ಅಥ್ಲೆಟಿಕ್ಸ್ ನಲ್ಲಿ ಹಿಮಾದಾಸ್ ಮಾಡಿದ ಸಾಧನೆ ಮಕ್ಕಳಿಗೆ ಸ್ಫೂರ್ತಿದಾಯಕ: ಶಾಸಕ ಆರ್.ನರೇಂದ್ರ

Update: 2018-09-06 16:54 GMT

ಹನೂರು,ಸೆ.6: ಅಥ್ಲೆಟಿಕ್ಸ್ ನಲ್ಲಿ ಓಟದ ರಾಣಿ ಹಿಮಾದಾಸ್ ಮಾಡಿದ ಗಮನಾರ್ಹ ಸಾಧನೆ ಪ್ರತಿ ಮಕ್ಕಳಿಗೂ ಸ್ಫೂರ್ತಿದಾಯಕ ಎಂದು ಶಾಸಕ ಆರ್.ನರೇಂದ್ರ ತಿಳಿಸಿದರು. 

ಪಟ್ಟಣದ ಮಲೆಮಹದೇಶ್ವರ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ತಾಲೂಕು ಮಟ್ಟದ ಕ್ರೀಡಾಕೂಟದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಅಥ್ಲೆಟಿಕ್ಸ್ ನಲ್ಲಿ ಗಮನಾರ್ಹ ಸಾಧನೆ ಮಾಡಿದ ಹಿಮಾದಾಸ್‍ರವರ ಶ್ರಮ, ಶ್ರದ್ಧೆಯೇ ಅವರ ಪ್ರಖ್ಯಾತಿಗೆ ಕಾರಣ. ಬಾಲ್ಯದ ವಿದ್ಯಾರ್ಥಿ ಜೀವನದಿಂದಲೇ ಶಿಸ್ತು, ಸಂಯಮ, ಶ್ರಮವನ್ನು ಮೈಗೂಡಿಸಿಕೊಂಡರೆ ಯಾವುದೇ ರಂಗದಲ್ಲಿ ಎತ್ತರಕ್ಕೆ ಬೆಳೆಯಬಹುದು. ಶಿಕ್ಷಣ ಎಂದರೆ ಕೇವಲ ಓದಿ ರ್ಯಾಂಕ್‍ಗಳಿಸುವುದಷ್ಟೆ ಅಲ್ಲ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ಮಾಡುವತ್ತ ವಿದ್ಯಾರ್ಥಿಗಳು ಗಮನಹರಿಸಬೇಕು. ಹೋಬಳಿ ಹಾಗೂ ತಾಲೂಕು ಮಟ್ಟದ ಕ್ರೀಡಾಕೂಟಗಳು ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಹೊರತರುವುದಕ್ಕೆ ಉತ್ತಮ ವೇದಿಕೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ತಾ.ಪಂ ಅಧ್ಯಕ್ಷ ರಾಜು ಕ್ರೀಡಾಕೂಟವನ್ನು ಉದ್ದೇಶಿಸಿ ಮಾತನಾಡಿದರು. ಹನೂರು ಶೈಕ್ಷಣಿಕ ವಲಯದ ವಿವಿಧ ಶಾಲೆಯ ವಿದ್ಯಾರ್ಥಿಗಳು ಕ್ರೀಡಾಕೂಟದ ಪಥ ಸಂಚಲನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕ್ರೀಡಾಕೂಟಕ್ಕೆ ವಿಶೇಷ ಮೆರುಗನ್ನು ನೀಡಿದರು. 

ಕಳೆದ 6 ವರ್ಷಗಳಿಂದ ಹನೂರು ವಲಯದ ದೈಹಿಕ ಪರಿವೀಕ್ಷಕರಾಗಿ ಸೇವೆ ಸಲ್ಲಿಸಿದ ತೇಜಪಾಲ್‍ರವರಿಗೆ ಸಮಾರಂಭದಲ್ಲಿ ಇಲಾಖೆ ವತಿಯಿಂದ ಗೌರವ ಸಲ್ಲಿಸಲಾಯಿತು  

ಈ ಸಂದರ್ಭ ಜಿ.ಪಂ.ಅಧ್ಯಕ್ಷೆ ಶಿವಮ್ಮಕೃಷ್ಣ, ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಮರಗದಮಣಿ, ಸದಸ್ಯ ಮಂಜುಳರಂಗಸ್ವಾಮಿ, ತಾ.ಪಂ.ಅಧ್ಯಕ್ಷ ರಾಜು, ಉಪಾಧ್ಯಕ್ಷೆ ಲತಾರಾಜಣ್ಣ, ಸದಸ್ಯೆ ರುಕ್ಮಿಣಿ, ಪ.ಪಂ.ಅಧ್ಯಕ್ಷೆ ಮಮತಮಹಾದೇವ, ಮುಖಂಡರುಗಳಾದ ಪಾಳ್ಯ ಕೃಷ್ಣ, ರಾಜಣ್ಣ, ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಜಾರ್ಜ್‍ಫಿಲಿಪ್, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ಸ್ವಾಮಿ, ಶಿಕ್ಷಣ ಸಂಯೋಜನಾಧಿಕಾರಿ ಕಿರಣ್, ವಿವಿಧ ಶಿಕ್ಷಕರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ದೈಹಿಕ ಶಿಕ್ಷಕ ತೇಜಪಾಲ್, ಸೇಂದಿಲ್, ದರ್ಮಲಿಂಗಮ್, ಸೇರಿದಂತೆ ಹನೂರು ಕ್ಷೇತ್ರದ ಯೂತ್ ಕಾಂಗ್ರೇಸ್ ಅಧ್ಯಕ್ಷ ರಾಯಿಲ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News