ಮಂಡ್ಯ: ಹೆಚ್ಚುವರಿ ಬಸ್ ವ್ಯವಸ್ಥೆಗೆ ಒತ್ತಾಯಿಸಿ ರಸ್ತೆ ತಡೆ; ಸಾರಿಗೆ ಸಚಿವ ತಮ್ಮಣ್ಣ ವಿರುದ್ಧ ಆಕ್ರೋಶ

Update: 2018-09-07 15:37 GMT

ಮಂಡ್ಯ, ಸೆ.7: ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರ ತವರು ಸೇರಿದಂತೆ ಜಿಲ್ಲೆಯ ಎರಡು ಕಡೆ ಹೆಚ್ಚುವರಿ ಸಾರಿಗೆ ಬಸ್‍ಗಳ ಸೌಲಭ್ಯಕ್ಕಾಗಿ ಒತ್ತಾಯಿಸಿ ಶುಕ್ರವಾರ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ರಸ್ತೆತಡೆ ನಡೆಸಿದ್ದಾರೆ.

ಸಚಿವರ ತವರು ಮದ್ದೂರು ತಾಲೂಕಿನ ತೈಲೂರು ಗ್ರಾಮದಲ್ಲಿ ಬಸ್ ತಡೆದು ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ಸುತ್ತಮುತ್ತಲಿನ ಗ್ರಾಮಸ್ಥರು, ಸಚಿವ ತಮ್ಮಣ್ಣ, ಸರಕಾರದ ವಿರುದ್ಧ ಘೋಷಣೆ ಕೂಗಿದರು.

ಮಾರ್ಗದಲ್ಲಿ ಸಾಕಷ್ಟು ಬಸ್‍ಗಳಿಲ್ಲ. ಪ್ರತಿದಿನ ತೊಂದರೆ ಅನುಭವಿಸಬೇಕಾಗಿದೆ. ಸಮಯಕ್ಕೆ ಸರಿಯಾಗಿ ಶಾಲಾಕಾಲೇಜು, ಕಚೇರಿ, ಇತರೆ ಗ್ರಾಮಗಳಿಗೆ ತೆರಳಲು ಆಗುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಖಾಲಿ ಓಡಾಡುವ ಮಾರ್ಗದ ಬಸ್ ಸಂಚಾರ ಕಡಿತಗೊಳಿಸಲಾಗುವುದೆಂದು ಸಚಿವರು ಹೇಳುತ್ತಾರೆ. ಆದರೆ, ಅಗತ್ಯವಿರುವ ಮಾರ್ಗಗಳಲ್ಲಿ ಸಾಕಷ್ಟು ಬಸ್ ಸೌಲಭ್ಯ ಒದಗಿಸಿಲ್ಲ. ಹಲವು ಬಾರಿ ಪ್ರತಿಭಟಿಸಿದರೂ ಸ್ಪಂದಿಸಿಲ್ಲ ಎಂದು ಅವರು ಕಿಡಿಕಾರಿದರು.

ಮಂಡ್ಯ ತಾಲೂಕು ಬನ್ನೂರು ಮಾರ್ಗದ ಮೊತ್ತಹಳ್ಳಿ ಬಳಿ ಬಸ್ ನಿಲುಗಡೆ ಹಾಗೂ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಲು ಒತ್ತಾಯಿಸಿ ಸುಮಾರು ಒಂದುಗಂಟೆ ರಸ್ತೆತಡೆ ನಡೆಯಿತು. ಹಲವು ಭಾರಿ ಇಲಾಖಾಧಿಕಾರಿಗಳು, ಜಿಲ್ಲಾಧಿಕಾರಿಗಳಿಗೆ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದರೂ ಕ್ರಮವಹಿಸಿಲ್ಲ. ಬೇಡಿಕೆ ಈಡೇರಿಸುವವರೆಗೂ ಕದಲುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟುಹಿಡಿದರು.

ಸ್ಥಳಕ್ಕಾಗಮಿಸಿದ ಸಾರಿಗೆ ಡಿಪೋ ಮ್ಯಾನೇಜರ್, ಗ್ರಾಮದಲ್ಲಿ ಸಾರಿಗೆ ಬಸ್‍ಗಳ ನಿಲುಗಡೆ ಸೇರಿದಂತೆ ಮಾರ್ಗದಲ್ಲಿ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ ನಂತರ, ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News