ಶಿವಮೊಗ್ಗ: ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳ ಕಾದಾಟ; ಓರ್ವನಿಗೆ ಚೂರಿ ಇರಿತ

Update: 2018-09-06 17:07 GMT

ಶಿವಮೊಗ್ಗ, ಸೆ. 6: ಕಾಲೇಜು ಕ್ಯಾಂಪಸ್ ಆವರಣದಲ್ಲಿ ಜೂನಿಯರ್ ಹಾಗೂ ಸೀನಿಯರ್ ವಿದ್ಯಾರ್ಥಿಗಳ ನಡುವಿನ ಕ್ಷುಲ್ಲಕ ಜಟಾಪಟಿ, ಸೀನಿಯರ್ ವಿದ್ಯಾರ್ಥಿಯೋರ್ವನ ಚೂರಿ ಇರಿತದಲ್ಲಿ ಅಂತ್ಯಗೊಂಡಿರುವ ಘಟನೆ ಶಿವಮೊಗ್ಗ ನಗರದಲ್ಲಿ ಗುರುವಾರ ನಡೆದಿದೆ.

ವಿದ್ಯಾನಗರ ಬಳಿಯಿರುವ ಸಹ್ಯಾದ್ರಿ ಕಾಲೇಜ್ ಆವರಣದಲ್ಲಿ ಬೆಳಿಗ್ಗೆ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಅಂತಿಮ ವರ್ಷದ ಬಿಎಸ್ಸಿ ವಿದ್ಯಾರ್ಥಿ, ಭದ್ರಾವತಿ ಮೂಲದ ಅವಿನಾಶ್ (19) ಚೂರಿ ಇರಿತಕ್ಕೊಳಗಾದ ಯುವಕ ಎಂದು ಗುರುತಿಸಲಾಗಿದೆ. ಅವಿನಾಶ್ ಹೊಟ್ಟೆಯ ಭಾಗದ ಬಳಿ ಇರಿಯಲಾಗಿದೆ. ಆತ ಪ್ರಾಣಾಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ ಎನ್ನಲಾಗಿದೆ. 

ಅದೇ ಕಾಲೇಜ್‍ನಲ್ಲಿ ದ್ವಿತೀಯ ಬಿಎಸ್ಸಿ ಅಭ್ಯಾಸ ಮಾಡುತ್ತಿರುವ ಶಿಕಾರಿಪುರ ಮೂಲದ ಗೋಕುಲ್ (18) ಹಾಗೂ ಆತನ ಇನ್ನೋರ್ವ ಸಹಪಾಠಿ ಚಾಕುವಿನಿಂದ ಇರಿದ ಆರೋಪಿತ ವಿದ್ಯಾರ್ಥಿಗಳಾಗಿದ್ದಾರೆ. ಘಟನೆಯ ನಂತರ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಪೊಲೀಸರು ಕ್ರಮಕೈಗೊಂಡಿದ್ದಾರೆ. 

ಘಟನೆಯಿಂದ ಕಾಲೇಜು ಆವರಣದಲ್ಲಿ ಕೆಲ ಸಮಯ ಗೊಂದಲ-ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಸಬ್ ಇನ್ಸ್‍ಪೆಕ್ಟರ್ ಎಸ್.ಎಸ್.ಸುನೀಲ್‍ಕುಮಾರ್ ಘಟನಾ ಸ್ಥಳಕ್ಕೆ ಭೇಟಿಯಿತ್ತು ಪರಿಶೀಲನೆ ನಡೆಸಿದರು. ಈ ಸಂಬಂಧ ಆರೋಪಿ ಗೋಕುಲ್ ಹಾಗೂ ಆತನ ಇನ್ನೋರ್ವ ಸಹಪಾಠಿಯ ವಿರುದ್ಧ ದೂರು ದಾಖಲಾಗಿದ್ದು, ಇದರ ಆಧಾರದ ಮೇಲೆ ಕೋಟೆ ಠಾಣೆ ಪೊಲೀಸರು ಐಪಿಎಸ್ ಕಲಂ 302, 504, 506 ಸೇರಿದಂತೆ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ಮುಂದುವರಿಸಿದ್ದಾರೆ. 

ಘಟನೆಯ ಹಿನ್ನೆಲೆ: ಬಿಎಸ್ಸಿ ವಿಭಾಗದ ದ್ವಿತೀಯ ವರ್ಷದ ಕಿರಿಯ ಹಾಗೂ ತೃತೀಯ ವರ್ಷದ ಹಿರಿಯ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ, ಕ್ಷುಲ್ಲಕ ವಿಷಯಕ್ಕೆ ಸಂಬಂಧಿಸಿದಂತೆ ಕೆಲ ದಿನಗಳಿಂದ ವಾದ-ವಿವಾದ ನಡೆಯುತ್ತಿತ್ತು. ಮೂರು ದಿನಗಳ ಹಿಂದೆ ಇದು ವಿಕೋಪಕ್ಕೆ ತಿರುಗಿತ್ತು. ಕಾಲೇಜು ಪ್ರಾಂಶುಪಾಲರು, ಉಪನ್ಯಾಸಕರು ಎರಡು ಗುಂಪುಗಳ ವಿದ್ಯಾರ್ಥಿಗಳ ಜೊತೆ ಸಂಧಾನ ನಡೆಸಲು ಯತ್ನಿಸಿದ್ದರು ಎನ್ನಲಾಗಿದೆ. 

ಇದೇ ವಿಷಯಕ್ಕೆ ಸಂಬಂಧಿಸಿದಂತೆ, ಕಾಲೇಜು ಆವರಣದಲ್ಲಿ ಗುರುವಾರ ಕೂಡ ಎರಡು ಗುಂಪುಗಳ ವಿದ್ಯಾರ್ಥಿಗಳ ನಡುವೆ ಮತ್ತೆ ಜಗಳ ಪ್ರಾರಂಭವಾಗಿದೆ. ಈ ವೇಳೆ ಆರೋಪಿ ಗೋಕುಲನು ತನ್ನ ಬಳಿಯಿದ್ದ ಚೂರಿಯಿಂದ ಹಿರಿಯ ವಿದ್ಯಾರ್ಥಿ ಅವಿನಾಶ್ ಹೊಟ್ಟೆಗೆ ಇರಿದಿದ್ದಾನೆ ಎಂದು ಮೂಲಗಳು ಮಾಹಿತಿ ನೀಡಿವೆ. ಪೊಲೀಸರ ತನಿಖೆಯಿಂದ ಇನ್ನಷ್ಟೆ ಪ್ರಕರಣದ ವಿವರ ತಿಳಿದುಬರಬೇಕಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News