ಮಂಡ್ಯ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಗಳಗಳನೆ ಅತ್ತ ಸದಸ್ಯೆ: ಹಾಸ್ಟೆಲ್ ವಾರ್ಡನ್ ವಿರುದ್ಧ ಕೊಲೆ ಬೆದರಿಕೆ ಆರೋಪ

Update: 2018-09-06 16:19 GMT

ಮಂಡ್ಯ, ಸೆ.6: ಹಾಸ್ಟೆಲ್ ವಾರ್ಡನ್ ಪುಡಿ ರೌಡಿಗಳಿಂದ ತನಗೆ ಬೆದರಿಕೆ ಹಾಕಿಸಿದ್ದಾರೆಂದು ಆರೋಪಿಸಿ ಜಿಲ್ಲಾ ಪಂಚಾಯತ್ ಸದಸ್ಯೆ ಸಾಮಾನ್ಯ ಸಭೆಯಲ್ಲಿ ಗಳಗಳನೆ ಅತ್ತ ಪ್ರಸಂಗ ಗುರುವಾರ ನಡೆಯಿತು.

ಅಧ್ಯಕ್ಷೆ ನಾಗರತ್ನ ಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ಸಭೆ ವೇಳೆ ನಾಗಮಂಗಲ ತಾಲೂಕು ಮಾಯಿಗೋನಹಳ್ಳಿ ಕ್ಷೇತ್ರದ ಸದಸ್ಯೆ ಸುನಂದಮ್ಮ ಕಣ್ಣೀರು ಹಾಕಿಕೊಂಡೇ ತಮ್ಮ ಅಳಲು ತೋಡಿಕೊಂಡರು.

ತಾಲೂಕಿನ ಹಾಸ್ಟೆಲ್‍ಗಳ ನಿರ್ವಹಣೆ ಸರಿಯಿಲ್ಲ. ತನ್ನ ಕ್ಷೇತ್ರದ ವ್ಯಾಪ್ತಿಯ ಶಿಕಾರಿಪುರ ಹಾಸ್ಟೆಲ್ ನಿರ್ವಹಣೆ ಬಗ್ಗೆ ಹಲವು ದೂರು ನೀಡಿದರೂ ಕ್ರಮವಹಿಸಿಲ್ಲ. ಸದರಿ ಹಾಸ್ಟೆಲ್ ವಾರ್ಡನ್ ಪಾರ್ವತಿ ಲೋಕೇಶ್ ನನ್ನ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಕೆಲವು ಪುಡಿ ರೌಡಿಗಳಿಂದ ಬೆದರಿಕೆ ಹಾಕಿಸುತ್ತಿದ್ದಾರೆ. ಈ ಸಂಬಂದ ಜಿಪಂ ಅಧ್ಯಕ್ಷರು, ಉಪಾಧ್ಯಕ್ಷರು, ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ ಯಾವುದೇ ಕ್ರಮವಹಿಸಿಲ್ಲ. ಚುನಾಯಿತ ಜನಪ್ರತಿನಿಧಿಯಾದ ನನಗೇ ಈ ರೀತಿಯಾದರೆ ಬೇರೆಯವರ ಗತಿಯೇನು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಈ ನಡುವೆ ವಾರ್ಡನ್ ಪಾರ್ವತಿ ಲೋಕೇಶ್ ಅವರು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆಂದು ಸ್ಪಷ್ಟನೆ ನೀಡಲು ಮುಂದಾದ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಾಲತಿ ಅವರನ್ನು ಇತರ ಸದಸ್ಯರು ತರಾಟೆಗೆ ತೆಗೆದುಕೊಂಡರು. ಅಂತಿಮವಾಗಿ ಸದರಿ ವಾರ್ಡನ್ ಪಾರ್ವತಿ ಅವರನ್ನು ಸಭೆಗೆ ಕರೆಸಲು ಹಾಗೂ ಬೇರೆ ಹಾಸ್ಟೆಲ್‍ಗೆ ನಿಯೋಜಿಸಲು ಮತ್ತು ಹಾಸ್ಟೆಲ್‍ಗಳಿಗೆ ಸ್ಥಾಯಿ ಸಮಿತಿ ಸದಸ್ಯರು ದಿಢೀರ್ ಭೇಟಿ ಪರಿಸ್ಥಿತಿ ಅವಲೋಕಿಸಲು ಸಭೆ ನಿರ್ಣಯ ಕೈಗೊಂಡಿತು.

ಜಿಲ್ಲೆಯ ವಿದ್ಯಾರ್ಥಿನಿಲಯಗಳ ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸುವುದರ ಜತೆಗೆ ಅಧಿಕಾರಿಗಳು ಸ್ವಚ್ಛತೆ ಹೆಚ್ಚು ನೀಡಬೇಕು. 
ವಿದ್ಯಾರ್ಥಿನಿಲಯಗಳ ಕಾಮಗಾರಿಗಳು ಗುಣಮಟ್ಟದಲ್ಲಿ ಇರಬೇಕು. ಹಾಸ್ಟೆಲ್‍ಗಳಲ್ಲಿ ಬಯೋಮೆಟ್ರಿಕ್ ಅಳವಡಿಸಬೇಕು. ವಿದ್ಯಾರ್ಥಿಗಳ ತಿಂಡಿ ಹಾಗೂ ಊಟದ ಮೆನು ಚಾರ್ಟ್ ಪ್ರದರ್ಶಿಸಬೇಕು. ಮೇಲಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು ಎಂದು ಅಧ್ಯಕ್ಷೆ ನಾಗರತ್ನ ಸ್ವಾಮಿ ಸೂಚಿಸಿದರು.

ಶುದ್ಧ ಕುಡಿಯುವ ನೀರಿನ ಘಟಕಗಳ ಕಾಮಗಾರಿ ಪೂರ್ಣಗೊಂಡಿರದ ಬಗ್ಗೆ ಅಶೋಕ್, ಬಿ.ಎಲ್.ದೇವರಾಜು, ತ್ಯಾಗರಾಜು ಸೇರಿದಂತೆ ಹಲವು ಸದಸ್ಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ  19 ಶುದ್ಧ ಕುಡಿಯುವ ನೀರಿನ ಘಟಕಗಳು ದುರಸ್ತಿಯಲ್ಲಿದ್ದು ಅಗತ್ಯ ಕ್ರಮವಹಿಸುವುದಾಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ ರಾಮಕೃಷ್ಣ ತಿಳಿಸಿದರು.

ಭೂಸೇನಾ ನಿಗಮಕ್ಕೆ ವಹಿಸಿರುವ ಹಲವಾರು ಕಾಮಗಾರಿಗಳು ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಸರಕಾರ ಅನುದಾನ ನೀಡಿದ್ದರೂ ಕಾಮಗಾರಿ ಆರಂಭಿಸಿಲ್ಲ. ಸಂಬಂಧಿಸಿದ ಅಧಿಕಾರಿ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಸದಸ್ಯರು ಆಗ್ರಹಿಸಿದರು.

ಉಪಾಧ್ಯಕ್ಷೆ ಗಾಯತ್ರಿ ರೇವಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಚ್.ಜಿ.ಮಂಜು, ಶಿವಪ್ರಕಾಶ್, ರವಿ, ಜಿಪಂ ಸಿಇಒ ಕೆ.ಯಾಲಕ್ಕಿಗೌಡ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News