ್ಸೀನ್ ಮಾತನಾಡಿ, ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದ ಕುಟುಂಬಗಳಿಗೆ ದಿಡ್ಡಳ್ಳಿ ನಿರಾಶ್ರಿತರ ಮಾದರಿಯ ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಳ್ಳದಿರುವಂತೆ ಮನವಿ ಮಾಡಿದರಲ್ಲದೆ, ಈ ಕಾರ್ಯವನ್ನು ಸಮರೋಪಾದಿಯಲ್ಲಿ ನಿರ್ವಹಿಸಬೇಕು ಎಂದು ಆಗ್ರಹಿಸಿದರು. ದಿಡ್ಡಳ್ಳಿಯ ನಿರಾಶ್ರಿತರಿಗೆ 6 ತಿಂಗಳುಗಳಲ್ಲಿ ಮನೆ ನಿರ್ಮಿಸಿಕೊಡುವುದಾಗಿ ಸರಕಾರ ಭರವಸೆ ನೀಡಿತ್ತಾದರೂ ಇದೀಗ ಎರಡು ವರ್ಷವಾದರೂ ನಿರಾಶ್ರಿತರು ತಾತ್ಕಾಲಿಕ ಶೆಡ್‍ಗಳಲ್ಲೇ ಜೀವನ ಸಾಗಿಸುತ್ತಿದ್ದಾರೆ. ಆದರೆ ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದ ಕುಟುಂಬಗಳು ಆ ರೀತಿಯ ಜೀವನ ನಡೆಸಲು ಸಾಧ್ಯವಿಲ್ಲದಿರುವುದರಿಂದ ಅವರುಗಳಿಗೆ ಸೂಕ್ತ ಪರಿಹಾರ ಕಾರ್ಯಗಳನ್ನು ನಿರ್ವಹಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ ಕ್ಷೇತ್ರದ ಸಂಸದರು, ಶಾಸಕರುಗಳು ಕೇಂದ್ರ ಸರಕಾರದ ಗಮನಸೆಳೆಯುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ ಎಂದು ಟೀಕಿಸಿದ ಅಮೀನ್ ಮೊಹಿಸಿನ್, ಜಿಲ್ಲೆಗೆ ರಕ್ಷಣಾ ಸಚಿವರು ಬಂದು ಹೋದರೂ ಯಾವುದೇ ಪರಿಹಾರ ಇನ್ನೂ ಘೋಷಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದವರು ಬಹುತೇಕ ಕೃಷಿಕರಾಗಿದ್ದು, ಅವರುಗಳಿಗೆ ಸರಕಾರ ಸಿ ಮತ್ತು ಡಿ ವರ್ಗದ ಜಮೀನನ್ನು ಗುರುತಿಸಿ ಹಂಚಿಕೆ ಮಾಡುವುದರೊಂದಿಗೆ ಜೀವನ ನಡೆಸಲು ಅನುವು ಮಾಡಿಕೊಡಬೇಕು ಎಂದೂ ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಕೆ.ಜಿ.ಪೀಟರ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ಅಡ್ಕಾರ್,  ನಗರಸಭಾ ಸದಸ್ಯ ಮನ್ಸೂರ್ ಹಾಗೂ  ನಗರಾಧ್ಯಕ್ಷ ಖಲೀಲ್ ಬಾಷಾ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News