ಪ್ರಸಕ್ತ ಶಿಕ್ಷಣ ಮಾರಾಟದ ಸರಕಾಗಿದೆ: ವಿ.ಪ. ಸದಸ್ಯ ಭೋಜೇಗೌಡ

Update: 2018-09-05 12:57 GMT

ಚಿಕ್ಕಮಗಳೂರು, ಸೆ.5: ಆಧುನಿಕ ಯುಗದಲ್ಲಿ ಶಿಕ್ಷಣ ಕೇವಲ ಮಾರಟದ ಸರಕಾಗಿರುವುದು ದುರಂತ. ಇಂದಿನ ಶಿಕ್ಷಣ ವ್ಯವಸ್ಥೆಯಿಂದ ಮಕ್ಕಳಿಗೆ ಜೀವನಮೌಲ್ಯಗಳನ್ನು ಕಲಿಸುವಲ್ಲಿ ವಿಫಲವಾಗಿದೆ. ಕೇವಲ ಪಠ್ಯಕ್ಕೆ ಸೀಮಿತವಾಗಿರುವ ಶಿಕ್ಷಣದಿಂದ ಮಕ್ಕಳು ಜೀವನವನ್ನು ಧೈರ್ಯದಿಂದ ಎದುರಿಸುವಲ್ಲಿ ಹಿಂದುಳಿದಿದ್ದಾರೆ. ಶಿಕ್ಷಣ ವ್ಯವಸ್ಥೆ ಬದಲಾಗದಿದ್ದಲ್ಲಿ ವಿದ್ಯಾರ್ಥಿಗಳ ಜೀವನ ಕವಲು ಹಾದಿಯಲ್ಲಿ ಸಾಗಲಿದೆ ಎಂದು ವಿಧಾನಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ ಆತಂಕ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಡಳಿತ, ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಡಾ.ಸರ್ವಪಲ್ಲಿ ರಾಧಕೃಷ್ಣನ್ ಅವರ ಜನ್ಮಾದಿನೋತ್ಸವದ ಅಂಗವಾಗಿ ಬುಧವಾರ ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ 57ನೇ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನ ದಿನಮಾನಗಳಲ್ಲಿ ಗುರುಕುಲಗಳು, ಮಠಮಾನ್ಯಗಳು, ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಜೀವನ ಪಾಠವನ್ನು ಹೇಳಿಕೊಡುತ್ತಿದ್ದವು. ಆದರೆ ಇಂದು ಶಿಕ್ಷಣ ಸಂಸ್ಥೆಗಳು ಪಠ್ಯಕ್ರಮವನ್ನಷ್ಟೇ ಭೋದಿಸಿ ಜೀವನ ಪಾಠವನ್ನು ಹೇಳಿಕೊಡುವಲ್ಲಿ ವಿಫಲವಾಗಿದೆ. ಇದರಿಂದ ವಿದ್ಯಾರ್ಥಿಗಳು ತಮ್ಮ ಉತ್ತಮ ಜೀವನ ರೂಪಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ ಎಂದರು.

ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಶಿಕ್ಷಕರ ಹಲವು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ತಾವು ಯಶಸ್ವಿಯಾಗಿದ್ದು, ಮುಂಬರುವ ದಿನಗಳಲ್ಲಿ ಎಮ್‍ಟಿಎಸ್ ಪಿಂಚಣಿ ಯೋಜನೆಯ ವಿರುದ್ಧ ಹೋರಾಟ ರೂಪಿಸಿ ಹಳೆ ಮಾದರಿ ಪಿಂಚಣಿ ಯೋಜನೆಗೆ ಜಾರಿಯಾಗುವಂತೆ ಒತ್ತಾಯಿಸುವುದೇ ನಮ್ಮ ಮುಂದಿನ ಗುರಿ ಎಂದರು.

ಪ್ರಧಾನ ಉಪನ್ಯಾಸ ನೀಡಿದ ಬೆಂಗಳೂರು ಯುಕೋ ಬ್ಯಾಂಕ್‍ನ ನಿವೃತ್ತ ಹಿರಿಯ ಪ್ರಬಂಧಕ ನಾರಾವಿ ವೆಂಕಟೇಶ್‍ಹೆಗ್ಡೆ ಮಾತನಾಡಿ, ದೇಶದಲ್ಲಿ ಕೌಟುಂಬಿಕ ಮೌಲ್ಯಗಳು ಉಳಿಯಲು ತಾಯಿಂದಿರೇ ಮೂಲ ಕಾರಣ. ವ್ಯಕ್ತಿಯ ವ್ಯಕ್ತಿತ್ವ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅನನ್ಯವಾದುದು. ಶಿಕ್ಷಕರಿಲ್ಲದೇ ಯಾವುದೇ ವ್ಯಕ್ತಿ ಪರಿಪೂರ್ಣ ವ್ಯಕ್ತಿಯಾಗಲು ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಸಿನಿಮಾ ನಟರು ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳ ವ್ಯಕ್ತಿಗಳು ಮಾದರಿಯಾಗುತ್ತಿದ್ದಾರೆ ಎಂದು ವಿಷಾದನೀಯ. ಯುವಜನತೆ  ದೇಶದ ಜೀವನ ಮೌಲ್ಯ, ಆದರ್ಶಗಳನ್ನು ಅನುಕರಿಸುವ ಬದಲು ವಿದೇಶಿ ಫ್ಯಾಷನ್‍ನ ವ್ಯಾಮೋಹಕ್ಕೆ ಬಿದ್ದಿರುವುದು ದುರಂತ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಸಿ.ಟಿ.ರವಿ ಮಾತನಾಡಿ, ಶಿಕ್ಷಕರು ಪುಸ್ತಕದಲ್ಲಿರುವುದನ್ನು ವಿದ್ಯಾರ್ಥಿಗಳ ಮಸ್ತಕಕ್ಕೆ ತುಂಬುವ ರೋಬೋಟ್‍ಗಳಾಗಿದ್ದೇವೆಯೇ ಅಥವಾ ಬದುಕಿನ ದಾರಿ ತೋರಿಸುವ ವಿದ್ಯಾರ್ಥಿಗಳಿಗೆ ಅರಿವನ್ನು ಮೂಡಿಸುವ ನಿಜವಾದ ಗುರುಗಳಾಗಿದ್ದೇವೆಯೇ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲು ಇದು ಸುಸಂದರ್ಭ. ತಾಯಿಗೆ ಗುರುಸ್ಥಾನದೊಂದಿಗೆ ದೇವರಸ್ಥಾನ, ಪಿತೃವಿಗೆ ದೈವತ್ವದ ಸ್ಥಾನ. ವಿದ್ಯೆ ನೀಡುವ ಗುರುವಿಗೆ ಆಚಾರ್ಯ ದೇವೋಭವ ಎನ್ನುವ ಮೂಲಕ ದೈವತ್ವದ ಸ್ಥಾನ ನೀಡಿರುವುದು ನಮ್ಮ ಭಾರತೀಯ ಪರಂಪರೆ ಎಂದ ಅವರು,  ವಿದ್ಯಾರ್ಥಿಗಳಿಗೆ ಒಳಿತು ಕೆಡುಕುಗಳ ದರ್ಶನ ಮಾಡಿಸಿದಾಗ ಮಾತ್ರ ಉತ್ತಮ ಗುರುಗಳಾಗಲು ಸಾಧ್ಯ ಎಂದು ಹೇಳಿದರು.

ಇದಕ್ಕೂ ಮೊದಲು ಶಿಕ್ಷಕರ ದಿನಾಚರಣೆಯ ಅಂಗವಾಗಿ ಚಿಕ್ಕಮಗಳೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ನೂರಾರು ಶಿಕ್ಷಕರು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ವೇದಿಕೆಯಲ್ಲಿ ನಿವೃತ್ತರಾದ ಪ್ರೌಢಶಾಲಾ ವಿಭಾಗ ಮತ್ತು ಪ್ರಾಥಮಿಕ ಶಾಲಾ ವಿಭಾಗ ಶಿಕ್ಷಕರಿಗೆ ಸನ್ಮಾನಿಸಲಾಯಿತು. ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನಡೆದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದ ಶಿಕ್ಷಕರಿಗೆ ಬಹುಮಾನ ವಿತರಿಸಲಾಯಿತು.

ವೇದಿಕೆಯಲ್ಲಿ ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ, ನಗರಸಭಾ ಅಧ್ಯಕ್ಷೆ ಶಿಲ್ಪಾರಾಜಶೇಖರ್, ತಾ.ಪಂ. ಅಧ್ಯಕ್ಷ ಜಯಣ್ಣ, ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಜಸಂತ ಅನೀಲ್‍ಕುಮಾರ್, ಜಿ.ಪಂ.ಸದಸ್ಯರಾದ ರವೀಂದ್ರಬೆಳವಾಡಿ, ಕವಿತಲಿಂಗರಾಜು, ಪ್ರೇಮ ಕೆ.ವಿ ಮಂಜುನಾಥ್, ಜೆವಿಎಸ್ ಅಧ್ಯಕ್ಷ ಡಾ.ಡಿ.ಎಲ್ ವಿಜಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News