ವಿವಾದಾತ್ಮಕ ನಿರ್ಗಮನ ವೀಸಾ ವ್ಯವಸ್ಥೆ ರದ್ದುಪಡಿಸಿದ ಕತರ್

Update: 2018-09-05 04:43 GMT

ದುಬೈ, ಸೆ. 5: ಮಹತ್ವದ ಬೆಳವಣಿಗೆಯೊಂದರಲ್ಲಿ ದೇಶದ ವಾಸ್ತವ್ಯ ಕಾನೂನಿಗೆ ತಿದ್ದುಪಡಿ ತಂದಿರುವ ಕತರ್, ವಿವಾದಾತ್ಮಕ ನಿರ್ಗಮನ ವೀಸಾ ವ್ಯವಸ್ಥೆಯನ್ನು ರದ್ದುಪಡಿಸಿದೆ.

ಇದರಿಂದಾಗಿ ವಿದೇಶಗಳ ಕಾರ್ಮಿಕರು ತಮ್ಮ ಉದ್ಯೋಗದಾತರಿಂದ ನಿರ್ಗಮನ ಅನುಮತಿ ಪಡೆಯದೇ ದೇಶದಿಂದ ಹೊರಹೋಗಲು ಅವಕಾಶವಾಗಲಿದೆ. ನಿರ್ಗಮನ ಅನುಮತಿಯನ್ನು ಪಡೆಯಬೇಕೆಂಬ ನಿಯಮಾವಳಿಯನ್ನು ರದ್ದುಪಡಿಸುವಂತೆ ಕಾರ್ಮಿಕ ಹಕ್ಕು ಸಂಘಟನೆಗಳು ಆಗ್ರಹಿಸುತ್ತಾ ಬಂದಿದ್ದವು.

2022ರ ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಯನ್ನು ಆಯೋಜಿಸಲಿರುವ ದೋಹಾ, ದೇಶದಲ್ಲಿ ಕಾರ್ಮಿಕರ ಶೋಷಣೆ ನಡೆಯುತ್ತಿದೆ ಎಂಬ ಆರೋಪವನ್ನು ವ್ಯವಸ್ಥಿತವಾಗಿ ನಿಭಾಯಿಸಲು ಮುಂದಾಗಿದೆ.

ಹೊಸ ಕಾನೂನಿನ ಅನ್ವಯ, ಯಾವುದೇ ವಲಸೆ ಕಾರ್ಮಿಕರು ಉದ್ಯೋಗದಾತರಿಂದ ಅನುಮತಿ ಪಡೆಯದೇ ದೇಶದಿಂದ ಹೊರಹೋಗಲು ಅವಕಾಶವಾಗಲಿದೆ ಎಂದು ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್‌ಒ) ಪ್ರಕಟಣೆಯಲ್ಲಿ ಹೇಳಿದೆ. ಅನಿಲ ಸಮೃದ್ಧ ಕತರ್‌ನ ಮಹತ್ವದ ಹೆಜ್ಜೆ ಇದಾಗಿದೆ ಎಂದು ಐಎಲ್‌ಒ ಶ್ಲಾಘಿಸಿದೆ.

ವಿವಾದಾತ್ಮಕ ನಿರ್ಗಮನ ವೀಸಾ ವ್ಯವಸ್ಥೆಗೆ ತಿದ್ದುಪಡಿ ಸೇರಿದಂತೆ ಹಲವು ಕಾರ್ಮಿಕ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸುವುದಾಗಿ ಕತರ್ ಕಳೆದ ವರ್ಷ ಭರವಸೆ ನೀಡಿತ್ತು.

"ನಿಯಮಾವಳಿ ಸಂಖ್ಯೆ 13ರನ್ನು ಜಾರಿಗೆ ತಂದಿರುವ ಸರ್ಕಾರದ ಕ್ರಮವನ್ನು ಐಎಲ್‌ಒ ಸ್ವಾಗತಿಸುತ್ತದೆ. ಇದು ಕತರ್‌ನಲ್ಲಿರುವ ವಲಸೆ ಕಾರ್ಮಿಕ ಜೀವನದ ಮೇಲೆ ನೇರ ಹಾಗೂ ಧನಾತ್ಮಕ ಪರಿಣಾಮ ಬೀರಲಿದೆ" ಎಂದು ಐಎಲ್‌ಒ ದೋಹಾ ಕಚೇರಿ ಮುಖ್ಯಸ್ಥ ಹಾಟನ್ ಹೊಮಯೋನ್‌ಪುರ್ ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News