ಎರಡೂ ಧರ್ಮದವರಿಗೆ ಪೂಜಾ ವಿಧಿ ವಿಧಾನ ನಡೆಸಲು ಅವಕಾಶ: ಹೈಕೋರ್ಟ್ ಸಲಹೆ

Update: 2018-09-07 15:01 GMT

ಬೆಂಗಳೂರು, ಸೆ.7: ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡಾನ್‌ಗಿರಿಯ ದತ್ತಾತ್ರೇಯ ಪೀಠದ ಪೂಜಾ ವಿಧಿ ವಿಧಾನ ನಡೆಸಲು ಎರಡು ಧರ್ಮದ ಅರ್ಚಕರಿಗೆ ಅವಕಾಶ ಕಲ್ಪಿಸಿದರೆ ಕೋಮು ಸೌಹಾರ್ದತೆ ಕಾಪಾಡಬಹುದಲ್ಲವೇ ಎಂದು ಸಲಹೆ ನೀಡಿದ ಹೈಕೋರ್ಟ್, ಈ ಕುರಿತು ಸರಕಾರದೊಂದಿಗೆ ಚರ್ಚಿಸುವಂತೆ ಸರಕಾರಿ ವಕೀಲರಿಗೆ ಸೂಚಿಸಿ ಅರ್ಜಿ ವಿಚಾರಣೆಯನ್ನು ಸೆ.26ಕ್ಕೆ ಮುಂದೂಡಿತು. 

ದತ್ತ ಪೀಠದಲ್ಲಿ ಪೂಜೆ ಸಲ್ಲಿಸಲು ಸೈಯದ್ ಗೌಸ್ ಮೊಹಿದ್ದೀನ್ ಖಾದ್ರಿ ಅವರನ್ನು ನೇಮಕ ಮಾಡಿ ರಾಜ್ಯ ಸರಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಶ್ರೀ ಗುರು ದತ್ತಾತ್ರೇಯ ಪೀಠ ದೇವಸ್ಥಾನ ಸಂವರ್ಧನಾ ಸಮಿತಿ ಅಧ್ಯಕ್ಷ ನಾಗರಾಜ್ ಅರಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ನ್ಯಾಯಪೀಠ, ಈ ಸೂಚನೆ ನೀಡಿದೆ. ಅರ್ಜಿದಾರರ ಪರ ವಕೀಲ ಜಗದೀಶ್ ಬಾಳಿಗ ವಾದಿಸಿ, ದತ್ತಪೀಠದಲ್ಲಿ ಪೂಜಾ ವಿಧಿ ವಿಧಾನ ನೆರವೇರಿಸಲು ಮೌಲ್ವಿಯಾದ ಸೈಯದ್ ಗೌಸ್ ಮೊಹಿದ್ದೀನ್ ಅವರನ್ನು ಸರಕಾರ ನೇಮಿಸಿದೆ. ಅವರೇ ಹಿಂದೂ ಧಾರ್ಮಿಕ ಪೂಜೆ ವಿಧಾನಗಳನ್ನು ನೇರವೇರಿಸುವಂತಾಗಿದೆ. ತಮ್ಮ ಪದ್ಧತಿಯಂತೆ ಪೂಜೆ ಮಾಡುವ ಹಕ್ಕನ್ನು ಹಿಂದೂ ಧರ್ಮದವರು ಹೊಂದಿದ್ದಾರೆ. ಹೀಗಾಗಿ ಹಿಂದೂ ಅರ್ಚಕರನ್ನು ನೇಮಿಸಲು ಕೋರಿದ ಮನವಿಯನ್ನು ಸರಕಾರ ಪರಿಗಣಿಸಿಲ್ಲ ಎಂದು ಪೀಠಕ್ಕೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಸರಕಾರದ ಆದೇಶವು ಒಂದು ಕೋಮಿನವರ ಪರವಾಗಿದೆ ಎಂಬುದು ಮೇಲ್ನೋಟಕ್ಕೆ ತಿಳಿಯಲಿದೆ. ಸರಕಾರ ನೇಮಿಸಿರುವ ವ್ಯಕ್ತಿಯೇ, ದತ್ತಪೀಠಕ್ಕೆ ಭೇಟಿ ನೀಡುವ ಎರಡು ವಿಭಿನ್ನ ಕೋಮಿನವರಿಗೆ ಪೂಜಾ ವಿಧಾನ ನೆರೆವೇರಿಸಿಕೊಡುತ್ತಾರೆ ಎಂಬುದಾಗಿ ಆ ಆದೇಶದಿಂದ ತಿಳಿಯಲಿದೆ. ಇದು ಸಮಂಜಸವಲ್ಲ ಹಾಗೂ ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಅಲ್ಲದೆ, ದತ್ತಪೀಠದಲ್ಲಿ ಕೋಮು ಸೌಹಾರ್ದತೆ ಮೂಡಿಸುವ ಅಗತ್ಯವಿದೆ. ಇದೇ ಉದ್ದೇಶವನ್ನು ಸರಕಾರವೂ ಹೊಂದಿದ್ದರೆ, ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಿರಲು ಸರಕಾರವು ತನ್ನ ಹಿಂದಿನ ಆದೇಶ ಮಾರ್ಪಡಿಸಲು ಸಾಧ್ಯವಿದೆಯೇ? ಎರಡು ಕೋಮುಗಳ ಪದ್ಧತಿಯ ಪೂಜಾ ವಿಧಿ ವಿಧಾನ ನೆರೆವೇರಿಸಿಕೊಡಲು ಎರಡೂ ಕೋಮಿಗೆ ಸೇರಿದವರನ್ನು ನೇಮಿಸುವ ಸಾಧ್ಯತೆ ಬಗ್ಗೆ ಪರಿಶೀಲಿಸಿ ಉಪಾಯವನ್ನು ಸರಕಾರವೇ ಕಂಡುಹಿಡಿಯಬೇಕು. ಈ ಬಗ್ಗೆ ಸರಕಾರದೊಂದಿಗೆ ಚರ್ಚಿಸಿ ಮಾಹಿತಿ ಪಡೆದು ತಿಳಿಸುವಂತೆ ಹೆಚ್ಚುವರಿ ಅಡ್ವೋಕೇಟ್ ಜನರಲ್ ದಿನೇಶ್ ರಾವ್ ಅವರಿಗೆ ತಿಳಿಸಿದರು. ಹಾಗೆಯೇ, ಮುಂದಿನ ವಿಚಾರಣೆಗೆ ದತ್ತಪೀಠದಲ್ಲಿ ಪೂಜಾ ವಿಧಾನ ನೆರವೇರಿಸುವ ಕುರಿತು ರಾಜ್ಯ ಧಾರ್ಮಿಕ ದತ್ತಿ ಮತ್ತು ಮುಜರಾಯಿ ಇಲಾಖೆ ಆಯುಕ್ತರು ಹೊರಡಿಸಿರುವ ಆದೇಶ ಸಂಬಂಧ ಯಾವುದೇ ಕ್ರಮ ಜರುಗಿಸದಂತೆ ರಾಜ್ಯ ಸರಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಸೆ.26ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News