ಎಟಿಎಂ ಕಾರ್ಡ್ ಬದಲಾಯಿಸಿ ಸಾವಿರಾರು ರೂ. ವಂಚನೆ: ಕೇಸ್ ದಾಖಲು

Update: 2018-09-07 14:48 GMT

ಶಿವಮೊಗ್ಗ, ಸೆ. 7: ಅಪರಿಚಿತ ಯುವಕನೋರ್ವ ಎಟಿಎಂ ಕೇಂದ್ರದಲ್ಲಿಯೇ ವ್ಯಕ್ತಿಯೋರ್ವರ ಎಟಿಎಂ ಕಾರ್ಡ್ ಬದಲಾಯಿಸಿ, ಸಾವಿರಾರು ರೂ. ಡ್ರಾ ಮಾಡಿ ವಂಚಿಸಿದ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ. 

ಬಸವನಗುಡಿಯ ನಿವಾಸಿ ರತ್ನಾಕರ್ ಗೊರನಹಳ್ಳಿ ವಂಚನೆಗೊಳಗಾದವರೆಂದು ಗುರುತಿಸಲಾಗಿದೆ. ಅವರ ಖಾತೆಯಿಂದ 39 ಸಾವಿರ ರೂ. ಡ್ರಾ ಮಾಡಲಾಗಿದೆ. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. 

ಘಟನೆ ಹಿನ್ನೆಲೆ: ಸವಳಂಗ ರಸ್ತೆಯ ಕರ್ನಾಟಕ ಬ್ಯಾಂಕ್‍ಗೆ ಸೇರಿದ ಎಟಿಎಂ ಕೇಂದ್ರದಲ್ಲಿ ರತ್ನಾಕರ್ ರವರು ಹಣ ಡ್ರಾ ಮಾಡಲು ತೆರಳಿದ್ದಾರೆ. ಮೊದಲು 500 ರೂ. ಡ್ರಾ ಮಾಡಿಕೊಂಡಿದ್ದಾರೆ. ಎರಡನೇ ಬಾರಿ 500 ರೂ. ಡ್ರಾ ಮಾಡಲು ಮುಂದಾದಾಗ, ಕೊಂಚ ತೊಡಕಾಗಿದೆ. ಈ ವೇಳೆ ಇವರ ಹಿಂದಿದ್ದ ಯುವಕ ಅವಸರ ಮಾಡಿದ್ದು, ಈ ವೇಳೆ ಅವರಿಗೆ ಗೊತ್ತಾಗದ ರೀತಿಯಲ್ಲಿ ಎಟಿಎಂ ಕಾರ್ಡ್ ಅದಲು ಬದಲು ಮಾಡಿದ್ದಾನೆ. ಈ ಮಾಹಿತಿ ಅರಿಯದ ರತ್ನಾಕರ್ ಮನೆಗೆ ಹಿಂದಿರುಗಿದ್ದಾರೆ. ನಂತರ ಎಟಿಎಂ ಕಾರ್ಡ್ ಬಳಸಿ 39 ಸಾವಿರ ರೂ. ಡ್ರಾ ಮಾಡಿಕೊಂಡಿರುವ ಮೆಸೇಜ್ ರತ್ನಾಕರ್ ರವರ ಪತ್ನಿಯ ಮೊಬೈಲ್‍ಗೆ ಬಂದಿದೆ. 

ತಕ್ಷಣವೇ ಅವರು ಈ ವಿಷಯವನ್ನು ರತ್ನಾಕರ್ ರವರಿಗೆ ತಿಳಿಸಿದ್ದು, ಅವರು ಸಂಬಂಧಿಸಿದ ಬ್ಯಾಂಕ್‍ನವರನ್ನು ಸಂಪರ್ಕಿಸಿ ಎಟಿಎಂ ಕಾರ್ಡ್ ಲಾಕ್ ಮಾಡಿದ್ದಾರೆ. ಅಪರಿಚಿತ ಯುವಕನ ವಿರುದ್ದ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರ ತನಿಖೆಯ ನಂತರವಷ್ಟೆ ಈ ವಂಚನೆಯ ಕುರಿತಂತೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News