ಶಿವಮೊಗ್ಗ: ಕಳಪೆ ಬೆಲ್ಲ ತಯಾರಿಕೆ; ಆಲೆಮನೆ ಮಾಲಿಕರಿಗೆ ತಲಾ 50 ಸಾವಿರ ರೂ. ದಂಡ

Update: 2018-09-07 15:21 GMT

ಶಿವಮೊಗ್ಗ, ಸೆ. 7: ಭದ್ರಾವತಿ ತಾಲೂಕು ವ್ಯಾಪ್ತಿಯಲ್ಲಿ ಹಳೆಯ ಬೆಲ್ಲ ಮತ್ತು ಸಕ್ಕರೆಯನ್ನು ಉಪಯೋಗಿಸಿ ಬೆಲ್ಲ ತಯಾರಿಸುತ್ತಿದ್ದ ಆಲೆಮನೆಗಳ ಮೇಲೆ ದಾಖಲಿಸಲಾಗಿದ್ದ 6 ಪ್ರಕರಣಗಳಲ್ಲಿ ಆಪಾದಿತರಿಗೆ ತಲಾ 50 ಸಾವಿರ ರೂ. ದಂಡ ವಿಧಿಸಿ ಅಪರ ಜಿಲ್ಲಾಧಿಕಾರಿಗಳು ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ನ್ಯಾಯ ನಿರ್ಣಯಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಭದ್ರಾವತಿ ಆಹಾರ ಸುರಕ್ಷತಾ ಅಧಿಕಾರಿಗಳು 6 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದರು. ವಿಚಾರಣೆ ಬಳಿಕ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ರಮೇಶ್ ಬಿನ್ ಕಾಳೇಗೌಡ, ಶಿವಣ್ಣ ಬಿನ್ ರಾಮಚಂದ್ರಪ್ಪ, ನಾರಾಯಣಪ್ಪ ಬಿನ್ ಲೋಕನಾಥ್, ಜಲೀಲ್ ಸಾಬ್ ಮತ್ತು ಶ್ರೀನಿವಾಸ್ ಎಸ್ ಇವರಿಗೆ ತಲಾ 50ಸಾವಿರ ರೂ. ದಂಡ ವಿಧಿಸಲಾಗಿದೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಂಕಿತ ಅಧಿಕಾರಿ ಡಾ.ಶಂಕರಪ್ಪ ಬಿ.ಎಸ್ ತಿಳಿಸಿದ್ದಾರೆ.

ಕಳೆದ ಮಾರ್ಚ್ ತಿಂಗಳಲ್ಲಿ ಇಂತಹ ನಾಲ್ಕು ಪ್ರಕರಣಗಳಲ್ಲಿ ತಲಾ ಒಂದು ಲಕ್ಷ ರೂ. ದಂಡ ವಿಧಿಸಲಾಗಿತ್ತು. ಇಂತಹ ಕೃತ್ಯಗಳು ಪುನರಾವರ್ತನೆಯಾದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News