ಎಲ್ಲರೂ ನೇತ್ರದಾನದ ನಿರ್ಧಾರ ಕೈಗೊಂಡರೆ 11 ದಿನಗಳಲ್ಲಿ ದೇಶದಲ್ಲಿ ಅಂಧತ್ವ ನಿವಾರಣೆ: ನೇತ್ರತಜ್ಞೆ ಡಾ. ಸಂಗೀತ

Update: 2018-09-06 17:58 GMT

ದಾವಣಗೆರೆ,ಸೆ.6: ಪ್ರತಿಯೊಬ್ಬರು ನೇತ್ರದಾನ ಮಾಡುವ ನಿರ್ಧಾರ ಕೈಗೊಂಡರೆ ಕೇವಲ 11 ದಿನಗಳಲ್ಲಿ ದೇಶದಲ್ಲಿ ಅಂಧತ್ವ ನಿವಾರಣೆ ಮಾಡಬಹುದು ಎಂದು ಹರಪನಹಳ್ಳಿ ನೇತ್ರತಜ್ಞೆ ಡಾ. ಸಂಗೀತ ಕೊಲ್ಹಾಪುರಿ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಗುರುವಾರ ರಾಷ್ಟ್ರೀಯ ಅಂಧತ್ವ ಮತ್ತು ದೃಷ್ಟಿದೋಷ ನಿಯಂತ್ರಣಾಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ವತಿಯಿಂದ ಹಮ್ಮಿಕೊಂಡಿದ್ದ 33ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ದಿನಾಚರಣೆ ಅಂಗವಾಗಿ ನಡೆದ ಜಾಥಾ ಕಾರ್ಯಕ್ರಮದ ನಂತರ ನಡೆದ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಭಾರತದಲ್ಲಿ ಇತ್ತೀಚೆಗೆ ನೇತ್ರದಾನ ಕುರಿತು ಹೆಚ್ಚೆಚ್ಚು ಕಾರ್ಯಕ್ರಮ, ಅರಿವು ಮೂಡಿಸಲಾಗುತ್ತಿದೆ. ಇದರಿಂದ ನೇತ್ರದಾನಿಗಳು ಹೆಚ್ಚಾಗುತ್ತಿದ್ದಾರೆ. ಆದರೆ, ಭಾರತದ ಜನಸಂಖ್ಯೆಗೆ ಹೋಲಿಸಿದರೆ ದಾನಿಗಳು ತೀರಾ ಕಡಿಮೆ. ಭಾರತದಲ್ಲಿ ದಿನನಿತ್ಯ 62,389 ವ್ಯಕ್ತಿಗಳು ಸಾವನ್ನಪ್ಪಿದರೆ, 86,8532 ಮಕ್ಕಳ ಜನನವಾಗುತ್ತದೆ. ಆದ್ದರಿಂದ ಇರುವ ಪ್ರತಿಯೊಬ್ಬರೂ ತಮ್ಮ ಸಾವಿನ ಮುನ್ನ ಅಥವಾ ಸಾವಿನ ನಂತರದಲ್ಲಿ ನೇತ್ರದಾನ ಮಾಡಲು ಮುಂದಾದರೆ, ಕೇವಲ 11 ದಿನಗಳಲ್ಲಿ ಇಡೀ ಭಾರತದಲ್ಲಿರುವ ಎಲ್ಲ ಅಂಧರು ದೃಷ್ಟಿಯನ್ನು ಹೊಂದುತ್ತಾರೆ ಎಂದು ಅವರು ವಿವರಿಸಿದರು.

ದೇಶದಲ್ಲಿ 15 ಮಿಲಿಯನ್ ಜನರು ದೃಷ್ಟಿದೋಷದಿಂದ ಬಳಲುತ್ತಿದ್ದು, ಅದರಲ್ಲಿ 2.5 ಲಕ್ಷ ಮಕ್ಕಳೇ ಇದ್ದಾರೆ. ಆದ್ದರಿಂದ ದೇಹದ ಪಂಚೇಂದ್ರಿಯಗಳಲ್ಲಿ ಅತ್ಯಂತ ಪ್ರಮುಖವಾದ ಹಾಗೂ ಆಯುಷ್ಯ ಮುಗಿದ ಮೇಲೆ ಮಣ್ಣು, ಬೆಂಕಿ ಪಾಲಾಗುವ ನಿಮ್ಮ ಅಮೂಲ್ಯ ಕಣ್ಣುಗಳನ್ನು ಮತ್ತೊಬ್ಬರಿಗೆ ದಾನ ಮಾಡುವ ಶಪಥಗೈಯುವ ಮೂಲಕ ಇನ್ನೊಂದು ಜೀವಕ್ಕೆ ಬೆಳಕಾಗಬೇಕು ಎಂದು ಅವರು ಮನವಿ ಮಾಡಿದರು.   

ಕಣ್ಣಿನ ವಿಭಾಗ ಮುಖ್ಯಸ್ಥೆ ಡಾ. ಶಾಂತಲಾ ಅರುಣ್‍ಕುಮಾರ್, ಹಿರಿಯ ನೇತ್ರತಜ್ಞ ಡಾ. ಶ್ರೀಮಂತ ಸಿದ್ದಪ್ಪ ಕೋಳ್‍ಕೂರ್, ಮತ್ತೋರ್ವ ನೇತ್ರತಜ್ಞೆ ಡಾ. ಮೇಘನಾ ಪಾಟೀಲ್ ಮಾತನಾಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ತ್ರಿಫುಲಾಂಭ ಅಧ್ಯಕ್ಷತೆ ವಹಿಸಿದ್ದರು. ಬಾಪೂಜಿ ಕಣ್ಣಿನ ಆಸ್ಪತ್ರೆ ಪ್ರಾಧ್ಯಾಪಕ ಡಾ. ರವೀಂದ್ರ ಬಣಕಾರ್ ಕಾರ್ಯಕ್ರಮ ಉದ್ಘಾಟಿಸಿದರು. ಚಿಗಟೇರಿ ಜಿಲ್ಲಾಸ್ಪತ್ರೆ ಅಧೀಕ್ಷಕಿ ಡಾ. ನೀಲಾಂಬಿಕೆ ಎಚ್.ಡಿ., ನಿವಾಸಿ ವೈದ್ಯಾಧಿಕಾರಿ ಡಾ.ಎಚ್.ಡಿ. ವಿಶ್ವನಾಥ್, ಡಾ.ಎಚ್.ಎಂ. ರವೀಂದ್ರನಾಥ್, ಡಾ. ಸೀತಾರಾಮ್ ಬಿ.ಎ., ಡಾ. ದಾಕ್ಷಾಯಿಣಿ, ಡಾ. ನಾಗವೇಣಿ, ಡಾ. ಚೇತನ್, ಸಂಜಯ್ ಪಟಕೆ ಮತ್ತಿತರರಿದ್ದರು.

ಸುನಿತಾ ಪ್ರಾರ್ಥಿಸಿದರು. ಕೆ.ಎಂ. ಪರಮೇಶ್ವರಪ್ಪ ಸ್ವಾಗತಿಸಿದರು. ಎಸ್.ಕೆ. ರಂಗನಾಥ್ ನಿರೂಪಿಸಿದರು. ಬಸವರಾಜ್ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News