ಇರಾನ್ ನಿಂದ ಚಾಬಹಾರ್ ಬಂದರು ಕಾರ್ಯಾಚರಣೆ ಶೀಘ್ರ ಭಾರತಕ್ಕೆ ಹಸ್ತಾಂತರ

Update: 2018-09-07 04:56 GMT

ಹೊಸದಿಲ್ಲಿ, ಸೆ.7: ಮಧ್ಯಂತರ ಒಪ್ಪಂದಕ್ಕೆ ಅನುಗುಣವಾಗಿ ಇರಾನಿನ ಆಯಕಟ್ಟಿನ ಚಾಬಹಾರ್ ಬಂದರನ್ನು ಕಾರ್ಯಾಚರಣೆಗಾಗಿ ಒಂದು ತಿಂಗಳೊಳಗೆ ಭಾರತೀಯ ಕಂಪನಿಗೆ ಹಸ್ತಾಂತರಿಸಲಾಗುವುದು ಎಂದು ಇರಾನಿನ ರಸ್ತೆ ಮತ್ತು ನಗರಾಭಿವೃದ್ಧಿ ಸಚಿವ ಅಬ್ಬಾಸ್ ಅಖೌಂಡಿ ಪ್ರಕಟಿಸಿದ್ದಾರೆ.

ನೀತಿ ಆಯೋಗ ಆಯೋಜಿಸಿದ್ದ ಸಂಚಾರ ಶೃಂಗದಲ್ಲಿ ಭಾರತ ಸರ್ಕಾರದ ಆಹ್ವಾನದ ಮೇರೆಗೆ ಆಗಮಿಸಿರುವ ಅವರು, "ಒಂದೂವರೆ ವರ್ಷದ ಅವಧಿಗೆ ಭಾರತದ ಜತೆ ಮಾಡಿಕೊಂಡ ಮಧ್ಯಂತರ ಒಪ್ಪಂದಕ್ಕೆ ಅನುಗುಣವಾಗಿ ಭಾರತೀಯ ಕಂಪನಿಗೆ ಚಾಬಹಾರ್ ಬಂದರು ಹಸ್ತಾಂತರಕ್ಕೆ ನಾವು ಸಜ್ಜಾಗಿದ್ದೇವೆ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಭಾರತದ ಪಶ್ಚಿಮ ಕರಾವಳಿಯಿಂದ ಸುಲಭವಾಗಿ ಚಾಬಹಾರ್ ಜತೆ ಸಂಪರ್ಕ ಸಾಧಿಸಬಹುದಾಗಿದ್ದು, ಇದಕ್ಕಿಂತ 80 ಕಿಲೋಮೀಟರ್ ದೂರದಲ್ಲಿರುವ ಪಾಕಿಸ್ತಾನದ ಗ್ವದಾರ್ ಬಂದರಿಗೆ ಪೈಪೋಟಿ ಎಂದು ಇದು ಬಿಂಬಿತವಾಗಿದೆ. ಭಾರತದ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಜತೆ ಮಾತುಕತೆ ನಡೆಸಿದ ಬಳಿಕ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅಖೌಂಡಿ, "ನಾವು ಈಗಾಗಲೇ ಒಂದು ಹೆಜ್ಜೆ ಮುಂದಿಟ್ಟಿದ್ದೇವೆ. ನಾವು ಭಾರತಕ್ಕೆ ಬ್ಯಾಂಕಿಂಗ್ ಚಾನಲ್ ಆರಂಭಿಸಬೇಕಿದೆ. ಈ ಕಾರ್ಯ ಮುಗಿದಿದ್ದು, ಭಾರತ ಕೂಡಾ ಅಧಿಕೃತವಾಗಿ ಇದನ್ನು ಒಪ್ಪಿಕೊಂಡಿದೆ. ಭಾರತ ಆರಂಭಿಸಿರುವ ಬ್ಯಾಂಕಿಂಗ್ ಚಾನಲ್ ಅನ್ನು ಇರಾನಿನ ಸೆಂಟ್ರಲ್ ಬ್ಯಾಂಕ್ ಸ್ವೀಕರಿಸಿದೆ" ಎಂದು ವಿವರಿಸಿದರು.

2017ರ ಡಿಸೆಂಬರ್‌ನಲ್ಲಿ ಚಾಬಹಾರ್ ಬಂದರಿನ ಮೊದಲ ಹಂತವನ್ನು ಇರಾನ್ ಅಧ್ಯಕ್ಷ ಹಸನ್ ರೊಹಾನಿ ಉದ್ಘಾಟಿಸಿದ್ದರು. ಇದು ಭಾರತಕ್ಕೆ ಪಾಕಿಸ್ತಾನದ ಬಂದರು ತಲುಪದೇ ಇರಾನ್ ಹಾಗೂ ಅಪ್ಘಾನಿಸ್ತಾನ ಜತೆ ಸಂಪರ್ಕ ಸಾಧಿಸಲು ಆಯಕಟ್ಟಿನ ಬಂದರು ಆಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News