ರಾಜ್ಯದಲ್ಲಿ ಅಕ್ರಮ ನೆಲೆಸಿರುವ ಬಾಂಗ್ಲಾ ಪ್ರಜೆಗಳ ಮೇಲೆ ಹದ್ದಿನ ಕಣ್ಣು: ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕಮಲ್ ಪಂತ್

Update: 2018-09-05 15:24 GMT

ದಾವಣಗೆರೆ,ಸೆ.5: ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ಪ್ರಜೆಗಳ ಮೇಲೆ ಪೊಲೀಸ್ ಇಲಾಖೆ ಹದ್ದಿನಕಣ್ಣಿಟ್ಟಿದೆ ಎಂದು ರಾಜ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕಮಲ್ ಪಂತ್ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಂಗ್ಲಾ ಅಕ್ರಮವಾಸಿಗಳ ವಿಷಯವನ್ನು ಸರ್ಕಾರ ಮತ್ತು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಈ ಬಗ್ಗೆ ಈಗಾಗಲೇ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಮುಂದೆಯೂ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಡಿಜೆಗೆ ಅವಕಾಶ ಇಲ್ಲ: ಸೆ.13 ರಿಂದ ಆರಂಭವಾಗಲಿರುವ ಗಣೇಶೋತ್ಸವದ ಮೆರವಣಿಗೆಯಲ್ಲಿ ಯಾವುದೇ ಕಾರಣಕ್ಕೂ ಡಿಜೆಗೆ ಅವಕಾಶ ನೀಡುವುದಿಲ್ಲ. ಈ ಸಂಬಂಧ ಸುಪ್ರಿಂಕೋರ್ಟಿನ ನಿರ್ದೇಶನಗಳನ್ನು ಇಲಾಖೆ ಕಟ್ಟುನಿಟ್ಟಾಗಿ ಪಾಲಿಸಲಿದೆ. ಡಿಜೆ ಅನುಮತಿ ನೀಡುವ ಕುರಿತು ಯಾವುದೇ ಒತ್ತಡಗಳಿಗೆ ಎಸ್ಪಿಗಳು ಒಳಗಾಗದಂತೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದರು.

ಶಿವಮೊಗ್ಗ ಮತ್ತು ದಾವಣಗೆರೆ ಸೂಕ್ಷ್ಮ ಪ್ರದೇಶಗಳಾಗಿರುವ ಹಿನ್ನೆಲೆಯಲ್ಲಿ ಇಲಾಖೆ ಹೆಚ್ಚು ಗಮನಹರಿಸಿದೆ. ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಜೊತೆ ಸಭೆ ನಡೆಸಲಾಗಿದೆ. ಶಾಂತ ರೀತಿಯಿಂದ ಹಬ್ಬ ಆಚರಿಸಲು ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕು ಎಂದರು.

ವಾಟ್ಸಪ್‍ಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡುವವರ ವಿರುದ್ಧ ಇಲಾಖೆ ಕಠಿಣ ಕ್ರಮ ಕೈಗೊಳ್ಳಲಿದೆ. ಗಣೇಶ್ ಉತ್ಸವ ಸೇರಿದಂತೆ ಯಾವುದೇ ಸಂದರ್ಭಗಳಲ್ಲೂ ಪ್ರಚೋದನಕಾರಿಯಾಗಿ ಮೆಸೇಜ್ ಕಳುಹಿಸುವವರನ್ನು ಬಂಧಿಸಿ ಮೊಕದ್ದಮೆ ದಾಖಲಿಸಲಾಗುವುದು. ಈ ಸಂಬಂಧ ಪ್ರತಿಯೊಂದು ವಾಟ್ಸ್ ಆಪ್ ಗ್ರೂಪ್‍ಗಳ ಮೇಲೆ ಇಲಾಖೆ ನಿಗಾವಹಿಸಿದೆ ಎಂದರು.

ಸಿಬ್ಬಂದಿಗಳ ಕ್ಯಾಪ್ ಬದಲಿಸುವ ವಿಚಾರ ಇನ್ನೂ ಚರ್ಚೆಆಗಿದೆಯೆ ಹೊರತು ಅಂತಿಮಗೊಂಡಿಲ್ಲ. ಈ ಬಗ್ಗೆ ಸರ್ಕಾರಕ್ಕೆ ಪ್ರಪೋಸಲ್ ಕೂಡ ಹೋಗಿಲ್ಲ. ಇಲಾಖೆಯಲ್ಲಿ 23 ಸಾವಿರ ಸಿಬ್ಬಂದಿಗಳ ಕೊರತೆ ಇದ್ದು, ಹಂತ ಹಂತವಾಗಿ ತುಂಬುವ ಕೆಲಸ ನಡೆಯುತ್ತಿದೆ ಎಂದು ತಿಳಿಸಿದರು.

ಸಾರ್ವಜನಿಕರೊಂದಿಗೆ ಇಲಾಖೆಯ ಸಿಬ್ಬಂದಿ ಹೇಗೆ ಮಾತನಾಡಬೇಕು ಎಂಬ ಬಗ್ಗೆ ತರಬೇತಿ ನೀಡುವ ಕೆಲಸವನ್ನು ಮತ್ತೆ ಆರಂಭಿಸಲಾಗುವುದು. ಪೊಲೀಸರು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುತ್ತಿಲ್ಲ ಎನ್ನುವ ದೂರುಗಳು ಕೇಳಿಬರುತ್ತಿವೆ. ಈ ಕುರಿತು ಗಣೇಶ ಚತುರ್ಥಿ ಮುಗಿದ ಕೂಡಲೇ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗುವುದು ಎಂದರು.

ದಾವಣಗೆರೆ ಎಸ್ಪಿ ಆರ್.ಚೇತನ್. ಶಿವಮೊಗ್ಗ ಮತ್ತು ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News