ಹನೂರು: ಜಮೀನು ವಿಚಾರಕ್ಕೆ ಗಲಾಟೆ; 7 ಮಂದಿಗೆ ಗಾಯ

Update: 2018-09-06 14:57 GMT

ಹನೂರು,ಸೆ.6: ಜಮೀನು ವಿಚಾರವಾಗಿ ನಡೆದ ಕಲಹದಿಂದ 7 ಮಂದಿ ಗಾಯಗೊಂಡು, 14 ಜನರ ಮೇಲೆ ರಾಮಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಘಟನೆ ವರದಿಯಾಗಿದೆ.

ಹನೂರು ತಾಲೂಕಿನ ರಾಮಾಪುರ ಸಮೀಪದ ಪಳನಿಮೇಡು ಗ್ರಾಮದ ಆರ್ಮುಗಂ (50) ಪತ್ನಿ ಸೆಲ್ವಿ (35) ತಂದೆ ಇರಸೆಗೌಡ (70) ನಾಚಿಮುತ್ತು (50) ರಾಮಸ್ವಾಮಿ (40) ಇರಸಾಯಿ (35) ಸುಶೀಲ (35) ಅರ್ಕಣಿ (45) ಗಾಯಗೊಂಡ ವ್ಯಕ್ತಿಗಳಾಗಿದ್ದಾರೆ.

ಘಟನೆ ವಿವರ: ಪಳನಿಮೇಡು ಗ್ರಾಮದ ಆರ್ಮುಗಂ ಮತ್ತು ನಾಚಿಮುತ್ತು ದಾಯಾದಿಗಳಾಗಿದ್ದು, ಜಮೀನು ವಿಚಾರವಾಗಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಹೀಗಿರುವಾಗಲೇ ಮಧ್ಯಾಹ್ನ 12 ಗಂಟೆ ವೇಳೆ ಆರ್ಮುಗಂ ವಿವಾದಿತ ಜಮೀನಿನಲ್ಲಿ ಕಲ್ಲು ನಾಟುತ್ತಿದ್ದಾಗ ನಾಚಿಮುತ್ತು ಕಡೆಯವರು ವಿರೋಧ ವ್ಯಕ್ತಪಡಿಸಿದ್ದು, ಜಮೀನಿನ ಬಗ್ಗೆ ಮಾತಿನ ಚಕಮಕಿ ಉಂಟಾಗಿದೆ. ನಂತರ ಮಚ್ಚು ದೊಣ್ಣೆ ಕಲ್ಲುಗಳಿಂದ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದು ಹಲವರಿಗೆ ಗಾಯಗಳಾಗಿವೆ ಎನ್ನಲಾಗಿದೆ. 

ವಿಷಯ ತಿಳಿದು ರಾಮಾಪುರ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಗಾಯಗೊಂಡವರನ್ನು ರಾಮಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಗಾಗಿ ದಾಖಲು ಮಾಡಿದ್ದಾರೆ. 

ಈ ಸಂಬಂಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ಎರಡು ಕಡೆಯ 14 ಜನರ ಮೇಲೆ ಮೊಕದ್ದಮೆ ದಾಖಲಿಸಿಕೊಂಡು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News