ಮಡಿಕೇರಿ: ಪ್ರಕೃತಿಯ ಕೋಪದ ನಡುವೆಯೂ ವಿವಾಹದ ಸಂಭ್ರಮ

Update: 2018-09-06 18:08 GMT

ಮಡಿಕೇರಿ, ಸೆ.6: ಕೊಡಗಿನಲ್ಲಿ ಪ್ರಕೃತಿ ಮುನಿಸಿಕೊಂಡ ಪರಿಣಾಮ ಶುಭ ಕಾರ್ಯಗಳಿಗೂ ವಿಘ್ನ ಎದುರಾಗಬಹುದೆನ್ನುವ ಆತಂಕದ ನಡುವೆಯೇ ಹೃದಯವಂತ ಸಮಾಜದ ಸಹಕಾರದಿಂದ ಸಂತ್ರಸ್ತ ಕುಟುಂಬಗಳ ಮಕ್ಕಳ ವಿವಾಹ ಮಹೋತ್ಸವಗಳು ನಿರ್ವಿಘ್ನವಾಗಿ ನಡೆಯುತ್ತಿವೆ. 

ಮಹಾಮಳೆಯ ದಾಳಿಯ ನಂತರ ಜಿಲ್ಲೆಯಲ್ಲಿ ಎರಡು ಜೋಡಿಯ ವಿವಾಹ ಸಾರ್ವಜನಿಕರ ಸಹಕಾರದಿಂದಲೇ ನಡೆದಿದ್ದು, ಗುರುವಾರ ಮೂರನೇ ಜೋಡಿಯ ವಿವಾಹ ಸಮಾರಂಭ ಕೂಡ ವಿವಿಧ ಸಂಘ, ಸಂಸ್ಥೆಗಳ ಸಹಾಯ ಹಸ್ತದ ಮೂಲಕವೇ ನೆರವೇರಿತು.

ಆ.17 ರಂದು ಸುರಿದ ಧಾರಾಕಾರ ಮಳೆಗೆ ಎರಡನೇ ಮೊಣ್ಣಂಗೇರಿಯ ಮನೆಯೊಂದು ಕೆಸರಿನಾರ್ಭಟದಲ್ಲಿ ಕೊಚ್ಚಿ ಹೋಗಿತ್ತು. ಮನೆಯೊಂದಿಗೆ ಮದುವೆಗಾಗಿ ಸೇರಿಸಿಟ್ಟಿದ್ದ ಚಿನ್ನಾಭರಣ ಹಾಗೂ ಇತರ ವಸ್ತುಗಳು ಕೂಡ ನೀರು ಪಾಲಾಗಿತ್ತು. ಎಲ್ಲವನ್ನು ಕಳೆದುಕೊಂಡ ಆ ಮನೆಯ ನಿವಾಸಿಗಳು ಕಲ್ಲುಗುಂಡಿ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದರು. ವಿವಾಹ ನಿಶ್ಚಯವಾಗಿದ್ದ ವಾರಿಜಳ ಸ್ಥಿತಿ ಕಣ್ಣೀರ ಕೋಡಿಯಾಗಿತ್ತು. ಇನ್ನು ನನ್ನ ಬಾಳಿನಲ್ಲಿ ಮದುವೆಯ ಗಳಿಗೆ ಮತ್ತೆ ಕೂಡಿ ಬರುವುದೇ ಅಥವಾ ಇಲ್ಲವೇ ಎಂದು ಚಿಂತೆಯಲ್ಲಿದ್ದಾಗಲೇ ಸ್ಥಳೀಯ ಸಂಘ, ಸಂಸ್ಥೆಗಳ ಪ್ರಮುಖರು ವಾರಿಜಾಳಿಗೆ ವಿವಾಹ ಭಾಗ್ಯವನ್ನು ಕಲ್ಪಿಸಿಕೊಟ್ಟಿದ್ದಾರೆ. 

ವಾರಿಜಳ ಮದುವೆ ಪುಣೆ ಮೂಲದ ರುದ್ರೇಶ್ ಅವರೊಂದಿಗೆ ನಗರದ ಅಶ್ವಿನ ಆಸ್ಪತ್ರೆ ಆವರಣದಲ್ಲಿರುವ ಗಣಪತಿ ದೇವಾಲಯದಲ್ಲಿ ನೆರವೇರಿತು.  ಬೆಂಗಳೂರಿನಲ್ಲಿ ನರ್ಸ್ ಉದ್ಯೋಗದಲ್ಲಿರುವ ವಾರಿಜ, ಪುಣೆ ಮೂಲದ ರುದ್ರೇಶ್‍ನನ್ನು ವರಿಸಿದ್ದಾರೆ. ಬುಧವಾರ ಸಂಜೆ ಸ್ಥಳೀಯರು ಪರಿಹಾರ ಕೇಂದ್ರದಲ್ಲಿ ಮದರಂಗಿ ಶಾಸ್ತ್ರ ನಡೆಸಿದರು. 

ಸಂಘ, ಸಂಸ್ಥೆಗಳ ಕಾರ್ಯಕರ್ತರು, ಕುಟುಂಬಸ್ಥರು ಹಾಗೂ ಬಂಧು, ಬಳಗ ಸರಳ ರೀತಿಯಲ್ಲಿ ನಡೆದ ವಿವಾಹ ಸಮಾರಂಭಕ್ಕೆ ಸಾಕ್ಷಿಯಾದರು. ನವ ಜೀವನಕ್ಕೆ ಕಾಲಿರಿಸಿದ ವಾರಿಜ ಹಾಗೂ ರುದ್ರೇಶ್ ಸಂಘ, ಸಂಸ್ಥೆ ಮತ್ತು ಸಾರ್ವಜನಿಕರ ಸಹಕಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದರು. 
    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News