ಚಾಮರಾಜನಗರ: ಶಿಕ್ಷಣ ಸಚಿವರ ತವರು ಕ್ಷೇತ್ರದಲ್ಲೇ ರುದ್ರಭೂಮಿ ಇಲ್ಲ !

Update: 2018-09-07 14:28 GMT

ಚಾಮರಾಜಮಗರ,ಸೆ.7: ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಸಚಿವ ಎನ್.ಮಹೇಶ್ ಪ್ರತಿನಿಧಿಸುವ ಕೊಳ್ಳೇಗಾಲ ಕ್ಷೇತ್ರದ ಮಾಂಬಳ್ಳಿ ಗ್ರಾಮದಲ್ಲಿ ಹೆಚ್ಚಾಗಿ ಹಿಂದುಳಿದ ವರ್ಗಗಳ ಮತ್ತು ದಲಿತರು ವಾಸ ಮಾಡುತ್ತಿದ್ದಾರೆ. ಆದರೆ ಇಲ್ಲಿನ ಜನರು ಶವ ಸಂಸ್ಕಾರಕ್ಕೆ ನದಿ ನೀರಿನಲ್ಲೇ ಶವ ಹೊತ್ತು ಸಾಗಬೇಕಾಗಿದ್ದು, ಎರಡು ಮೂರು ಕಿಲೋಮೀಟರ್ ನಷ್ಟು ನಡೆಯಬೇಕಾದ ಅನಿವಾರ್ಯತೆ ಎದುರಾಗಿದೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಕ್ಷೇತ್ರದ ಮಾಂಬಳ್ಳಿ ಗ್ರಾಮದಲ್ಲಿ ಯಾರಾದರೂ ಸಾವನ್ನಪ್ಪಿದರೆ ಅವರ ಶವ ಸಂಸ್ಕಾರ ಮಾಡಲು ಗ್ರಾಮದಲ್ಲಿ ರುದ್ರಭೂಮಿಯೇ ಇಲ್ಲ. ಅಲ್ಲದೇ, ಮೃತರ ಶವವನ್ನು ಹೊತ್ತು ಸುವರ್ಣಾವತಿ ಹೊಳೆ ನದಿ ನೀರು ದಾಟಿ ಹೋಗುವ ಧಯನೀಯ ಸ್ಥಿತಿ ಗ್ರಾಮಸ್ಥರದ್ದಾಗಿದೆ. ಇಂದು ದಲಿತರೊಬ್ಬರು ಸಾವನ್ನಪ್ಪಿದ್ದು, ಅವರ ಶವ ಸಂಸ್ಕಾರಕ್ಕೆ ಶವವನ್ನು ಹೊತ್ತುಕೊಂಡೇ ನಡು ಮಟ್ಟದ ನೀರಿನಲ್ಲೇ ಸಾಗಬೇಕಾದ ಪರಿಸ್ಥಿತಿ ಎದುರಾಗಿತ್ತು.

'ಗ್ರಾಮದಲ್ಲಿ ಹಲವಾರು ವರ್ಷಗಳಿಂದ ರುಧ್ರಭೂಮಿಗಾಗಿ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ ಅದು ಪ್ರಯೋಜನಕ್ಕೆ ಬಂದಿಲ್ಲ. ಅಲ್ಲದೇ ಮಾಂಬಳ್ಳಿ ಗ್ರಾಮದವರೇ ಆದ ಜಯಣ್ಣರವರು ಎರಡು ಬಾರಿ ಶಾಸಕರಾಗಿದ್ದಾಗಲೂ ಇದೇ ಸಮಸ್ಯೆ ಎದುರಾಗಿತ್ತು. ಆದರೆ ಈಗ ಕೊಳ್ಳೇಗಾಲ ಕ್ಷೇತ್ರದಿಂದ ಪ್ರಾಥಮಿಕ ಹಾಗೂ ಪ್ರೌಡ ಶಿಕ್ಷಣ ಸಚಿವ ಎನ್.ಮಹೇಶ್ ಪ್ರತಿನಿಧಿಸುತ್ತಿದ್ದು, ಗ್ರಾಮದಲ್ಲಿ ರುದ್ರಭೂಮಿ ಇಲ್ಲದೆ ಸಾರ್ವಜನಿಕರು ಶವ ಸಂಸ್ಕಾರಕ್ಕೆ ಪರದಾಡುವ ಪರಿಸ್ಥಿತಿ ನಿಯಂತ್ರಿಸಲು ವಿಫಲರಾಗಿದ್ದಾರೆ' ಎಂಬ ಆರೋಪ ಗ್ರಾಮಸ್ಥರಿಂದ ಕೇಳಿಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News