ಹಾಲು ಉತ್ಪಾದನೆಗೆ ಸರಕಾರದ ಸಹಕಾರ ಸದಾ ಇರಲಿದೆ: ಉಪಮುಖ್ಯಮಂತ್ರಿ ಪರಮೇಶ್ವರ್

Update: 2018-09-06 18:12 GMT

ತುಮಕೂರು,ಸೆ.6: ಹಾಲು ಉತ್ಪಾದನೆ ಇಂದು ಲಾಭದಾಯಕ ಉದ್ಯಮವಾಗಿದ್ದು, ಮಾರುಕಟ್ಟೆ ದರವನ್ನು ಇನ್ನಷ್ಟು ಹೆಚ್ಚಿಸುವ ಅಗತ್ಯವಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.

ಕೊರಟಗೆರೆ ತಾಲೂಕಿನ ಕ್ಯಾಮೇನಹಳ್ಳಿ, ಬಡಚೋಡನಹಳ್ಳಿ, ದೊಡ್ಡರಸನಹಳ್ಳಿ,ಅರಳಾಪುರ ಹಾಗೂ ಕೊಂಡಾವಾಡಿಯಲ್ಲಿನ ಹಾಲು ಉತ್ಪಾದಕರ ಸಂಘದ ಕಟ್ಟಡ ಉದ್ಘಾಟನೆಯನ್ನು ಒಂದೇ ಸ್ಥಳದಲ್ಲಿ ನೆರವೇರಿಸಿ, ಬಳಿಕ ಮಾತನಾಡಿದ ಅವರು, 80ನೇ ದಶಕದಲ್ಲಿ ಹಾಲು ಉತ್ಪಾದನೆ ದೊಡ್ಡ ಆಂದೋಲನದ ರೀತಿ ಶುರುವಾಗಿ, ಇಂದು ಲಾಭದಾಯಕ ಉದ್ಯಮವಾಗಿ ಪರಿಣಮಿಸಿದೆ. ಇಡೀ ವಿಶ್ವದಲ್ಲಿ ಅತಿ ಹೆಚ್ಚು ಹಾಲು ಉತ್ಪಾದನೆ ಮಾಡುವ ರಾಷ್ಟ್ರ ಭಾರತ. ನಮ್ಮಲ್ಲಿ ದಿನಕ್ಕೆ 76 ಲಕ್ಷಕ್ಕೂ ಹೆಚ್ಚು ಲೀಟರ್ ಹಾಲು ಉತ್ಪಾದಿಸಲಾಗುತ್ತಿದೆ. ಈ ಪ್ರಮಾಣ ಇನ್ನಷ್ಟು ಹೆಚ್ಚಲಿದೆ ಎಂದರು.

ನಮ್ಮ ಸರಕಾರ ರೈತರ ಪರವಿದೆ. ಹಿಂದೆ ಕೇಂದ್ರದಲ್ಲಿ‌ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ವೇಳೆ 72 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿದ್ದರು. ಕಳೆದ ಸಿದ್ದರಾಮಯ್ಯ ಅವರ ಸರಕಾರ ಕೂಡ ಸಹಕಾರ ಬ್ಯಾಂಕ್ ನಲ್ಲಿನ 10 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿದ್ದಾರೆ. ಅಂತೆಯೇ ಸಮ್ಮಿಶ್ರ ಸರಕಾರ ಕೂಡ 49 ಸಾವಿರ ಕೋಟಿ ರೂ. ರೈತತ ಸಾಲವನ್ನು ಹಂತಹಂತವಾಗಿ ಮನ್ನಾ ಮಾಡಲಿದೆ. ನಮ್ಮದು ಸದಾ ರೈತರ ಪರ ಸರಕಾರ ಎಂದರು.  ಇದರ ಜೊತೆಗೆ ಕೈಸಾಲ ಮಾಡಿಕೊಂಡಿರುವವರ ಸಾಲವನ್ನೂ ಮನ್ನಾ ಮಾಡುವ ಋಣಮುಕ್ತ ಕಾಯಿದೆಯನ್ನು ಮಂಜೂರು ಮಾಡಲು ಹೊರಟಿದ್ದೇವೆ ಎಂದರು. 

ರೈತರ ಬದುಕು ಹಸನಾಗಲು ಹಾಲು ಉತ್ಪಾದನೆ ಮಹತ್ವದ ಸ್ಥಾನದಲ್ಲಿದೆ. ಹೀಗಾಗಿ ಈ ಉದ್ದಿಮೆ ಇನ್ನಷ್ಟು ಹೆಚ್ಚು ಬೆಳೆಯಲು ನಮ್ಮ ಸರಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಂಸದ ಮುದ್ದಹನುಮೇಗೌಡ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News