ಮಂಡ್ಯ: ವ್ಯಕ್ತಿ ಆತ್ಮಹತ್ಯೆಗೆ ಪ್ರಚೋದನೆ ಸಾಬೀತು; ಏಳು ಮಂದಿಗೆ ಜೈಲು ಶಿಕ್ಷೆ, ದಂಡ

Update: 2018-09-06 14:45 GMT

ಮಂಡ್ಯ, ಸೆ.6: ಜಮೀನು ವಿಚಾರದಲ್ಲಿ ಜಗಳ ತೆಗೆದು ವ್ಯಕ್ತಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ 7 ಮಂದಿ ಆರೋಪಿಗಳಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಲಾಗಿದೆ.

ಮದ್ದೂರು ತಾಲೂಕು ಡಿ.ಹೊಸಗಾವಿ ಗ್ರಾಮದ ಗಂಗರಾಜು, ಪುಟ್ಟಸ್ವಾಮಿ, ಪುಟ್ಟಸ್ವಾಮಿ ಪುತ್ರ ನರೇಂದ್ರ, ಕೆಂಪನಾಯ್ಕ ಅವರ ಪುತ್ರ ಶಿವನಂಜಯ್ಯ, ನರಸಿಂಹಯ್ಯ ಅವರ ಪತ್ನಿ ಲತ, ರಾಮನಗರ ಜಿಲ್ಲೆ ಮಾತಾ ಗ್ರಾಮದ ಚಿಕ್ಕನಾಯ್ಕ ಅವರ ಪತ್ನಿ ನರಸಮ್ಮ ಹಾಗೂ ಪುತ್ರ ನಾಗೇಶ ಶಿಕ್ಷೆಗೆ ಗುರಿಯಾದವರು.

ಜಮೀನು ವಿಚಾರದಲ್ಲಿ ಆರೋಪಿತರು ಡಿ.ಹೊಸಗಾವಿ ಗ್ರಾಮದ ನರಸಿಂಹನಾಯ್ಕ್ ರವರ ಜತೆ ಗಲಾಟೆ ಮಾಡಿದ್ದು, ಕೊಲೆ ಬೆದರಿಕೆ ಹಾಕಿದ್ದರು. ಹಿಂಸೆ ತಾಳದೆ ನರಸಿಂಹನಾಯ್ಕ್ 2015 ಎಪ್ರಿಲ್ 9 ರಂದು ವಿಷ ಸೇವಿಸಿದ್ದರು. ತದನಂತರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ಸಂಬಂಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಆರೋಪಿತರ ವಿರುದ್ಧ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ತನಿಖಾಧಿಕಾರಿ ಸುರೇಶ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪತ್ರ ಸಲ್ಲಿಸಿದ್ದರು.

ವಿಚಾರಣೆ ವೇಳೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ಆರೋಪಿತರಿಗೆ ಎರಡು ವರ್ಷ ಕಾರಾಗೃಹ ಶಿಕ್ಷೆ ಹಾಗೂ ತಲಾ 25 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಅಭಿಯೋಜನೆಯ ಪರವಾಗಿ ಸರಕಾರಿ ಅಭಿಯೋಜಕ ಎಚ್.ಇ.ಚಿನ್ನಪ್ಪ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News